ಮಂಗಳೂರು: ದ.ಕ. ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಂತೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು ಮಾರ್ಗಸೂಚಿ ಪಾಲನೆ ಮಾಡದ ಕಾಲೇಜ್‌ಗಳನ್ನು ಪತ್ತೆ ಹಚ್ಚಿ ನೋಟಿಸ್ ನೀಡಲು ಮುಂದಾಗಿದೆ.
ಕಳೆದ 15 ದಿನಗಳಲ್ಲಿ ದ.ಕ. ಜಿಲ್ಲೆಯ 29 ಕಾಲೇಜುಗಳ 627 ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಈ ಪೈಕಿ 327 ಮಂದಿ ಕೇರಳ ಭಾಗದವರು. ಉಳಿದಂತೆ ದ.ಕ. ಸೇರಿದಂತೆ ಹೊರ ಜಿಲ್ಲೆ, ರಾಜ್ಯಗಳ ವಿದ್ಯಾರ್ಥಿಗಳು ಸೇರಿದ್ದಾರೆ. ಜಿಲ್ಲೆಯ ಕಾಲೇಜುಗಳಲ್ಲಿ/ಹಾಸ್ಟೆಲ್‌ಗಳಲ್ಲಿ ಕೊರೊನಾ ಮಾರ್ಗಸೂಚಿ ಪಾಲನೆ ಕಡ್ಡಾಯ ಎಂದು ಆರೋಗ್ಯ ಇಲಾಖೆ ಈಗಾಗಲೇ ಸೂಚನೆ ನೀಡಿದ್ದು, ಇದೀಗ ಪಾಲನೆ ಮಾಡದ ಕಾಲೇಜುಗಳಿಗೆ ಎಚ್ಚರಿಕೆ ನೀಡಿ ನೋಟಿಸ್ ನಿರ್ಧರಿಸಿದೆ. ಸುಳ್ಯದ ಖಾಸಗಿ ಕಾಲೇಜ್‌ವೊಂದರಲ್ಲಿ ಕಳೆದ ಮೂರು ವಾರಗಳಲ್ಲಿ 77 ಮಂದಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಬಾಧಿಸಿದೆ.
ಕೇರಳ ಸೇರಿದಂತೆ ಹೊರ ರಾಜ್ಯದ ಪಾರಾಮೆಡಿಕಲ್ ವಿದ್ಯಾರ್ಥಿಗಳಲ್ಲಿ ಕೊರೊನಾ ಪ್ರಕರಣ ಕಾಣಿಸಿಕೊಳ್ಳುತ್ತಿದ್ದು, ಅವರ ಪ್ರಾಥಮಿಕ ಸಂಪರ್ಕ ಮತ್ತು ದ್ವಿತೀಯ ಸಂಪರ್ಕವನ್ನು ತಪಾಸಣೆ ಮಾಡಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಹೆಚ್ಚಿನ ಕಾಲೇಜುಗಳಿದ್ದು, ಹೊರ ಜಿಲ್ಲೆ, ರಾಜ್ಯಗಳಿಂದ ಹೆಚ್ಚಿನ ಮಂದಿ ವಿದ್ಯಾರ್ಜನೆಗೆ ಬರುತ್ತಾರೆ. ಹೀಗೆ ಬರುವಾಗ 72 ಗಂಟೆಗಳ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ತರುತ್ತಿದ್ದರೂ ಇಲ್ಲಿ ಕ್ವಾರಂಟೈನ್ ಆದ ಬಳಿಕ ಅವರಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದೆ.
ಇಳಿಕೆಯಾದ ಪಾಸಿಟಿವಿಟಿ ದರ :
ದ.ಕ.ದಲ್ಲಿ ಎರಡು ದಿನಗಳಲ್ಲಿ ಏರಿಕೆ ಕಂಡಿದ್ದ ಕೋವಿಡ್ ಪಾಸಿಟಿವಿಟಿ ದರ ಬುಧವಾರ ಶೇ. 2.04ಕ್ಕೆ ಇಳಿಕೆಯಾಗಿದೆ. ಕಳೆದ ಎರಡು ದಿನಗಳಿಂದ ಐಸಿಎಂಆರ್ ಪೊರ್ಟಲ್ ಸಮಸ್ಯೆಯಿಂದ ಆರೋಗ್ಯ ಇಲಾಖೆ ಪಾಸಿಟಿವಿಟಿ ದರ ನೀಡುತ್ತಿರಲಿಲ್ಲ. ಆದರೆ ಹೆಚ್ಚಿನ ಪರೀಕ್ಷೆಗಳಿಂದ ಪಾಸಿಟಿವ್ ದರ ಕೂಡ ಏರಿಕೆ ಕಂಡಿತ್ತು. ಆ. 23ರಂದು ಜಿಲ್ಲೆಯಲ್ಲಿ ಶೇ.2.69 ಪಾಸಿಟಿವಿಟಿ ದರ ಇದ್ದರೆ ಆ. 24ರಂದು ಶೇ.3.27ಕ್ಕೆ ತಲುಪಿತ್ತು.