Advertisement

3 ತಿಂಗಳೊಳಗೆ ಪ್ರಗತಿ ವರದಿಗೆ ಸೂಚನೆ; 15 ಅಂಶಗಳ ಕಾರ್ಯಕ್ರಮ ಅನುಷ್ಠಾನ

11:18 PM Oct 18, 2019 | Team Udayavani |

ಮಡಿಕೇರಿ: ಅಲ್ಪಸಂಖ್ಯಾಕಗಾಗಿ ಜಾರಿಗೊಳಿಸಲಾಗಿರುವ ಪ್ರಧಾನಮಂತ್ರಿಯವರ 15 ಅಂಶಗಳ ಕಾರ್ಯಕ್ರಮಗಳನ್ನು ಮೂರು ತಿಂಗಳೊಳಗೆ ಪ್ರಗತಿ ಸಾಧಿಸಿ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಸೂಚಿಸಿದ್ದಾರೆ.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಧಾನಮಂತ್ರಿಯವರ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.

ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಸಮುದಾಯ ಭವನ ನಿರ್ಮಾಣ, ಬಿದಾಯಿ ಯೋಜನೆ, ಮುಖ್ಯಮಂತ್ರಿ ಅವರ ಅಭಿವೃದ್ಧಿ ಯೋಜನೆ ಹೀಗೆ ಹಲವು ಕಾರ್ಯಕ್ರಮಗಳು ಇದ್ದು, ಇವುಗಳ ಬಗ್ಗೆ ಮಾಹಿತಿ ನೀಡಿ ಅರ್ಹರಿಗೆ ತಲುಪಿಸುವಂತಾಗಬೇಕು ಎಂದು ಅವರು ಸೂಚಿಸಿದರು.

ಅಲ್ಪಸಂಖ್ಯಾತರಿಗಾಗಿ ಸರ್ಕಾರದಿಂದ ಸಾಕಷ್ಟು ಕಾರ್ಯಕ್ರಮಗಳಿದ್ದು, ಸಮಿತಿ ಸದಸ್ಯರು ಸಹ ಸ್ಥಳೀಯ ಮಟ್ಟದಲ್ಲಿ ಜಾಗೃತಿ ಮೂಡಿಸಿ ಸೌಲಭ್ಯ ಪಡೆದುಕೊಳ್ಳುವಂತಾಗಲು ಮನವರಿಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸ್ವಯಂ ಉದ್ಯೋಗ, ಅರಿವು, ಶ್ರಮಶಕ್ತಿ, ಮೈಕ್ರೋಸಾಲ, ಗಂಗಾ ಕಲ್ಯಾಣ, ಪ್ರವಾಸಿ ಟ್ಯಾಕ್ಸಿ, ಗೃಹ ನಿರ್ಮಾಣ ಸಾಲ, ವೃತ್ತಿ ಪೋ›ತ್ಸಾಹ ಯೋಜನೆಗಳಿವೆ. ಹಾಗೆಯೇ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಸಾಲ ಸೌಲಭ್ಯ ಸಹಾಯಧನ ಕಲ್ಪಿಸುವುದು, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡುವುದು. ಗ್ರಾಮೀಣ ಪ್ರದೇಶದಲ್ಲಿ ಅಲ್ಪಸಂಖ್ಯಾತರು ವಾಸಿಸುವ ಪ್ರದೇಶದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವುದು. ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆ ವ್ಯಾಪ್ತಿಯ ಕಾರ್ಯಕ್ರಮಗಳನ್ನು ಒಂದು ತಿಂಗಳಲ್ಲಿ ಅಲ್ಪಸಂಖ್ಯಾತರಿಗೆ ತಲುಪಿಸುವಂತೆ ಅವರು ಸೂಚಿಸಿದರು.

Advertisement

ಜಿ.ಪಂ.ಸದಸ್ಯ‌ ಲತೀಫ್ ಅವರು ಸರ್ಕಾರದ ಸೌಲಭ್ಯಗಳನ್ನು ಕಾಲ ಮಿತಿಯೊಳಗೆ ತಲುಪಿಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರ್ಪಡೆ ಮಾಡಬೇಕು ಎಂದು ಅವರು ತಿಳಿಸಿದರು.

ಗ್ರಾಮ ವಾಸ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ನೆಲ್ಯಹುದಿಕೇರಿ, ಸುಂಟಿಕೊಪ್ಪ ಮತ್ತಿತರ ಭಾಗಗಳಲ್ಲಿ ಬಡವರ ಸಂಖ್ಯೆ ಹೆಚ್ಚಿದ್ದು, ಮನೆ ನಿರ್ಮಿಸಿಕೊಡಬೇಕು ಎಂದು ಅವರು ಮನವಿ ಮಾಡಿದರು.

ಮತ್ತೂಬ್ಬ ಸದಸ್ಯರು ಹಾಗೂ ನಗರಸಭೆ ಸದಸ್ಯರಾದ ಪೀಟರ್‌ ಅವರು ಮಾತನಾಡಿ ಮಡಿಕೇರಿ ನಗರ ಪ್ರದೇಶದಲ್ಲಿ ಅಲ್ಪಸಂಖ್ಯಾತರು ಪ್ರಕೃತಿ ವಿಕೋಪದಿಂದಾಗಿ ಮನೆ ಕಳೆದುಕೊಂಡಿದ್ದು, ಇಂತಹ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.

ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಮೂರು ಸರ್ಕಾರಿ ಶಾಲೆಗಳಿದ್ದು, ಶಿಕ್ಷಕರಿಗೆ ಸಮರ್ಪಕವಾಗಿ ವೇತನ ಸಿಗುತ್ತಿಲ್ಲ. ಆದ್ದರಿಂದ ಕಾಲ ಕಾಲಕ್ಕೆ ವೇತನ ನೀಡುವಂತಾಗಬೇಕು ಎಂದು ಅವರು ಮನವಿ ಮಾಡಿದರು.

ಶಿಕ್ಷಕರಿಗೆ ಸರಿಯಾಗಿ ವೇತನ ತಲುಪುತ್ತಿಲ್ಲ. ಪ್ರತೀ ತಿಂಗಳು 12 ಸಾವಿರ ರೂ.ವನ್ನು ವೈಯಕ್ತಿಕವಾಗಿ ಭರಿಸಲಾಗುತ್ತಿದೆ ಎಂದು ಅವರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು. ಈ ಶಾಲೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಗೆ ವಹಿಸುವುದು ಒಳ್ಳೆಯದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ.ಪೆನ್ನೇಕರ್‌, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪುಟ್ಟರಾಜು, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರಾಜು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಚ್ಚಾಡೋ, ಜಿ.ಪಂ.ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ನಬಾರ್ಡ್‌ ವ್ಯವಸ್ಥಾಪಕರಾದ ಬಾಲಚಂದ್ರ, ಪಶುಪಾಲನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಅರುಂಧತಿ, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್‌, ನಗರಾಭಿವೃದ್ಧಿ ಕೋಶದ ವ್ಯವಸ್ಥಾಪಕರಾದ ಶೈಲಾ ಅವರು ಪ್ರಗತಿ ಮಾಹಿತಿ ನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next