Advertisement

ಪರೀಕ್ಷೆ ಸುಸೂತ್ರ ನಡೆಸಲು ಸೂಚನೆ

03:12 PM Jun 19, 2018 | |

ಬೀದರ: ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ಜೂ.21ರಿಂದ 28ರ ವರೆಗೆ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲ್ಲಿದ್ದು, ಪರೀಕ್ಷೆಯನ್ನು ಸುಸೂತ್ರ ಮತ್ತು ಪಾರರ್ಶಕವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಪರೀಕ್ಷಾ ಕೇಂದ್ರಗಳಲ್ಲಿ ಆಸನ ವ್ಯವಸ್ಥೆ, ಪೀಠೊಪಕರಣ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ವಿದ್ಯುತ್‌ ಸಂಪರ್ಕ ಇರುವಂತೆ ನೋಡಿಕೊಂಡು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅಡಚಣೆಗಳು ಉಂಟಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡುವುದು, ಅಭ್ಯರ್ಥಿಯ ಬದಲು ಇತರರು ಹಾಜರಾಗುವುದು ಇಂತಹ
ಘಟನೆಗಳಿಗೆ ಆಸ್ಪದ ನೀಡಬಾರದು. ಜಿಲ್ಲಾ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ತಂಡಗಳನ್ನು ರಚಿಸಿ ಪರೀಕ್ಷಾ ಕೇಂದ್ರಗಳನ್ನು ಪರಿಶೀಲಿಸಬೇಕು. ಪರೀಕ್ಷೆಗೆ ನಿಯೋಜನೆಗೊಂಡ ಮುಖ್ಯ ಅಧೀಕ್ಷಕರು, ಕಸ್ಟೋಡಿಯನ್‌ಗಳ ಸಭೆ ನಡೆಸಿ ಪರೀಕ್ಷಾ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ವಹಿಸಬೇಕು ಎಂದು ಸೂಚಿಸಿದರು.

ಪ್ರಶ್ನೆಪತ್ರಿಕೆಗಳನ್ನು ಸ್ವೀಕರಿಸುವಾಗ, ವಿತರಿಸುವಾಗ ಮತ್ತು ಸಾಗಾಣಿಕೆ ಮಾಡುವಾಗ ಸೋರಿಕೆಯಾಗದಂತೆ
ಮುನ್ನೆಚ್ಚರಿಕೆ ವಹಿಸಬೇಕು. ಪರೀಕ್ಷೆಯ ದಿನದಂದು ವೀಕ್ಷಕರಾಗಿ ನಿಯೋಜನೆಯಾದ ತಾಲೂಕು ಮತ್ತು
ಜಿಲ್ಲಾಮಟ್ಟದ ಅಧಿಕಾರಿಗಳು ಪರೀಕ್ಷೆ ಪ್ರಾರಂಭವಾಗುವ ಸಮಯದಿಂದ ಮುಕ್ತಾಯದವರೆಗೆ ಕಡ್ಡಾಯವಾಗಿ
ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು ಎಂದು ನಿರ್ದೇಶನ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಉಮೇಶ ಶಿರಹಟ್ಟಿಮಠ ಮಾತನಾಡಿ, ಜಿಲ್ಲೆಯಾದ್ಯಂತ ಒಟ್ಟು 8,720 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಔರಾದನಲ್ಲಿ 938, ಬಸವಕಲ್ಯಾಣದಲ್ಲಿ 2,598, ಭಾಲ್ಕಿಯಲ್ಲಿ 1,031, ಬೀದರನಲ್ಲಿ 2,415 ಹಾಗೂ ಹುಮನಾಬಾದನಲ್ಲಿ 1,738 ವಿದ್ಯಾರ್ಥಿಗಳಿದ್ದಾರೆ. ಈ ಪರೀಕ್ಷೆಗಾಗಿ ಜಿಲ್ಲೆಯಲ್ಲಿ ಒಟ್ಟು 40 ಪರೀಕ್ಷಾ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ. ಈ ಪೈಕಿ 21 ಸರ್ಕಾರಿ,15 ಅನುದಾನಿತ ಹಾಗೂ 4 ಅನುದಾನ ರಹಿತ ಕೇಂದ್ರಗಳಿವೆ. ಅದರಲ್ಲಿ 23 ಕ್ಲಸ್ಟರ್‌ ಸಹಿತ, 17 ಕ್ಲಸ್ಟರ್‌ ರಹಿತ ಹಾಗೂ 6 ಖಾಸಗಿ ಅಭ್ಯರ್ಥಿಗಳ ಕೇಂದ್ರಗಳಿವೆ. ಜೊತೆಗೆ 6 ಸೂಕ್ಷ  ಪರೀಕ್ಷಾ ಕೇಂದ್ರಗಳೆಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

Advertisement

ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ 5 ಜಿಲ್ಲಾ ಮಟ್ಟದ ವೀಕ್ಷಣ ತಂಡಗಳು ಹಾಗೂ ಪ್ರತಿ ತಾಲೂಕಿಗೆ 5-6 ತಂಡಗಳನ್ನು ನಿಯೋಜಿಸಲಾಗಿದೆ. ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರು, ಹಿರಿಯ ಶಿಕ್ಷಕರನ್ನು ಸೀಟಿಂಗ್‌ ಸ್ಕ್ವಾಡ್‌ ಗಳು ಮತ್ತು ಕಸ್ಟೋಡಿಯನ್‌ಗಳಾಗಿ ನಿಯೋಜಿಸಲಾಗಿದೆ. 

ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಜಿಲ್ಲಾ ಖಜಾನೆ ಅಧಿಕಾರಿ ಅಶೋಕ ವಡಗಾವೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next