ರಾಯಚೂರು: ಸಕಾಲ ಯೋಜನೆಯಡಿ ಸಲ್ಲಿಕೆಯಾದ ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ಇತ್ಯರ್ಥಗೊಳಿಸು ವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಎಡಿಸಿ ಕೆ.ಆರ್.ದುರುಗೇಶ ಸೂಚಿಸಿದರು.
ನಗರದ ಡಿಸಿ ಕಚೇರಿಯ ಸಭಾಂಗಣ ದಲ್ಲಿ ಶುಕ್ರವಾರ ಆಯೋಜಿಸಿದ್ದ ಸಕಾಲ ಯೋಜನೆಯ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಸಕಾಲದಡಿ ಅರ್ಜಿ ಪಡೆಯುವಾಗಲೇ ಅಗತ್ಯ ದಾಖಲೆಗಳನ್ನು ಪರಿಶೀಲಿಸಬೇಕು. ಸಾಧ್ಯವಾದರೆ ಅಲ್ಲಿಯೇ ಸಮಸ್ಯೆ ಇತ್ಯರ್ಥಗೊಳಿಸಲು ಒತ್ತು ನೀಡಬೇಕು. ದಾಖಲೆಗಳು ಇಲ್ಲವೆಂದು ತಿರಸ್ಕೃತ ಮಾಡಬಾರದು. ಜನರ ನಂಬಿಕೆ, ವಿಶ್ವಾಸ ಗಳಿಸಬೇಕು. ಸಕಾಲ ಸೇವೆಗಳ ಮಾಹಿತಿ ಫಲಕವನ್ನು ಎಲ್ಲ ಕಚೇರಿಗಳಲ್ಲಿ ಅಳವಡಿಸಿ ಜನರಿಗೆ ಯಾವ ಅವಧಿಯೊಳಗೆ ಸೇವೆ ಲಭ್ಯವಾಗಲಿದೆ ಎಂಬುದು ಸಮಗ್ರವಾಗಿ ತಿಳಿಯುವಂತಾಗಬೇಕು ಎಂದು ಸೂಚಿಸಿದರು.
ಅಟಲ್ ಜೀ ಜನಸ್ನೇಹಿ ಕೇಂದ್ರ ಸೇರಿದಂತೆ ಎಲ್ಲೆಡೆ ಫಲಕವನ್ನು ಅಳವಡಿಸಬೇಕು. ಜಿಲ್ಲೆಯು ಸಕಾಲ ಸೇವೆ ಅನುಷ್ಠಾನದಲ್ಲಿ ಮುಂದಿನ ದಿನಗಳಲ್ಲಿ ಅಗ್ರಸ್ಥಾನಕ್ಕೆ ಬರಲು ಎಲ್ಲ ಇಲಾಖೆಯ ಅಧಿಕಾರಿಗಳು ಶ್ರಮಿಸಬೇಕು. ಕರ್ನಾಟಕದಲ್ಲಿ ಸೇವಾ ಸಿಂಧು ಕೇಂದ್ರಗಳಿದ್ದು, ಸಾರ್ವಜನಿಕರು ಆನ್‌ಲೈನ್ ಮೂಲಕವು ಅರ್ಜಿ ಸಲ್ಲಿಸಿ ಸೇವೆ ಪಡೆಯಬಹುದು ಎಂದರು.
ಅಬಕಾರಿ ಇಲಾಖೆಯ ಉಪ ಆಯುಕ್ತೆ ಲಕ್ಷ್ಮೀ ನಾಯಕ, ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಎಚ್.ಸಿ. ನಾಗೇಂದ್ರಪ್ಪ, ಶಿಕ್ಷಣ ಇಲಾಖೆಯ ಸಹಾಯಕ ಯೋಜನಾ ಸಮನ್ವಯಾಧಿಕಾರಿ ಕೃಷ್ಣ, ಮಾನ್ವಿ ತಹಶೀಲ್ದಾರ್ ಚಂದ್ರಕಾಂತ್, ಲಿಂಗಸುಗೂರು ತಹಶೀಲ್ದಾರ್ ಬಲರಾಮ ಕಟ್ಟಿಮನಿ, ವೀರೇಶ್ ಸೇರಿ ಇತರರಿದ್ದರು.