Advertisement

ಯೋಧರಂತೆ ಕಾರ್ಯನಿರ್ವಹಿಸಲು ಸೂಚನೆ

09:33 AM Apr 24, 2019 | Team Udayavani |

ಬೆಂಗಳೂರು: ವಿದ್ಯಾರ್ಥಿಗಳು ಯೋಧರಂತೆ ಕಾರ್ಯನಿರ್ವಹಿಸಬೇಕು ಎಂದು ಸಹಾಯಕ ಪೊಲೀಸ್‌ ಆಯುಕ್ತ (ಎಸಿಪಿ) ನಾರಾಯಣಸ್ವಾಮಿ ಕಿವಿಮಾತು ಹೇಳಿದರು.

Advertisement

ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಯೋಗ ಮತ್ತು ವಿದ್ಯಾರ್ಥಿನಿಯರಿಗೆ ಸ್ವರಕ್ಷಣೆ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ರಾಷ್ಟ್ರೀಯ ಭದ್ರತಾ ಪಡೆ, ಪ್ಯಾರಟೂಲ್‌, ವಿಶೇಷ ಸಂರಕ್ಷಣಾ ಪಡೆ (ಎಸ್‌ಪಿಜಿ), ಬಿಎಸ್‌ಎಫ್,

-ಸಿಆರ್‌ಎಫ್ ಸೇರಿದಂತೆ ಸೈನ್ಯ ಮತ್ತು ಅರೆಸೇನೆ ಪಡೆಗಳು ದೇಶದ ಗಡಿ ಕಾಯುತ್ತಿರುವುದರಿಂದಲೇ ರಾಜ್ಯಗಳಲ್ಲಿ ಶಾಂತಿ ನೆಲೆಸಿರುವುದು. ಸೈನಿಕರು ದೇಶದೊಳಗಿನ ಮತ್ತು ಹೊರಗಿನ ಶತೃಗಳ ವಿರುದ್ಧ ಹೋರಾಡುತ್ತಿರುವುದರಿಂದಲೇ ನಾವಿಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ ಎಂದರು.

ವಿದ್ಯಾರ್ಥಿಗಳು ಕೂಡ ದೇಶದ ಸೈನಿಕರಿಂತೆ ಕಾರ್ಯನಿರ್ವಹಿಸಿದರೆ ಸಮಾಜ ಸುಸ್ಥಿತಿಯಲ್ಲಿರಲು ಸಾಧ್ಯ. ನೀವು ಸಮವಸ್ತ್ರ ಧರಿಸದ ಯೋಧರಿದ್ದಂತೆ. ದೇಶದ್ರೋಹದ ಕೆಲಸಗಳನ್ನು ತಡೆಗಟ್ಟಲು ಸದಾ ಮುಂದಾಗಿರಬೇಕು.

ಮನೆಯೊಳಗೆ ಅಥವಾ ಮನೆ ಹೊರಗೆ ದೇಶದ್ರೋಹ ಮಾಡುವವರು ವಿರುದ್ಧ ಹೋರಾಡುವ ಜವಾಬ್ದಾರಿಯನ್ನು ಸಂವಿಧಾನ ಪ್ರತಿಯೊಬ್ಬರಿಗೂ ನೀಡಿದೆ. ವಿದ್ಯಾರ್ಥಿಗಳನ್ನು ಕೆಟ್ಟ ಚಟುವಟಿಕೆಗಳನ್ನು ನಿಯಂತ್ರಿಸಿದರೆ ಸಮಾಜ ಉತ್ತಮ ಮಾರ್ಗದಲ್ಲಿ ಸಾಗಲು ಸಾಧ್ಯವಿದೆ ಎಂದು ಹೇಳಿದರು.

Advertisement

ವಕೀಲ ಲಯನ್‌ ಅನೀಲ್‌ ಕುಮಾರ್‌.ಎಂ ಮಾತನಾಡಿ, ಮೊಬೈಲ್‌ನಿಂದಾಗಿ ವ್ಯಕ್ತಿತ್ವಗಳ ಕೆಳಮಟ್ಟಕ್ಕೆ ಇಳಿಯುತ್ತಿದೆ. ಜನರು ನಡುವೆ ಸಂಭಾಷಣೆ ಕಡಿಮೆಯಾಗಿ, ಬಾಂಧವ್ಯಗಳಲ್ಲಿ ಬಿರುಕು ಕಾಣಿಸುತ್ತಿವೆ. ವಿದ್ಯಾರ್ಥಿಗಳು ಮೊಬೈಲ್‌ ಪ್ರಪಂಚದಿಂದ ಹೊರ ಬರಬೇಕು.

ಪ್ರಕೃತಿಯನ್ನು ಅನುಭವಿಸುವ ಮತ್ತು ಕೇಳಿಸಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. ಇದರೊಂದಿಗೆ ನಾಯಕತ್ವ ಗುಣ ಮೈಗೂಡಿಸಿಕೊಂಡರೆ ಒಳ್ಳೆಯ ವ್ಯಕ್ತಿತ್ವ ನಿಮ್ಮದಾಗಲಿದೆ ಎಂದರು. ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಜೆ.ಎಸ್‌.ವೀಣಾ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಬಿ.ಆನಂದ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next