Advertisement

ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿ ಸಂಗ್ರಹಕ್ಕೆ ಸೂಚನೆ

04:54 PM May 28, 2022 | Shwetha M |

ವಿಜಯಪುರ:
ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ತರಹದ ಔಷಧಿ ಕೊರತೆ ಆಗದಂತೆ ಅಗತ್ಯಕ್ಕೆ ತಕ್ಕಂತೆ ಸಮರ್ಪಕವಾಗಿ ಔಷಧಿ ಸಂಗ್ರಹ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳೂ ಆಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ.ರಂದೀಪ ತಮ್ಮ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಈ ಸೂಚನೆ ನೀಡಿದ ಅವರು, ಮಳೆಗಾಲದ ಈ ಸಂದರ್ಭದಲ್ಲಿ ತಲೆ ದೋರುವ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಸಿಗುತ್ತಿಲ್ಲ ಎಂದು ಸಾರ್ವಜನಿಕರಿಂದ ದೂರುಗಳು ಬರದಂತೆ ನೋಡಿಕೊಳ್ಳಬೇಕು. ಪ್ರತಿ ಆಸ್ಪತ್ರೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಔಷಧಿಯನ್ನು ಸಂಗ್ರಹ ಮಾಡಿಕೊಳ್ಳಬೇಕು. ಇದಕ್ಕಾಗಿ ಬಿಡುಗಡೆ ಆಗಿರುವ ಅನುದಾನವನ್ನು ಸಮರ್ಪಕ ಬಳಕೆಯಾಗಬೇಕು. ಔಷಧ ಲಭ್ಯತೆ ಕುರಿತು ಜಿಲ್ಲಾ-ತಾಲೂಕು ಹಂತಗಳಲ್ಲಿ ವಿಡಿಯೋ ಸಂವಾದ ನಡೆಸಿ ಚರ್ಚಿಸಬೇಕು. ಜಿಲ್ಲೆಯಲ್ಲಿ ಜನೌಷಧಿ ಕೇಂದ್ರಗಳು ಸಹ ಸರಿಯಾಗಿ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಕೋವಿಡ್‌ ಸಾಂಕ್ರಾಮಿಕ ರೋಗ ಹರಡದಂತೆ ಹೆಚ್ಚಿನ ನಿಗಾ ವಹಿಸಬೇಕು. ಕೋವಿಡ್‌ ಸೋಂಕಿತ ತೀವ್ರ ಲಕ್ಷಣಗಳು ಕಂಡುಬಂದವರಿಗೆ ತ್ವರಿತವಾಗಿ ಆರೋಗ್ಯ ಪರೀಕ್ಷೆ ನಡೆಸಿ ಚಿಕಿತ್ಸೆ ಕೊಡಿಸಬೇಕು. ಅಲ್ಲದೇ ಕೋವಿಡ್‌ ನಿಗ್ರಹಕ್ಕಾಗಿ ಕೋವಿಡ್‌ ಲಸೀಕಾಕರಣ ನಡೆಸಬೇಕು ಎಂದು ಸೂಚಿಸಿದರು.

ಆರೋಗ್ಯ ಇಲಾಖೆಯ ಕುಂದುಕೊರತೆ, ಬೇಕು-ಬೇಡಿಕೆಗಳಿಗೆ ಸಂಬಂಧಿಸಿದಂತೆ ಸಮಗ್ರ ವಿವರವನ್ನು ಪ್ರಾತ್ಯಕ್ಷಿಕೆಯ ಮೂಲಕ ತಮಗೆ ತಿಳಿಸಲು ಸಲಹೆ ಮಾಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಡಿಎಚ್‌ಒ ಡಾ| ರಾಜಕುಮಾರ ಯರಗಲ್‌, ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ| ಎಸ್‌.ಎಲ್‌. ಲಕ್ಕಣ್ಣವರ, ಜಿಲ್ಲಾ ಸರ್ವೇಕ್ಷಣಾ ಘಟಕದ ಅಧಿಕಾರಿ ಡಾ| ಕವಿತಾ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next