ಬೆಂಗಳೂರು: ಚೀನಾದಲ್ಲಿ ಹೂಡಿಕೆ ಮಾಡಿರುವ ಕೈಗಾರಿಕೋದ್ಯಮಿಗಳು ಕೊರೊನಾ ಕಾರಣಕ್ಕೆ ಬೇರೆ ದೇಶಗಳಲ್ಲಿ ಹೂಡಿಕೆಗೆ ಆಸಕ್ತಿ ತೋರುತ್ತಿದ್ದಾರೆ. ಅಂತಹವರಿಂದ ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ರಚಿಸಲಾಗಿರುವ ವಿಶೇಷ ಟಾಸ್ಕ್ ಫೋರ್ಸ್‌ನ ಕಾರ್ಯಚಟುವಟಿಕೆಗಳನ್ನು ಪ್ರತೀ ವಾರ ಪರಿಶೀಲನೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶಿಸಿದ್ದಾರೆ.
ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ರಾಜ್ಯದಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ರಾಜ್ಯ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದ್ದು, ಇದಕ್ಕಾಗಿ ವಿಶೇಷ ಟಾಸ್ಕ್ಫೋರ್ಸ್ ರಚಿಸಲಾಗಿದೆ. ಇದಕ್ಕಾಗಿ ವಿಶೇಷ ಪ್ರೋತ್ಸಾಹ ಯೋಜನೆಯನ್ನು ರೂಪಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಕಾರ್ಖಾನೆಗಳಲ್ಲಿ ಪ್ರಸ್ತುತ ಶೇ. 70 ರಷ್ಟು ಕೈಗಾರಿಕೆಗಳು ಪುನರಾರಂಭಗೊಂಡಿವೆ.
ಈ ನಿಟ್ಟಿನಲ್ಲಿ ಕೈಗಾರಿಕಾ ವಲಯದ ಪರಿಣಿತರೊಂದಿಗೆ, ಅಂತಾರಾಷ್ಟ್ರೀಯ ಕೈಗಾರಿಕೋದ್ಯಮಿಗಳ ಸಂಘಟನೆಗಳೊಂದಿಗೆ ಸರ್ಕಾರ ಸಮಾಲೋಚನೆ ನಡೆಸುತ್ತಿದೆ. ಇದಲ್ಲದೆ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿ ರುವು ದರಿಂದ ಕೈಗಾರಿಕೋದ್ಯಮಿಗಳು ಜಮೀನು ಖರೀದಿ ಸುವ ಪ್ರಕ್ರಿಯೆ ಸರಳಗೊಂಡಿದ್ದು, ಇದರಿಂದ ಹೂಡಿಕೆ ದಾರರನ್ನು ಆಕರ್ಷಿಸುವುದು ಸುಲಭವಾಗಲಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಜಿಲ್ಲಾ ಮಟ್ಟದಲ್ಲಿಯೂ ಕೈಗಾರಿಕೆ ಸ್ಥಾಪಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು. ಹೊರ ದೇಶದಿಂದ ಆಮದಾಗುತ್ತಿದ್ದ ಪಿಪಿಇ ಕಿಟ್ ಗಳನ್ನು ದೇಶದಲ್ಲಿಯೇ ತಯಾರಿಸಲು ಉತ್ತೇಜನ ನೀಡಲಾಗಿದ್ದು, ರಾಜ್ಯದಲ್ಲಿ 22 ಘಟಕಗಳು ಪಿಪಿಇ ಕಿಟ್‌ಗಳನ್ನು ಉತ್ಪಾದಿಸುತ್ತಿವೆ. 4 ಸಂಸ್ಥೆಗಳು ವೆಂಟಿಲೇಟರ್ ತಯಾರಿಕೆ ಮಾಡುತ್ತಿವೆ. ಸ್ಯಾನಿಟೈಸರ್ ಕೊರತೆ ನೀಗಿಸಲು 40ಕ್ಕೂ ಹೆಚ್ಚು ಡಿಸ್ಟಿಲರಿಗಳಿಗೆ ಪರವಾನಗಿ ನೀಡಿ, ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಲ್ಲಾ ಕೈಗಾರಿಕಾ ಚಟುವಟಿಕೆ ಪ್ರಾರಂಭವಾಗಿದ್ದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೋವಿಡ್ -19 ನಿಂದಾಗಿ ಮುಚ್ಚಲಾಗಿದ್ದ ಜುಬಿಲಿಯಂಟ್ ಕಾರ್ಖಾನೆ ತೆರೆಯಲು ಅನುಮತಿ ನೀಡಲಾಗಿದೆ. ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಈ ವರೆಗೆ 12.40 ಲಕ್ಷ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 5 ಸಾವಿರ ರೂ. ಆರ್ಥಿಕ ನೆರವು ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕಾರ್ಮಿಕ ಸಚಿವ ಶಿವರಾಮ ಹೆಬ್ಟಾರ, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್, ಹಿರಿಯ ಅಧಿಕಾರಿಗಳು ಇದ್ದರು.
ಕಾರ್ಮಿಕರಿಗೆ ಭದ್ರತೆ: ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಪ್ರಸ್ತುತ ಕೇವಲ 89 ಸಾವಿರ ಕಾರ್ಮಿಕರು ನೋಂದಾಯಿಸಿಕೊಂಡಿದ್ದು, ಈ ವಲಯದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಲು ಅಭಿಯಾನದ ಮಾದರಿಯಲ್ಲಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.