Advertisement

ಹೋಟೆಲ್‌, ರೆಸಾರ್ಟ್‌ ಮೇಲೆ ಹದ್ದಿನ ಕಣ್ಣಿಡಲು ಸೂಚನೆ

04:49 PM Apr 21, 2018 | |

ಧಾರವಾಡ: ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಹೋಟೆಲ್‌, ಕಲ್ಯಾಣ ಮಂಟಪ, ರೆಸಾರ್ಟ್‌ಗಳಲ್ಲಿ ಚುನಾವಣಾ ಅಕ್ರಮಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಹೇಳಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಹೋಟೆಲ್‌, ಲಾಡ್ಜಿಂಗ್, ರೆಸಾರ್ಟ್‌, ಅತಿಥಿಗೃಹಗಳು ಹಾಗೂ ಕಲ್ಯಾಣ ಮಂಟಪಗಳ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು ಹೋಟೆಲ್‌, ಲಾಡ್ಜಿಂಗ್, ರೆಸಾರ್ಟ್‌, ಅತಿಥಿಗೃಹಗಳು ಹಾಗೂ ಕಲ್ಯಾಣ ಮಂಟಪಗಳಲ್ಲಿ ತಂಗುವ ಹಾಗೂ ಸಭೆ-ಸಮಾರಂಭ ಏರ್ಪಡಿಸುವ ಸಂಭವವಿರುತ್ತದೆ. ಹೀಗಾಗಿ ಅವುಗಳಿಗೆ ಸೂಕ್ತ ಅನುಮತಿ ದೊರೆತಿದ್ದರೆ ಮಾತ್ರ ಕಾರ್ಯಕ್ರಮ ಆಯೋಜಿಸಲು ಸ್ಥಳಾವಕಾಶ ನೀಡಬೇಕು ಎಂದು ಸೂಚನೆ ನೀಡಿದರು.

ಚುನಾವಣಾ ನೀತಿ ಸಂಹಿತೆ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯು ಹೋಟೆಲ್‌ ಮತ್ತು ಕಲ್ಯಾಣ ಮಂಟಪಗಳ ಮಾಲೀಕರ ಮೇಲೆಯೂ ಇರುತ್ತದೆ. ಮದುವೆ, ಹುಟ್ಟುಹಬ್ಬ ಮತ್ತಿತರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಯಾವುದೇ ಅಡೆತಡೆಗಳಿಲ್ಲ. ಆದರೆ ಅವುಗಳ ಹೆಸರಿನಲ್ಲಿ ರಾಜಕೀಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದರು.

ಯಾವುದೇ ರೀತಿಯ ಉಡುಗೊರೆ ವಿತರಣೆ, ಊಟ, ಉಪಹಾರ ವಿತರಣೆ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಅಂತಹ ಚಟುವಟಿಕೆಗಳಿಗೆ ಅವಕಾಶ ನೀಡದೆ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ರಾಜಕೀಯ ಪಕ್ಷಗಳ ತಾರಾ ಪ್ರಚಾರಕರು ಹೋಟೆಲ್‌ಗ‌ಳಲ್ಲಿ ವಸತಿ ಇದ್ದು, ಸಭೆ ನಡೆಸಿದರೆ ಅದಕ್ಕೆ ಸೂಕ್ತ ಅನುಮತಿ ಇದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಒಂದೇ ಬಾರಿಗೆ ಹೆಚ್ಚು ಸಂಖ್ಯೆಯ (ಬಲ್ಕ್ ಬುಕಿಂಗ್‌) ಕೊಠಡಿಗಳನ್ನು ಕಾಯ್ದಿರಿಸಲು ಕೋರಿಕೆ ಬಂದರೆ ನಿರ್ದಾಕ್ಷಿಣ್ಯವಾಗಿ ನಿರಾಕರಿಸಬೇಕು ಎಂದು ಸೂಚಿಸಿದರು.

Advertisement

ವೈಯಕ್ತಿಕವಾಗಿ ಗುರುತಿನ ಚೀಟಿ ಪಡೆದೇ ಬುಕಿಂಗ್‌ ಮಾಡಿಕೊಳ್ಳಬೇಕು. ಮತದಾನಕ್ಕೆ 48 ಗಂಟೆಗಳ ಮುನ್ನ ಕ್ಷೇತ್ರದ ಮತದಾರರಲ್ಲದ ಜನರನ್ನು ಕಡ್ಡಾಯವಾಗಿ ತೆರವುಗೊಳಿಸಬೇಕು. ಕೂಪನ್‌ ಅಥವಾ ಟೋಕನ್‌ಗಳ ವ್ಯವಸ್ಥೆಯಡಿ ಕೆಲವರು ಭೋಜನಕೂಟ, ಕೊಠಡಿ ಕಾಯ್ದಿರಿಸುವುದನ್ನು ಮಾಡುವ ಸಾಧ್ಯತೆಗಳಿರುತ್ತವೆ. ಮಾಲೀಕರು ಇವುಗಳಿಗೆ ಆಸ್ಪದ ನೀಡದೇ ನಗದು ಇಲ್ಲವೇ ಅಧಿಕೃತ ಇ-ವ್ಯವಹಾರಗಳ ಮೂಲಕ ದಾಖಲೆಗಳನ್ನು
ನಿರ್ವಹಿಸಬೇಕು. ಈ ನಿಯಮಗಳನ್ನು ಉಲ್ಲಂಘಿಸಿದರೆ 2 ವರ್ಷಗಳ ಸಜೆ ಮತ್ತು ದಂಡ ವಿಧಿಸಲಾಗುವುದು. ಹೋಟೆಲ್‌ ಮಾಲೀಕರಿಗೆ ಯಾರಾದರೂ ಸಮಾಜ ಘಾತುಕ ಶಕ್ತಿಗಳು ಬೆದರಿಕೆ ಒಡ್ಡಿದರೆ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದರೆ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಿದರು.

ಎಂಸಿಸಿ ನೋಡಲ್‌ ಅಧಿಕಾರಿ ಉಪ ಅರಣ್ಯ ಸಂರಕ್ಷಣಾ ಧಿಕಾರಿ ಮಹೇಶ ಕುಮಾರ ಮಾತನಾಡಿ, ಹೋಟೆಲ್‌, ಕಲ್ಯಾಣ ಮಂಟಪಗಳಲ್ಲಿ ಬಾಡಿಗೆ ನೀಡುವಾಗ ಧ್ವನಿ ವರ್ಧಕಗಳು ಹಾಗೂ ವಿದ್ಯುತ್‌ ಪೂರೈಕೆಯು ರಾಜಕೀಯ ಚಟುವಟಿಕೆಗಳಿಗೆ ಬಳಕೆಯಾಗದಂತೆ ಎಚ್ಚರ ವಹಿಸಬೇಕು. ರಾತ್ರಿ 10ರಿಂದ ಬೆಳಗಿನ 6 ಗಂಟೆವರೆಗೆ ಯಾವುದೇ ಸಭೆ ಸಮಾರಂಭಗಳಿಗೆ ಅವಕಾಶ ಒದಗಿಸಬಾರದು ಎಂದು ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ವೆಚ್ಚ ನೋಡಲ್‌ ಅಧಿ ಕಾರಿಯಾಗಿರುವ ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ಎಸ್‌. ಉದಯಶಂಕರ, ಉಪ ಆಯುಕ್ತ ಎಸ್‌.ಬಿ. ಘಂಟಿ, ವಿವಿಧ ಹೋಟೆಲ್‌ ಮತ್ತು ಕಲ್ಯಾಣ ಮಂಟಪಗಳ ಮಾಲೀಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next