Advertisement

ಚಿತ್ರದುರ್ಗ ಡೀಸಿ, ಎಸ್ಪಿಗೆ ನೋಟಿಸ್‌

08:32 AM Nov 08, 2017 | Team Udayavani |

ಚಿತ್ರದುರ್ಗ: ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ನ.10ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದಕ್ಕೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸಾ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ್‌ ಜೋಶಿ ಅವರಿಗೆ ನೋಟಿಸ್‌ ಜಾರಿ ಮಾಡಿದೆ. ಅಲ್ಲದೆ ನ.8ರಂದು ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಆದೇಶಿಸಿದೆ.

Advertisement

ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿಯ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ನಗರದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ, ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ್‌ ಸಿಂಹ, ಬಿಜೆಪಿ ಶಾಸಕ ಸುನೀಲ್‌ಕುಮಾರ್‌, ಮಂಗಳೂರಿನ ಪ್ರಗತಿಪರ ಚಿಂತಕ ರಹೀಂ ಉಚ್ಚಿಲ, ಸಾಮಾಜಿಕ ಮತ್ತು ರಾಜಕೀಯ ವಿಶ್ಲೇಷಕ ರಾಬರ್ಟ್‌ ರೊಸಾರಿಯೋ ಅವರಿಂದ ವಿಚಾರಗೋಷ್ಠಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಮುಂಜಾಗ್ರತಾ ಕ್ರಮವಾಗಿ ನ.7ರಿಂದ 10ರವರೆಗೆ ಚಿತ್ರದುರ್ಗ ನಗರ ಸೇರಿ ಜಿಲ್ಲಾದ್ಯಂತ ನಿಷೇಧಾಜ್ಞೆ
ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಘೋಷಿಸಿದ್ದರು.

ಪ್ರತಿಭಟನೆ ಮತ್ತು ವಿಚಾರಗೋಷ್ಠಿ ಹತ್ತಿಕ್ಕುವ ದೃಷ್ಟಿಯಿಂದ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಮೊರೆ ಹೋಗಿದ್ದರು. ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್‌.ಬಿ. ವಸ್ತ್ರಮಠ ಅವರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು. ಬಿಜೆಪಿ ನಾಯಕರಿಗೆ ಸುದ್ದಿಗೋಷ್ಠಿ ನಡೆಸಲು ಅನುಮತಿ ನೀಡಿದ ನ್ಯಾಯಾ ಧೀಶರು, ಅಸಂವಿಧಾನಿಕ ಭಾಷೆ ಬಳಸುವಂತಿಲ್ಲ ಮತ್ತು ಸುದ್ದಿಗೋಷ್ಠಿ ಸಂದರ್ಭದಲ್ಲಿ ಪೊಲೀಸರು ಯಾರನ್ನೂ ಬಂಧಿಸುವಂತಿಲ್ಲ ಎಂದು ಮೌಖೀಕವಾಗಿ ಆದೇಶ ನೀಡಿದರು ಎಂದು ಬಿಜೆಪಿ ಪರ ವಕೀಲ ಉಮೇಶ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಗೆ ಪೊಲೀಸರ ಅಡ್ಡಿ: ಜಿಲ್ಲಾ ನ್ಯಾಯಾಧೀಶರು ವಿಚಾರಣೆ ಮುಂದೂಡುತ್ತಿದ್ದಂತೆ ಸಂಸದ ಪ್ರತಾಪ್‌ ಸಿಂಹ ಹಾಗೂ ಶಾಸಕ ಸುನೀಲ್‌ಕುಮಾರ್‌ ಸುದ್ದಿಗೋಷ್ಠಿ ನಡೆಸಲು ಮುಂದಾದರು. ಆಗ ಅವರನ್ನು ನ್ಯಾಯಾಲಯದ ಆವರಣದಲ್ಲೇ ತಡೆದ ಎಸ್ಪಿ ಶ್ರೀನಾಥ್‌ ಜೋಶಿ, ನ್ಯಾಯಾಲಯ ನೀಡಿರುವ ಸೂಚನೆಯಂತೆ ಬಿಜೆಪಿ ಜಿಲ್ಲಾಧ್ಯಕ್ಷರು ಸುದ್ದಿಗೋಷ್ಠಿ ನಡೆಸಲಿ. ನಿಮಗೆ ಅವಕಾಶ ನೀಡುವುದಿಲ್ಲ. ದಯಮಾಡಿ ಸಹಕರಿಸಿ ಎಂದು ಸಂಸದ ಪ್ರತಾಪ್‌ ಸಿಂಹ ಅವರಲ್ಲಿ ಮನವಿ ಮಾಡಿದರು.

ಇದರಿಂದ ಸಿಟ್ಟಿಗೆದ್ದ ಸಂಸದ ಪ್ರತಾಪ್‌ ಸಿಂಹ, ಪ್ರಜಾತಾಂತ್ರಿಕ ವ್ಯವಸ್ಥೆಗೆ ಧಕ್ಕೆ ತರಬೇಡಿ, ದಯವಿಟ್ಟು ಅವಕಾಶ ಮಾಡಿಕೊಡಿ ಎಂದು ಪಟ್ಟು ಹಿಡಿದರು. ಅರ್ಧ ಗಂಟೆ ವಾದ-ಪ್ರತಿವಾದ ನಂತರ ಪೊಲೀಸ್‌ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಲು ಒಪ್ಪಿಗೆ ನೀಡಿದರು. ಇಷ್ಟೆಲ್ಲ ಬೆಳವಣಿಗೆ ಹಾಗೂ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ನಗರದ ವೀರಸೌಧದಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಕಾರ್ಯಕಾರಿಣಿ ಸಭೆ ನಡೆದಿದ್ದು ಚರ್ಚೆಗೆ ಗ್ರಾಸವಾಗಿದೆ.

Advertisement

ಟಿಪ್ಪು ಬದಲು ಶಿಶುನಾಳ ಶರೀಫ್ ಜಯಂತಿ ಆಚರಿಸಲಿ: ಚಿಮೂ
ಬೆಂಗಳೂರು: ರಾಜ್ಯ ಸರ್ಕಾರ ಹಿಂದೂ ವಿರೋಧಿ ಟಿಪ್ಪುಸುಲ್ತಾನ್‌ ಜಯಂತಿ ಆಚರಿಸುವ ಬದಲು ಸಂತ ಶಿಶುನಾಳ ಶರೀಫ್ ಅವರಂತಹ ವ್ಯಕ್ತಿಗಳ ಜಯಂತಿ ಆಚರಿಸಲಿ ಎಂದು ಹಿರಿಯ ಸಂಶೋಧಕ ಡಾ.ಚಿದಾನಂದ ಮೂರ್ತಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ನಗರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಅವರ “ಹಿಂದೂ ವಿರೋಧಿ ಟಿಪ್ಪು ಸುಲ್ತಾನ್‌’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ನಾವು ಮುಸ್ಲಿಂ ವಿರೋಧಿಗಳಲ್ಲ. ಆದರೆ ಟಿಪ್ಪುಸುಲ್ತಾನ್‌ ಜಯಂತಿ ವಿರೋಧಿಸುತ್ತೇವೆ ಎಂದು ಹೇಳಿದರು.

ಟಿಪ್ಪು ಒಬ್ಬ ಮತಾಂಧನಾಗಿದ್ದ. ಹಿಂದೂ ಗಳಲ್ಲದೆ, ಕ್ರಿಶ್ಚಿಯನ್‌ ಬಾಂಧವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ. ಈತನ ಹಿಂದೂ ವಿರೋಧಿ ಧೋರಣೆಗಳು ಇತಿಹಾಸ ಪುಸ್ತಕಗಳಲ್ಲಿ ದಾಖಲಾಗಿವೆ. ಹಿಟ್ಲರ್‌ಗೆ ಹೋಲಿಕೆ ಯಾಗುವಂತ ವ್ಯಕ್ತಿಯ ಜಯಂತಿಯನ್ನು ಸರ್ಕಾರ ವೋಟ್‌ ಬ್ಯಾಂಕ್‌ ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ. ಇಂತಹ ಜಯಂತಿಯನ್ನು ತೀವ್ರವಾಗಿ ವಿರೋಧಿಸುವುದಾಗಿ ಹೇಳಿದರು.

ಬಿಜೆಪಿ ಮುಖಂಡ ಅನ್ವರ್‌ ಮಾನಪಾಡಿ, ಹಿರಿಯ ಪತ್ರಕರ್ತ ಬಾಬು ಕೃಷ್ಣಮೂರ್ತಿ, ಮುಸ್ಲಿಂ ಸಮುದಾಯದ ವೋಟಿನ ಮೇಲೆ ಕಣ್ಣಿಟ್ಟಿರುವ ಸರ್ಕಾರ ಇತಿಹಾಸವನ್ನೇ ತಿರುಚಿ ಟಿಪ್ಪುವನ್ನು ವೈಭವೀಕರಿ ಸುವ ಕಾರ್ಯಕ್ಕೆ ಕೈಹಾಕಿದೆ ಎಂದರು. ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌, ಬ್ರಿಟಿಷರೂ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆಂದ ಮಾತ್ರಕ್ಕೆ ಅವರ ಜಯಂತಿ ಆಚರಿಸಲು ಸಾಧ್ಯವೇ ಎಂದು ಪ್ರಶ್ನಿಸಿ ದರು. ಟಿಪ್ಪು ಜಯಂತಿ ವಿರೋಧಿಸಿ ಹಿಂದೂ ಸಂಘಟನೆಗಳು ಹಮ್ಮಿಕೊಂಡಿರುವ ಪ್ರತಿಭಟನೆಗೆ
ಶ್ರೀರಾಮಸೇನೆ ಬೆಂಬಲಿಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next