Advertisement

ಅರಣ್ಯವಾಸಿಗಳ ಒಕ್ಕಲೆಬ್ಬಿಸಲು ನೋಟಿಸ್‌

09:28 AM Jul 17, 2019 | Suhan S |

ಧಾರವಾಡ: ಇವರಿಗೆ ಮನೆ ಜಾಗೆಯನ್ನು ಸರ್ಕಾರವೇ ತೋರಿಸಿದೆ. ಮನೆಗಳನ್ನು ಕೂಡ ಸರ್ಕಾರವೇ ಕಟ್ಟಿಕೊಟ್ಟಿದೆ. ಈ ಮನೆಗಳಿಗೆ ವಿದ್ಯುತ್‌ ಮತ್ತು ನೀರಿನ ಸಂಪರ್ಕ ಸರ್ಕಾರವೇ ನೀಡಿದೆ, ಅಷ್ಟೇಯಲ್ಲ, ಸಿಮೆಂಟ್ ರಸ್ತೆಯನ್ನು ಕೂಡ ಸರ್ಕಾರವೇ ತನ್ನ ಸ್ವಂತ ಹಣ ಖರ್ಚು ಮಾಡಿ ನಿರ್ಮಿಸಿಕೊಟ್ಟಿದೆ. ಆದರೆ ಇದೀಗ ಈ ಇಡೀ ಕಾಲೋನಿಗಳೇ ಅಕ್ರಮವಾಗಿದ್ದು, ಒಂದು ತಿಂಗಳಲ್ಲಿ ಇಲ್ಲಿನ ಮನೆ ಖಾಲಿ ಮಾಡಿ ಎಂದು ಕೂಡ ಇದೇ ಸರ್ಕಾರ ಹೇಳುತ್ತಿದೆ!

Advertisement

ಹೌದು, ಧಾರವಾಡ ಜಿಲ್ಲೆ ಕಲಕೇರಿ ಗ್ರಾಪಂ ವ್ಯಾಪ್ತಿಯಲ್ಲಿನ ಕಲಕೇರಿ, ದೇವಗಿರಿ, ಲಾಳಗಟ್ಟಿ, ಹುಣಸಿಕುಮರಿ ಮತ್ತು ಉಡದ ನಾಗಲಾವಿ ಗ್ರಾಮಗಳಲ್ಲಿ. 1960ಕ್ಕಿಂತಲೂ ಪೂರ್ವದಲ್ಲಿಯೇ ವಾಸಿಸುತ್ತ ಬಂದ ಕುಟುಂಬಗಳಿಗೆ 1984ರಲ್ಲಿ ಜನತಾ ಪ್ಲಾಟ್‌ಗಳನ್ನು ನಿರ್ಮಿಸಿ ಕೊಡಲಾಗಿದೆ. ಇದಾದ ನಂತರ ಅವರಿಗೆ ಮನೆಪಟ್ಟಿ, ವಿದ್ಯುತ್‌ ಸಂಪರ್ಕ, ನೀರಿನ ಸಂಪರ್ಕ ಅಷ್ಟೇಯಲ್ಲ, ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಈ ಮನೆಗಳನ್ನು ನಿರ್ಮಿಸಲಾಗಿದೆ.

ಆದರೆ, ಇದ್ದಕ್ಕಿದ್ದಂತೆ ಜು.7ರಂದು ಧಾರವಾಡದ ಸಹಾಯಕ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳು ಈ ಕುಟುಂಬಗಳಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ನಿಮ್ಮ ಕುಟುಂಬಗಳು ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು ಅತಿಕ್ರಮಿಸಿಕೊಂಡು ಮನೆ ನಿರ್ಮಿಸಿಕೊಂಡಿವೆ. ಈ ಮನೆಗಳಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಕೂಡ ಸಲ್ಲಿಸಿಲ್ಲ. ಅರಣ್ಯ ಇಲಾಖೆ ದಾಖಲೆಗಳನ್ನು ಪರಿಶೀಲಿಸಲಾಗಿ ಧಾರವಾಡ ತಾಲೂಕಿನ ಕಲಕೇರಿ ಗ್ರಾಪಂ ವ್ಯಾಪ್ತಿಯ ದೇವಗಿರಿಯ 34 ಗುಂಟೆ ಜಾಗದಲ್ಲಿನ ಮನೆಗಳು, ಕಲಕೇರಿ-19,ಲಾಳಗಟ್ಟಿ,-20,ಹುಣಸಿಕುಮರಿ-20, ಉಡದ ನಾಗಲಾವಿ-35 ಸೇರಿದಂತೆ ಒಟ್ಟು 150ಕ್ಕೂ ಅಧಿಕ ಕುಟುಂಬಗಳು ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿವೆ. ಕೂಡಲೇ ಇವುಗಳನ್ನು ತೆರುವುಗೊಳಿಸಬೇಕು ಎಂದು ಪ್ರತಿ ಮನೆಗೂ ನೋಟಿಸ್‌ ನೀಡಲಾಗಿದೆ.

ಕಂಗಾಲಾದ ರೈತರು: ಅರಣ್ಯ ಇಲಾಖೆ ನೋಟಿಸ್‌ನಿಂದ ತೀವ್ರ ಕಂಗಾಲಾಗಿರುವ ಈ ಐದು ಹಳ್ಳಿಯ ಜನರು ದಿಕ್ಕು ತೋಚದಂತಾಗಿದ್ದಾರೆ. ಇದ್ದಕ್ಕಿದ್ದಂತೆ ಬಂದು ಎಲ್ಲರನ್ನು ಮನೆಯಿಂದ ಹೊರ ಹಾಕುತ್ತೇವೆ ಎಂದು ಹೇಳಿದರೆ ಹೇಗೆ ? ನಾವಿಲ್ಲಿ 1960ರಿಂದಲೂ ವಾಸ ಮಾಡುತ್ತಿದ್ದೇವೆ. ಸ್ವತಃ ಸರ್ಕಾರವೇ ನಮಗೆ ಜನತಾ ಮನೆಗಳನ್ನು ಕಟ್ಟಿಕೊಟ್ಟಿದೆ. ಇಲ್ಲಿವರೆಗೂ ಮನೆಪಟ್ಟಿ, ವಿದ್ಯುತ್‌ ಬಿಲ್, ನೀರಿನ ಬಿಲ್ಗಳನ್ನು ತುಂಬಿಸಿಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಜನತಾ ಮನೆಗಳನ್ನು ನಿರ್ಮಿಸುವಾಗ ಸ್ವತಃ ಅಂದಿನ ಅರಣ್ಯ ಇಲಾಖೆ ಅಧಿಕಾರಿಗಳೇ ಮುಂದೆ ನಿಂತು ಜಾಗೆಯನ್ನು ತೋರಿಸಿ ಅಲ್ಲಿ ಟ್ರೆಂಚ್‌ಗಳನ್ನು ಹಾಕಿ ಅಷ್ಟರ ಒಳಗಡೆಯೇ ಮನೆ ನಿರ್ಮಿಸಿಕೊಳ್ಳುವಂತೆ ಹೇಳಿ ಹೋಗಿದ್ದಾರೆ. ಅಷ್ಟೇಯಲ್ಲ ಈವರೆಗಿನ ಎಲ್ಲಾ ಸೌಲಭ್ಯಗಳು ಗ್ರಾಪಂ ಮತ್ತು ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ವಸತಿ ಇಲಾಖೆಯಿಂದಲೇ ಪಡೆದುಕೊಂಡಿದ್ದೇವೆ. ಅಂದು ಇಲ್ಲದ ತಕರಾರು ಇಂದೇಕೆ? ಇದ್ದಕ್ಕಿದ್ದಂತೆ ಬಂದು ಮನೆ ಖಾಲಿ ಮಾಡಿ ಎಂದರೆ ಹೇಗೆ ಎನ್ನುತ್ತಿದ್ದಾರೆ.

ಎಲ್ಲರಿಗೂ ನೀರು, ನೆರಳು, ಊಟ ಕೊಡುವ ಭರವಸೆ ನೀಡುವ ಸರ್ಕಾರಗಳಿಂದ ಒಕ್ಕಲೆಬ್ಬಿಸುವ ಗುಮ್ಮ ಸದಾ ಜನರನ್ನು ಕಾಡುತ್ತಲೇ ಇದೆ. ಅರಣ್ಯ ಇಲಾಖೆ ಭೂಮಿಯಲ್ಲಿ ಮನೆಗಳನ್ನು ಕಟ್ಟಿದ್ದೀರಿ ಕೂಡಲೇ ಇವುಗಳನ್ನ ತೆರುವುಗೊಳಿಸಿ ಎಂದು ಹೇಳುತ್ತಿರುವ ಅಧಿಕಾರಿ ವರ್ಗಕ್ಕೆ ಏನು ಹೇಳಬೇಕು ಎನ್ನುವ ಪ್ರಶ್ನೆ ಈ ಗ್ರಾಮಸ್ಥರದ್ದು.

Advertisement

ಹೋರಾಟದ ಎಚ್ಚರಿಕೆ: ಅಜ್ಜ-ಅಪ್ಪನ ಕಾಲದಿಂದಲೂ ಇಲ್ಲಿದ್ದೇವೆ. ಕೂಲಿ-ನಾಲಿ ಮಾಡಿ ಮನೆ ಕಟ್ಟಿಕೊಂಡು ಜೀವನ ಮಾಡಿದ್ದೇವೆ. ಒಂದು ವೇಳೆ ಇಲ್ಲಿಂದ ಒಕ್ಕಲು ಎಬ್ಬಿಸಲು ಬಂದರೆ ನಮ್ಮ ಜೀವ ಕೊಡುತ್ತೇವೆಯೇ ಹೊರತು ಎಂದಿಗೂ ನಾವು ನಮ್ಮ ಜಾಗೆಯನ್ನು ಬಿಟ್ಟು ಕೊಡುವುದಿಲ್ಲ. ಸರ್ಕಾರವೇ ನಮಗೆ ಜನತಾ ಪ್ಲಾಟ್‌ಗಳನ್ನು ನಿರ್ಮಿಸಿಕೊಟ್ಟು,ಇದೀಗ ಇಲ್ಲಿಂದು ಎದ್ದು ಹೋಗಿ ಎಂದರೆ ಹೇಗೆ? ಯಾವುದೇ ಕಾರಣಕ್ಕೂ ನಾವು ಇಲ್ಲಿಂದ ಜಾಗ ಖಾಲಿ ಮಾಡುವುದಿಲ್ಲ. ಅಂತಹ ಪ್ರಸಂಗ ಬಂದರೆ ಹೋರಾಟ ಅನಿವಾರ್ಯವಾಗುತ್ತದೆ ಎನ್ನುತ್ತಿದ್ದಾರೆ ಸಂತ್ರಸ್ತರು.

ದಾಖಲೆಗಳಾವುದಯ್ಯ?: ಅರಣ್ಯ ಅಕ್ರಮ-ಸಕ್ರಮ ಯೋಜನೆಯಡಿ 1978ಕ್ಕಿಂತಲೂ ಮುಂಚಿತವಾಗಿ ವಾಸವಾಗಿರುವ ಕುಟುಂಬಗಳನ್ನು ಸಕ್ರಮಗೊಳಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ರಾಜ್ಯ ಸರ್ಕಾರ 24.10.1980ಕ್ಕಿಂತ ಮೊದಲು ವಾಸವಿರುವ ಅರಣ್ಯ ಭೂಮಿಯನ್ನು ಷರತ್ತುಗಳನ್ನು ಒಳಗೊಂಡಂತೆ ಜರೂರು ಕಾರಣಗಳಿಗಾಗಿ ಅತಿಕ್ರಮಣಗೊಂಡಿದ್ದರೆ ಅದನ್ನು ಸಕ್ರಮಗೊಳಿಸಲು ಅವಕಾಶ ಮಾಡಿಕೊಟ್ಟಿದೆ. ಆದರೆ ಈ ಅಕ್ರಮಗಳನ್ನು ಸಕ್ರಮಗೊಳಿಸಿಕೊಂಡಿದ್ದರೆ ಮಾತ್ರ ಅವು ಸಕ್ರಮ, ಇಲ್ಲವಾದರೆ ಅಕ್ರಮ ಎನ್ನುತ್ತಿದೆ ಅರಣ್ಯ ಇಲಾಖೆ. ಸದ್ಯಕ್ಕೆ ಈ ಗ್ರಾಮಸ್ಥರ ಬಳಿ ಇರುವುದು ಬರೀ ಮನೆ ಪಟ್ಟಿ, ವಿದ್ಯುತ್‌ ಬಿಲ್, ನೀರಿನ ಬಿಲ್ಗಳು ಮಾತ್ರ. ಇಷ್ಟಕ್ಕೂ ಏನೇನು ಅಗತ್ಯ ದಾಖಲೆಗಳು ಇರಬೇಕು ಎನ್ನುವ ಕುರಿತು ಅರಣ್ಯ ಇಲಾಖೆ ಈ ಕುಟುಂಬಗಳಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎನ್ನುತ್ತಿವೆ ಈ ಕುಟುಂಬಗಳು.
•ಜು.7ರಂದು ಬಡವರ ಮನೆಗೆ ನೋಟಿಸ್‌ ಜಾರಿ
•ಜು.11ರಂದು ಮನೆಗಳಿಗೆ ನೋಟಿಸ್‌ ತಲುಪಿಸಿದ ಅಧಿಕಾರಿಗಳು
•ಅರಣ್ಯ ಅಧಿನಿಯಮ 1963 ರ ಕಲಂ 64(ಎ) ಅನ್ವಯ ನೋಟಿಸ್‌
•2002-03ರಲ್ಲಿ ಹಾಕಿದ್ದ ಗುನ್ನೆ ದಾಖಲು ಅನ್ವಯ ಕ್ರಮ
•ಲಾಳಗಟ್ಟಿ ಸರ್ವೇ
ನಂ.97ರಲ್ಲಿ 34 ಗುಂಟೆ ಅತಿಕ್ರಮಣ ಆರೋಪ ಸರ್ಕಾರ ಈವರೆಗೂ ಇಲ್ಲಿ ರಸ್ತೆ, ನೀರು ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಮಾಡಲು ಅನುಮತಿ ಕೊಟ್ಟು ಇದೀಗ ಬಡವರನ್ನು ಮನೆಯಿಂದ ಒಕ್ಕಲೆಬ್ಬಿಸಿದರೆ ಹೇಗೆ? ನಮಗೆ ಇಲ್ಲೇ ವಾಸಿಸಲು ಅವಕಾಶ ಕೊಡಬೇಕು. ಇಲ್ಲವಾದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ. •ದೇವೇಂದ್ರ ಕಾಳೆ, ಕಲಕೇರಿ ತಾಪಂ ಮಾಜಿ ಸದಸ್ಯ
ಬಡವರಿಗೆ ಮನೆಗಳನ್ನು ಸರ್ಕಾರ ನಿರ್ಮಿಸುವಾಗಲೂ ಈ ಬಗ್ಗೆ ಚಿಂತಿಸದ ಅರಣ್ಯ ಇಲಾಖೆ ಏಕಾಏಕಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿರುವುದು ಸರಿಯಲ್ಲ. ಇದನ್ನು ಪುನರ್‌ ಪರಿಶೀಲಿಸಬೇಕು. ಈ ಜನರಿಗೆ ಇಲ್ಲಿಯೇ ಮುಂದುವರಿಯಲು ಅವಕಾಶ ಮಾಡಿಕೊಡಬೇಕು. • ಬಾಬು ಪಾಗೋಜಿ, ದೇವಗಿರಿ ಅರಣ್ಯ ಹಕ್ಕು ಸಮಿತಿ ಸದಸ್ಯ
ಸಹಾಯಕ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳು ಧಾರವಾಡ ಉಪ ವಿಭಾಗ ಇವರಿಂದ ನೋಟಿಸ್‌ ಪಡೆದ ಕುಟುಂಬಗಳು ತಮ್ಮ ದಾಖಲೆಗಳನ್ನು ಸಲ್ಲಿಸಬೇಕು. ಅಕ್ರಮ ಮನೆಗಳನ್ನು ಅರಣ್ಯ ಭೂಮಿಯಿಂದ ತೆರುವುಗೊಳಿಸಲು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ದಾಖಲೆಗಳಿದ್ದ ಮನೆಗಳಿಗೆ ತೊಂದರೆಯಿಲ್ಲ. • ವಿಜಯ್‌ ಕುಮಾರ್‌,
ಆರ್‌ಎಫ್‌ಒ, ಕಲಕೇರಿ
40 ವರ್ಷಗಳಿಂದ ಇಲ್ಲಿಯೇ ವಾಸವಾಗಿರುವ ಗೌಳಿಗರ ಬದುಕನ್ನು ಈ ರೀತಿ ಅತಂತ್ರ ಮಾಡುವುದು ಸರಿಯಲ್ಲ. ಕೂಡಲೇ ಸುತ್ತೋಲೆ ಹಿಂಪಡೆಯಬೇಕು. ಇಲ್ಲವಾದರೆ ಅರಣ್ಯ ಇಲಾಖೆ ವಿರುದ್ಧ ಹೋರಾಟ ಅನಿವಾರ್ಯವಾಗುತ್ತದೆ. • ಸುನೀಲ ದುರ್ಗಾಯಿ, ಹುಣಸಿಕುಮರಿ ವಾರ್ಡ್‌ ಗ್ರಾಪಂ ಸದಸ್ಯ
ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ ಮತ್ತು ಗ್ರಾಪಂ ಒಟ್ಟಾಗಿ ಸೇರಿಕೊಂಡೇ ಅರಣ್ಯ ಹಕ್ಕು ಸಮಿತಿ ಕಾರ್ಯನಿರ್ವಹಿಸುತ್ತಿದೆ. ಈ ಕುಟುಂಗಳು ಸಂಕಷ್ಟದಲ್ಲಿದ್ದು ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ಬಡವರಿಗೆ ನ್ಯಾಯ ಒದಗಿಸಿಕೊಡಬೇಕು. • ಸೋಮಲಿಂಗ ಮರೇವಾಡ, ಅಧ್ಯಕ್ಷ, ಅರಣ್ಯ ಹಕ್ಕು ಸಮಿತಿ
•ಬಸವರಾಜ ಹೊಂಗಲ್
Advertisement

Udayavani is now on Telegram. Click here to join our channel and stay updated with the latest news.

Next