ಗಂಗಾವತಿ: ಎಡದಂಡೆ ಕಾಲುವೆ ದುರಸ್ತಿ ಕಾರ್ಯದಲ್ಲಿ ನಿಯಮ ಉಲ್ಲಂಘಿಸಿ ಕಾಮಗಾರಿ ನಡೆಸುವ ಕುರಿತು ಆರೋಪದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶನಿವಾರ ಕಾರ್ಯಪಾಲಕ ಅಭಿಯಂತರ ರಾಜಶೇಖರ ಶೆಟ್ಟರ್ ಭೇಟಿ ನೀಡಿ ಯೋಜನೆಯಂತೆ ಕಾಮಗಾರಿ ನಿರ್ವಹಿಸಬೇಕು. ಸ್ಥಳದಲ್ಲೇ ಮುಕ್ಕಾಂ ಹೂಡಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಕಿರಿಯ ಅಭಿಯಂತರ ಅಮರೇಶ ಅವರನ್ನು ತರಾಟೆ ತೆಗೆದುಕೊಂಡರು. ಕಾಲುವೆಯ ಎಡ-ಬಲಭಾಗವನ್ನು ಹೊಸ ಮರಂ ಹಾಕಿ ಬಲಪಡಿಸಿ ಲೈನಿಂಗ್ ಹಾಕಬೇಕು. ನಿಯಮ ಉಲ್ಲಂಘಿಸಿದರೆ ಸರಕಾರಕ್ಕೆ ವರದಿ ಮಾಡಲಾಗುತ್ತದೆ. ಬಿಲ್ ತಡೆಯಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸ್ಥಳದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ.ಆರ್. ಕಂದಕೂರು, ಕಿರಿಯ ಅಭಿಯಂತರ ಅಮರೇಶ, ಟೆಂಡರ್ ಪಡೆದ ಗುತ್ತಿಗೆದಾರರ ಖಾಸಗಿ ಅಭಿಯಂತರ ಇದ್ದರು.
ರೈತರ ನಿಯೋಗ ಭೇಟಿ: ಕಾಲುವೆ ಕಾಮಗಾರಿ ಯೋಜನೆಯಂತೆ ನಡೆದಿಲ್ಲ ಎಂಬ ‘ಉದಯವಾಣಿ’ ವರದಿ ಹಿನ್ನೆಲೆಯಲ್ಲಿ ರೈತ ಮುಖಂಡರಾದ ಟಿ. ಸತ್ಯನಾರಾಯಣ, ಸಿ. ರಾಮಕೃಷ್ಣ, ಮರಿವಾಡ ಸತ್ಯನಾರಾಯಣ ಸೇರಿ ಪ್ರಮುಖ ರೈತರು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟದ ಕಾಮಗಾರಿ ಮಾಡಬೇಕು. ಇಲ್ಲದಿದ್ದರೆ ಜಲಸಂಪನ್ಮೂಲ ಸಚಿವರಿಗೆ ದಾಖಲೆ ಜತೆ ದೂರು ನೀಡಲಾಗುತ್ತದೆ. ಕಾಲುವೆಯ 2 ಭಾಗಗಳನ್ನು ಉತ್ತಮ ಮರಂ ಮಣ್ಣಿನಿಂದ ಬಲಗೊಳಿಸಿ ಟೆವೆಲ್ಸ್ ನಿರ್ಮಿಸಿ ಲೈನಿಂಗ್ ಹಾಕಬೇಕು. ಕಾಲುವೆಯಲ್ಲಿ ನೀರು ನಿಲ್ಲಿಸಿ ಮೂರು ತಿಂಗಳು ಕಳೆದ ನಂತರ ಕಾಮಗಾರಿ ನಡೆಸಲಾಗುತ್ತಿದೆ. ಗುಣಮಟ್ಟ ಕಾಪಾಡಲು ಹೇಗೆ ಸಾಧ್ಯ. ಹಗಲು ರಾತ್ರಿ ಕಾಮಗಾರಿ ನಿರ್ವಹಿಸಿ ಗುಣಮಟ್ಟದ ಕಾಮಗಾರಿ ಮಾಡಬೇಕೆಂದು ಹೇಳಿದರು.