Advertisement

ನಿತ್ಯ 150 ಕೋವಿಡ್ ಪರೀಕ್ಷಾ ವರದಿಗೆ ಸೂಚನೆ

06:49 AM Jun 23, 2020 | Suhan S |

ಗದಗ: ಜಿಲ್ಲೆಯಲ್ಲಿ ದಿನ ಕಳೆದಂತೆ ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದು ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗೃತರಾಗಬೇಕು. ಜತೆಗೆ ಪ್ರತಿದಿನ 150 ಜನರ ಕೋವಿಡ್ ಪರೀಕ್ಷಾ ವರದಿ ಮಾಡುವಂತೆ ವೈದ್ಯರಿಗೆ ಸೂಚಿಸಿದ್ದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿತರು ಹಾಗೂ ವಲಸಿಗರ ರಕ್ಷಣೆ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ. ಜನರ ಕ್ವಾರಂಟೈನ್‌ಗಾಗಿ ಜಿಲ್ಲೆಯ ಸಮುದಾಯ ಭವನ, ಕಲ್ಯಾಣ ಮಂಟಪ, ವಸತಿ ಶಾಲೆಗಳು, ಕ್ರೀಡಾಂಗಣಗಳು ಸೇರಿದಂತೆ 278 ಕೇಂದ್ರಗಳನ್ನು ಗುರುತಿಸಲಾಗಿದೆ. ಅವಶ್ಯಕತೆಗನುಗುಣವಾಗಿ ಅವುಗಳನ್ನು ಬಳಸಿಕೊಳ್ಳಲಾಗುವುದು ಎಂದರು.

ಇತ್ತೀಚಿಗೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪ್ರಕರಣಗಳು ಕಂಡು ಬರುತ್ತಿರುವುದರಿಂದ ಗ್ರಾಮಸ್ಥರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಈವರೆಗಿನ 18 ನಿಷೇಧಿತ ಪ್ರದೇಶಗಳಲ್ಲಿ 3 ಪ್ರದೇಶಗಳನ್ನು ಸಾಮಾನ್ಯ ವಲಯಗಳು ಎಂದು ಘೋಷಿಸಲಾಗಿದೆ.

ಮುಂಬೈನಿಂದ ರೈಲು ಮೂಲಕ ಜೂ.22ರವರೆಗೆ ನಗರಕ್ಕೆ ಆಗಮಿಸಿದ 982 ಪ್ರಯಾಣಿಕರಲ್ಲಿ 367 ಜನ ಜಿಲ್ಲೆಗೆ ಸೇರಿದವರಾಗಿದ್ದು, ಅವರಲ್ಲಿ 316 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಹಾಗೂ 51 ಜನರನ್ನು ಮನೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. 367 ಜನರ ಪೈಕಿ 14 ಜನರಲ್ಲಿ ಕೋವಿಡ್‌-19 ಸೋಂಕು ಧೃಡಪಟ್ಟಿದೆ. ಜಿಲ್ಲೆಯಲ್ಲಿದ್ದ 466 ಬೇರೆ ರಾಜ್ಯದ ಕಾರ್ಮಿಕರನ್ನು ಆಯಾ ರಾಜ್ಯಗಳಿಗೆ ಸುರಕ್ಷಿತವಾಗಿ ಕಳುಹಿಸಿಕೊಡಲಾಗಿದೆ ಎಂದರು.

ಡಿಸಿ ಎಂ.ಜಿ.ಹಿರೇಮಠ ಮಾತನಾಡಿ, ಜೂ.25ರಿಂದ ಜುಲೈ 4 ರವರೆಗೆ ಜರುಗಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಕಂಟೇನ್ಮೆಂಟ್‌ ಪ್ರದೇಶದ 33 ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಾಹನದಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆತರಲಾಗುತ್ತದೆ. ಅವರಿಗಾಗಿ ಪ್ರತ್ತೇಕ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗುತ್ತದೆ. ಅದರಂತೆ ಸಾರಿಗೆ ವ್ಯವಸ್ಥೆಯಿಲ್ಲದ ಹಳ್ಳಿಗಳಿಗೆ 31 ಬಸ್‌ಗಳನ್ನು ಓಡಿಸುವಂತೆ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ವಿವರಿಸಿದರು.

Advertisement

ಜಿಪಂ ಸಿಇಒ ಡಾ|ಆನಂದ್‌ ಕೆ., ಎಸ್‌ಪಿ ಯತೀಶ ಎನ್‌., ಎಡಿಸಿ ಸತೀಶ್‌ ಕುಮಾರ್‌ ಎಂ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next