ಬಾಗಲಕೋಟೆ: ಕಬ್ಬು ಪೂರೈಸಿದ ರೈತರಿಗೆ ಬಾಕಿ ಹಣ ಕೊಡದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಾಯಕರ ಒಡೆತನದ ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ನೋಟಿಸ್ ಜಾರಿಗೊಳಿಸಿದ್ದು, ಏಳು ದಿನಗಳ ಒಳಗಾಗಿ ರೈತರಿಗೆ ಬಾಕಿ ಹಣ ಕೊಡುವಂತೆ ಗಡುವು ವಿಧಿಸಿದ್ದಾರೆ.
ಜಿಲ್ಲೆಯ ಒಟ್ಟು 11 ಕಾರ್ಖಾನೆಗಳ ಪೈಕಿ ಎರಡು ಕಾರ್ಖಾನೆಗಳು ಮಾತ್ರ ರೈತರಿಗೆ ಎಫ್‌ಆರ್‌ಪಿ ಅನ್ವಯ ಶೇ.100 ಶುಲ್ಕ ಪಾವತಿಸಿವೆ. ಉಳಿದ 9 ಕಾರ್ಖಾನೆಗಳು ಜೂನ್ 15ರವರೆಗೆ ಸುಮಾರು 280 ಕೋಟಿ ಬಾಕಿ ಉಳಿಸಿಕೊಂಡಿವೆ.
ಕಾಂಗ್ರೆಸ್ ಮುಖಂಡ ಶಾಮನೂರ ಶಿವಶಂಕರಪ್ಪ ಕುಟುಂಬದ ಒಡೆತನಕ್ಕೆ ಸೇರಿದ ಮುಧೋಳ ತಾಲೂಕು ಉತ್ತೂರಿನ ಇಂಡಿಯನ್ ಕೇನ್ ಪಾವರ್ ಲಿಮಟೆಡ್ (ಐಸಿಪಿಎಲ್), ಬಿಜೆಪಿ ಮುಖಂಡ ರಾಮಣ್ಣ ತಳೇವಾಡ ಅಧ್ಯಕ್ಷರಾಗಿರುವ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ, ಬೀಳಗಿ ಬಿಜೆಪಿ ಶಾಸಕ ಮುರಗೇಶ ನಿರಾಣಿ ಒಡೆತನದಲ್ಲಿರುವ ಮುಧೋಳದ ನಿರಾಣಿ ಶುಗರ್, ಹಿಪ್ಪರಗಿಯ ಸಾಯಿಪ್ರಿಯಾ ಶುಗರ್, ಜಿಪಂ ಮಾಜಿ ಅಧ್ಯಕ್ಷ- ಕಾಂಗ್ರೆಸ್ ಮುಖಂಡ ಶಿವಕುಮಾರ ಮಲಘಾಣ ಅಧ್ಯಕ್ಷತೆಯ ಸಾವರಿನ್ ಶುಗರ್, ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ಎಸ್.ಆರ್. ಪಾಟೀಲ ಸಂಸ್ಥಾಪಕರಾಗಿರುವ ಬಾಡಗಂಡಿಯ ಬೀಳಗಿ ಶುಗರ್, ಜಮಖಂಡಿಯ ಬಿಜೆಪಿ ಮುಖಂಡ ಜಗದೀಶ ಗುಡಗುಂಟಿಮಠ ಅವರಿಗೆ ಸೇರಿದ ಸಿದ್ದಾಪುರದ ಪ್ರಭುಲಿಂಗೇಶ್ವರ ಶುಗರ್, ಬೀಳಗಿ ತಾಲೂಕು ಕುಂದರಗಿ ಜಮ್ ಶುಗರ್ಸ್, ಮುಧೋಳ ತಾಲೂಕು ಸಮೀರವಾಡಿಯ ಗೋದಾವರಿ ಶುಗರ್ ಸೇರಿ ಒಟ್ಟು 9 ಕಾರ್ಖಾನೆಗಳು 280 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ.
ಡಿಸಿ ನೋಟಿಸ್: ಎಫ್‌ಆರ್‌ಪಿ ಅನ್ವಯ ಕಬ್ಬು ಪೂರೈಸಿದ ರೈತರಿಗೆ 14 ದಿನಗಳ ಒಳಗಾಗಿ ಘೋಷಿತ ದರ ಪಾವತಿ ಮಾಡಬೇಕು. ಬಾಕಿ ಪಾವತಿ ಮಾಡದ ಸಕ್ಕರೆ ಕಾರ್ಖಾನೆಗಳ ಸಕ್ಕರೆ ಹರಾಜು ಹಾಕಿ, ರೈತರಿಗೆ ಕಬ್ಬಿನ ಹಣ ಪಾವತಿಸಲು ಜಿಲ್ಲಾಡಳಿತಕ್ಕೆ ಅವಕಾಶವಿದೆ. ಹೀಗಾಗಿ ರಾಜ್ಯ ಕಬ್ಬು ಆಯುಕ್ತರ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್, ಜಿಲ್ಲೆಯ 9 ಕಾರ್ಖಾನೆಗಳಿಗೂ ಸೋಮವಾರ ನೋಟಿಸ್ ಜಾರಿ ಮಾಡಿದ್ದಾರೆ.
ಏನಿದೆ ನೋಟಿಸ್‌ನಲ್ಲಿ?: ರೈತರಿಗೆ ಬಾಕಿ ಕೊಡಬೇಕಿರುವ ಎಲ್ಲ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರತ್ಯೇಕ ನೋಟಿಸ್ ನೀಡಿದ್ದು, ರೈತರು ಪೂರೈಸಿದ ಕಬ್ಬಿನ ಬಾಕಿ ಪೂರೈಕೆ ಏಳು ದಿನಗಳ ಒಳಗಾಗಿ ಕ್ರಮ ಕೈಗೊಂಡು, ವರದಿ ನೀಡಬೇಕು. ಇಲ್ಲದಿದ್ದರೆ ಬಾಕಿ ಹಣವನ್ನು ಭೂ ಕಂದಾಯ ಬಾಕಿ ಎಂದು ವಸೂಲಿ ಮಾಡಲು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರ ನಿರ್ದೇಶನವಿದೆ. ಹೀಗಾಗಿ ಕಾರ್ಖಾನೆಗಳು, ನೋಟಿಸ್ ತಲುಪಿದ 7 ದಿನಗಳ ಒಳಗಾಗಿ ಬಾಕಿ ಹಣ ಪಾವತಿಸಬೇಕು. ಇಲ್ಲದಿದ್ದರೆ ಕರ್ನಾಟಕ ಭೂ ಕಂದಾಯ ಕಾಯಿದೆ-1964ರಡಿ ಬಾಕಿ ಹಣ ವಸೂಲಾತಿಗೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ 2018-19ನೇ ಸಾಲಿನಲ್ಲಿ ಜಿಲ್ಲೆಯ 11 ಸಕ್ಕರೆ ಕಾರ್ಖಾನೆಗಳು ಒಟ್ಟು 98,84,052 ಮೆಟ್ರಿಕ್ ಟನ್ ಕಬ್ಬು ನುರಿಸಿದ್ದು, ಎಫ್‌ಆರ್‌ಪಿ ಅನ್ವಯ 2898 ಕೋಟಿ ರೂ. ಪಾವತಿ ಮಾಡಬೇಕಿತ್ತು. ಅದರಲ್ಲಿ 280 ಕೋಟಿ ಬಾಕಿ ಉಳಿಸಿಕೊಂಡಿವೆ.