Advertisement

ನಿರ್ಬಂಧ ಕಡ್ಡಾಯ ಪಾಲನೆಗೆ ಸೂಚನೆ

01:31 AM Mar 15, 2020 | Sriram |

ಉಡುಪಿ: ಕೊರೊನಾ ಸೋಂಕು ನಿಯಂತ್ರಣ ಕುರಿತು ರಾಜ್ಯ ಸರಕಾರ ವಿಧಿಸಿರುವ ನಿರ್ಬಂಧಗಳನ್ನು ಸಂಬಂಧಪಟ್ಟ ಸಂಸ್ಥೆಗಳು ಮತ್ತು ಸಾರ್ವಜನಿಕರು ಕಟುನಿಟ್ಟಾಗಿ ಪಾಲಿಸಿ ಸಹಕರಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್‌ ಸೂಚಿಸಿದ್ದಾರೆ.

Advertisement

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾತ್ರೆ ಮುಂತಾದ ಕಾರ್ಯಕ್ರಮದಲ್ಲಿ ಧಾರ್ಮಿಕ ವಿಧಿ ವಿಧಾನ ಮಾತ್ರ ನಡೆಸುವಂತೆ ಮತ್ತು ಈಗಾಗಲೇ ನಿಶ್ಚಯವಾಗಿರುವ ಮದುವೆ, ನಿಶ್ಚಿತಾರ್ಥ ಸಹಿತ ಇತರ ಸಮಾರಂಭಗಳನ್ನು ಸರಳವಾಗಿ ನಡೆಸಬೇಕು. ಹೆಚ್ಚು ಜನ ಸೇರಲು ಅವಕಾಶ ನೀಡದೆ ಹತ್ತಿರದ ಸಂಬಂಧಿಗಳೊಂದಿಗೆ ಮಾತ್ರ ಆಚರಿಸುವಂತೆ ತಿಳಿಸಿದರು.

ನಿರ್ಲಕ್ಷಿಸಿದರೆ ಕ್ರಮ
ಎಲ್ಲ ಖಾಸಗಿ ಆಸ್ಪತ್ರೆಗಳ ಸಿಬಂದಿಗೆ ಈಗಾಗಲೇ ಕಾರ್ಯಾಗಾರ ನಡೆಸಿ ಸ್ಪಷ್ಟ ಸೂಚನೆ ನೀಡಲಾಗಿದೆ. ಕೊರೊನಾ ಲಕ್ಷಣ ಇರುವ ರೋಗಿಗಳನ್ನು ನಿರ್ಲಕ್ಷಿಸಿದಲ್ಲಿ ಕಠಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದು, ಪ್ರತಿ ಆಸ್ಪತ್ರೆಯಲ್ಲಿ 2 ಐಸೋಲೇಟೆಡ್‌ ಕೊಠಡಿಗಳನ್ನು ಮೀಸಲಿಡಲು ಸೂಚಿಸ ಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಕಠಿನ ಕ್ರಮ ಜರಗಿಸುವುದಾಗಿ ಎಚ್ಚರಿಸಿದರು.

ಮಣಿಪಾಲದಲ್ಲಿ ಪರೀಕ್ಷಾ ಕೇಂದ್ರ ಪ್ರಸ್ತಾವ
ಉಡುಪಿ: ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಕೊರೊನಾ ಪರೀಕ್ಷಾ ಕೇಂದ್ರವನ್ನು ತೆರೆಯಲು ರಾಜ್ಯ ಸರಕಾರ ಸೂಚಿಸಿದೆ. ಮಣಿಪಾಲ ಆಸ್ಪತ್ರೆಯಲ್ಲಿ ಜಿಲ್ಲಾ ಕೇಂದ್ರ ತೆರೆಯುವಂತೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಜಾತ್ರೆ ಸರಳ
ಪೆರ್ಡೂರು ದೇವಸ್ಥಾನದ ಜಾತ್ರೆಯನ್ನು ಸರಳವಾಗಿ ಆಚರಿಸುವಂತೆ ಸೂಚಿಸ ಲಾಗಿದೆ. ಅಂಗಡಿ ಮಳಿಗೆ, ನಾಟಕ, ಯಕ್ಷಗಾನ ಇನ್ನಿತರ ಮನೋರಂಜನ ಕಾರ್ಯಕ್ರಮಗಳನ್ನು ನಡೆಸುವುದಿಲ್ಲ ಎಂದು ಆಡಳಿತಾಧಿಕಾರಿ, ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌ ಅವರು ತಿಳಿಸಿದರು.

Advertisement

ಉಡುಪಿ ಜಿಲ್ಲೆ: ಎಲ್ಲ ವರದಿ ನೆಗೆಟಿವ್‌; ಒಬ್ಬರು ಆಸ್ಪತ್ರೆಗೆ ದಾಖಲು
ಜಿಲ್ಲೆಯಲ್ಲಿ ಶನಿವಾರ ಒಬ್ಬರು ಕೊರೊನಾ ಶಂಕಿತರು ಆಸ್ಪತ್ರೆಗೆ ದಾಖಲಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ವರದಿ ಬರಬೇಕಿದ್ದು, ಇದುವರೆಗೆ ಕಳುಹಿಸಿದ ಎಲ್ಲ ವರದಿಗಳು ನೆಗೆಟಿವ್‌ ಎಂದು ಜಿಲ್ಲಾಧಿಕಾರಿ ಜಗದೀಶ್‌ ತಿಳಿಸಿದರು.

ಶುಕ್ರವಾರ ಜಿಲ್ಲಾಸ್ಪತ್ರೆಗೆ ದಾಖಲಾದ ಶಿರ್ವದ ವ್ಯಕ್ತಿ, ಮಣಿಪಾಲ ಆಸ್ಪತ್ರೆಗೆ ದಾಖಲಾದ ದುಬಾೖ ಮೂಲದ ವಿದ್ಯಾರ್ಥಿಯ ವರದಿ ನೆಗೆಟಿವ್‌ ಆಗಿದೆ. ಸಾಗರದ ಮಹಿಳೆಯ ಗಂಟಲು ದ್ರವ ಮಾದರಿಯ ಪರೀಕ್ಷಾ ವರದಿಯೂ ನೆಗೆಟಿವ್‌ ಆಗಿದೆ. ಹಿಂದೆ ಎರಡು ಬಾರಿ ನೆಗೆಟಿವ್‌ ಬಂದಿದ್ದರೂ ಅವರಿಗೆ ರೋಗ ಲಕ್ಷಣ ಇರುವುದರಿಂದ ಮತ್ತೆ ಕಳುಹಿಸಲಾಗಿತ್ತು. ಅವರಿಗೆ ಕಿಡ್ನಿ ಸಮಸ್ಯೆ ಇರುವುದರಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ. ಶಿರ್ವದ ವ್ಯಕ್ತಿಗೆ ಹೊಟ್ಟೆನೋವು ಇರುವುದರಿಂದ ಚಿಕಿತ್ಸೆ ನೀಡಿ ರವಿವಾರ ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ಎರಡು ವಾರ ಜರ್ಮನಿಯಲ್ಲಿದ್ದು, ಶುಕ್ರವಾರ ಊರಿಗೆ ಬಂದಿದ್ದ ಕಾಪು ಮೂಲದ ಯುವಕ (31) ಕೆಮ್ಮು, ಶೀತ ಬಾಧೆಯ ಕಾರಣ ಶನಿವಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಗಂಟಲು ದ್ರವವನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದೆ ಎಂದು ಡಿಎಚ್‌ಒ ಡಾ| ಸುಧೀರ್‌ ಚಂದ್ರ ಸೂಡ ತಿಳಿಸಿದರು.

ಹೂಡೆ ವ್ಯಕ್ತಿಯ ಸಾವಿಗೆ ಕೊರೊನಾ ಕಾರಣವಲ್ಲ
ಹೂಡೆಯಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿದ್ದ 82 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದು, ಅವರ ಸಾವಿಗೆ ಕೊರೊನಾ ಕಾರಣವಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಮೃತರು ಮೂಲತಃ ಪಂಜಾಬ್‌ನವರಾಗಿದ್ದು, ನವೆಂಬರ್‌ನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಸಾವಿಗೆ ಕೊರೊನಾ ಕಾರಣವಲ್ಲ. ಸಾರ್ವಜನಿಕರು ಅನಗತ್ಯ ವದಂತಿಗಳಿಗೆ ಕಿವಿಗೊಡಬಾರದು ಎಂದರು.

ಉಡುಪಿ ಜಿಲ್ಲೆಯಲ್ಲೂ ಜನ ಸಂಚಾರ ವಿರಳ
ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಒಂದು ವಾರ ಕಾಲ ಬಂದ್‌ ಘೋಷಣೆ ಮಾಡಿರುವುದರಿಂದ ಉಡುಪಿ ಜಿಲ್ಲೆಯಲ್ಲಿಯೂ ಸಾರ್ವಜನಿಕರ ಓಡಾಟ ಕಡಿಮೆಯಾಗಿತ್ತು.

ನಗರದಲ್ಲಿನ ಬಿಗ್‌ಬಜಾರ್‌ ಮತ್ತು ಸಿಟಿ ಸೆಂಟರ್‌ ಮಾಲ್‌ಗ‌ಳನ್ನು ಶನಿವಾರ ಬಂದ್‌ ಮಾಡಲಾಗಿತ್ತು. ಎರಡು ಮಲ್ಟಿಪ್ಲೆಕ್ಸ್‌ ಸಹಿತ ಎಂಟು ಚಿತ್ರ ಮಂದಿರಗಳನ್ನೂ ಬಂದ್‌ ಮಾಡಲಾಗಿತ್ತು.

ಬೆಳಗ್ಗೆ ಜನಸಂಚಾರ ತೀರ ವಿರಳವಾಗಿತ್ತು. ಮಧ್ಯಾಹ್ನದ ವೇಳೆಗೆ ಕೊರೊನಾ ವೈರಸ್‌ ಲಕ್ಷಣದಿಂದ ಆಸ್ಪತ್ರೆ ಸೇರಿದ್ದವರ ವರದಿ ನೆಗೆಟಿವ್‌ ಎಂದು ಬಂದ ಬಳಿಕ ಸಂಜೆಯ ವೇಳೆ ಪೇಟೆಯಲ್ಲಿ ಜನರ ಓಡಾಟ ಕಂಡುಬಂತು. ಸಾರ್ವಜನಿಕ ಸಾರಿಗೆಯ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ಹೆಚ್ಚಿನವರು ಖಾಸಗಿ ವಾಹನಗಳನ್ನು ಆಶ್ರಯಿಸಿದ್ದೂ ಕಂಡು ಬಂತು.

ನಾಟಕೋತ್ಸವ ರದ್ದು
ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಮಾ. 17ರಿಂದ 19ರ ವರೆಗೆ ನಡೆಯಬೇಕಿದ್ದ ನಾಟಕೋತ್ಸವವನ್ನು ರದ್ದು ಗೊಳಿಸಲಾಗಿದೆ ಎಂದು ರಂಗಭೂಮಿ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next