ವಿಜಯಪುರ: ಲೋಕಸಭಾ ಚುನಾವಣೆಯಲ್ಲಿ ಮತದಾನ ಚಲಾಯಿಸುವ ಹಕ್ಕು ನೀಡಲು 18 ವರ್ಷ ಪೂರೈಸಿರುವ ನೂತನ ಯುವ ಮತದಾರರನ್ನು ಗುರುತಿಸುವ ಕೆಲಸವಾಗಬೇಕಿದೆ. ಇದಲ್ಲದೇ ಮತದಾರರ ಚೀಟಿ ಹೊಂದಿರುವ ಪ್ರತಿಯೊಬ್ಬ ಮತದಾರ ಮುಂದಿನ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಲು ಪ್ರೇರೇಪಿಸಬೇಕಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷ ವಿಕಾಸ ಸುರಳಕರ ಸೂಚಿಸಿದರು.
ನಗರದ ಜಿಪಂ ಸಿಇಒ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಸ್ವೀಪ್ ಸಮಿತಿ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವ ಕುರಿತಂತೆ ಜಿಲ್ಲೆಯ ಶಾಲಾ-ಕಾಲೇಜ್ ವಿದ್ಯಾರ್ಥಿಗಳ ಜಾಗೃತಿ ಜಾಥಾ ಹಮ್ಮಿಕೊಳ್ಳಬೇಕು. ಮಾನವ ಸರಪಳಿ ನಿರ್ಮಾಣ, ಸೈಕಲ್ ರ್ಯಾಲಿ, ದ್ವಿಚಕ್ರ ವಾಹನಗಳ ಜಾಥಾ, ಸಂಚಾರಿ ವಾಹನಗಳ ಮೂಲಕ ಪ್ರಚಾರ ಕಾರ್ಯಕ್ರಮ ವಿವಿಧ ವಾಹನಗಳ ಮೇಲೆ ಮತದಾನ ನೋಂದಣಿ ಮತ್ತು ಮತದಾನ ಮಾಡುವ ಕುರಿತ ಪೋಸ್ಟರ್ ಹಾಗೂ ಸ್ಟೀಕರ್ ಅಳವಡಿಕೆ, ಜನನಿಬಿಡ ಪ್ರದೇಶಗಳಲ್ಲಿ ಜಿಂಗಲ್ಸ್‌ಗಳ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.
ಈವರೆಗೆ ಮತದಾರ ಪಟ್ಟಿಯಲ್ಲಿ ನೋಂದಣಿಯಾಗದೇ ಇರುವ ಮತದಾರರನ್ನು ಗುರುತಿಸಬೇಕು. ಅದರಂತೆ 18 ವರ್ಷ ಪೂರೈಸಿದ ಯುವ ಮತದಾರರ ನೋಂದಣಿಗೆ ಅವಕಾಶ ಕಲ್ಪಿಸಬೇಕು. ಪಪೂ, ಪದವಿ ಕಾಲೇಜುಗಳಲ್ಲಿ ಯುವ ಮತದಾರರ ನೋಂದಣಿಗೆ ಪ್ರೋತ್ಸಾಹಿಸಿ, ಚುನಾವಣೇ ಸಂದರ್ಭದಲ್ಲಿ ಕಡ್ಡಾಯ ಮತದಾನ ಮಾಡುವ ಕುರಿತು ಮನವರಿಕೆ ಮಾಡಿಕೊಡಬೇಕು. ಮತ ಚಲಾಯಿಸುವ ಕುರಿತು ಸ್ಥಳೀಯ ಸಂಸ್ಥೆಗಳ ಕಸ ಸಂಗ್ರಹಣಾ ವಾಹನ ಸೇರಿದಂತೆ ಇತರೆ ವಾಹನದ ಮೂಲಕ ಆಡಿಯೋ ಮೂಲಕ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಇದಲ್ಲದೇ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಜಾತ್ರೆಗಳು, ಸಂತೆಗಳು ವಿವಿಧ ವೃತ್ತಗಳ ಪಟ್ಟಿ ಮಾಡಿಕೊಂಡು ಆ ಪ್ರದೇಶದಲ್ಲಿ ಜಾಗೃತಿ ಕಾರ್ಯಕ್ರಮ ರೂಪಿಸಬೇಕು. ಸಾಕ್ಷé ಚಿತ್ರ ಸಿದ್ಧಪಡಿಸಿ ಜನರಿಗೆ ಪ್ರದರ್ಶಿಸಬೇಕು. ವಿವಿಧ ಸಮೂಹ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುವುದು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ನೀಡಲಾಗಿರುವ ಜವಾಬ್ದಾರಿಗಳನ್ವಯ ಕ್ರಿಯಾಯೋಜನೆ ಸಿದ್ಧಪಡಿಸುವ ಜೊತೆಗೆ ಖರ್ಚು ವೆಚ್ಚಗಳ ಮಾಹಿತಿ ಒದಗಿಸುವಂತೆ ಸೂಚಿಸಿದರು.
ಅದರಂತೆ ಜಿಲ್ಲೆಯಲ್ಲಿರುವ ದಿವ್ಯಾಂಗ ಮತದಾರರನ್ನು ಗುರುತಿಸಲು ಸಮೀಕ್ಷೆ ನಡೆಸಬೇಕು. ಕಳೆದ ಚುನಾವಣೆಗಳಲ್ಲಿ ಅತಿ ಕಡಿಮೆ ಮತದಾನವಾಗಿರುವ ಮತಗಟ್ಟೆವಾರು ಜಾಗೃತಿಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿನ ದಿವ್ಯಾಂಗ ಮತದಾರರು, ಮತದಾರರ ಪಟ್ಟಿಯಿಂದ ಹೊರಗೆ ಉಳಿದ ಮತದಾರ ಪಟ್ಟಿಗೆ ಸೇರಿಸಲು ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರು, ಸರ್ಕಾರೇತರ ಸಂಘ-ಸಂಸ್ಥೆಗಳ ಸಹಕಾರ ಪಡೆಯಬೇಕು. ಅಲ್ಲದೇ ಅವರ ದೂರವಾಣಿ ಸಂಖ್ಯೆ ಸಹಿತ ಮಾಹಿತಿ ಸಿದ್ಧಪಡಿಸಿ ಇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯ ವಿವಿಧ ಹಾಸ್ಟೆಲ್‌ಗಳ ವ್ಯಾಪ್ತಿಯಲ್ಲಿ, ವಿವಿಧ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಮತಯಂತ್ರ ಮತ್ತು ವಿವಿ ಪ್ಯಾಟ್ ಕುರಿತಂತೆ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಂಡು ಸೂಕ್ತ ಜಾಗೃತಿ ಮೂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಕೈಗೊಳ್ಳಲಾಗುವ ಕಾರ್ಯಕ್ರಮಗಳ ಮಾಹಿತಿ ಸಲ್ಲಿಸುವಂತೆ ಸೂಚನೆ ನೀಡಿದರು. ಜಿಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಯೋಜನಾಧಿಕಾರಿ ಕುಂಬಾರ ಸೇರಿದಂತೆ ಜಿಲ್ಲಾ ಸ್ವೀಪ್ ಸಮಿತಿ ಸದಸ್ಯರುಗಳಾದ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.