Advertisement

ಸಿಇಟಿ ಪರೀಕ್ಷೆಗೆ ಅಗತ್ಯ ಸಿದ್ಧತೆಗೆ ಸೂಚನೆ

03:29 PM Jul 29, 2020 | Suhan S |

ಶಿವಮೊಗ್ಗ: ಜು. 30 ಮತ್ತು 31 ರಂದು ನಡೆಯಲಿರುವ ಸಿಇಟಿ ಪರೀಕ್ಷೆ ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಸುಗಮವಾಗಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ತಿಳಿಸಿದರು. ಮಂಗಳವಾರ ಸಿಇಟಿ ಪರೀಕ್ಷೆ ಆಯೋಜನೆ ಕುರಿತ ಪೂರ್ವಭಾವಿ ಸಭೆಯಲ್ಲಿ ಈ ಅವರು ಕುರಿತು ಸೂಚನೆಗಳನ್ನು ನೀಡಿದರು.

Advertisement

ಮಾರ್ಗಸೂಚಿ ಪಾಲನೆ: ಕೋವಿಡ್‌ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಮಾರ್ಗಸೂಚಿ ಪ್ರಕಾರ ಕಾರ್ಯ ನಿರ್ವಹಿಸಬೇಕು. ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಬೇಕು. ಪ್ರತಿ ಪರೀಕ್ಷೆ ನಂತರ ಎಲ್ಲಾ ಕೊಠಡಿ ಹಾಗೂ ಪೀಠೊಪಕರಣಗಳನ್ನು ಸ್ಯಾನಿಟೈಸ್‌ ಮಾಡಬೇಕು ಎಂದು ಹೇಳಿದರು. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು 2 ಗಂಟೆ ಮುಂಚಿತವಾಗಿ ಹಾಜರಿರಲು ಸೂಚಿಸಬೇಕು. ಪ್ರತಿ ಕೊಠಡಿಯಲ್ಲಿ ಕನಿಷ್ಟ 3 ಅಡಿ ಅಂತರ ಕಾಯ್ದುಕೊಳ್ಳಬೇಕು. ಕೊಠಡಿಯಲ್ಲಿ 24ಕ್ಕಿಂತ ಗರಿಷ್ಟ ವಿದ್ಯಾರ್ಥಿಗಳು ಇರಬಾರದು. ವಿದ್ಯಾರ್ಥಿಗಳು ತಮ್ಮದೇ ಕುಡಿಯುವ ನೀರಿನ ಬಾಟಲು ತರಬೇಕು. ವಿದ್ಯಾರ್ಥಿಗಳಿಗೆ ಆಹಾರದ ಡಬ್ಬ ತರಲು ಅವಕಾಶ ನೀಡಲಾಗುವುದು ಎಂದರು.

ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಬೇಕು. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಟ 50 ಮಾಸ್ಕ್ಗಳನ್ನು ಸಿದ್ಧಪಡಿಸಿಡಬೇಕು. ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿರುವುದನ್ನು ಖಾತ್ರಿಪಡಿಸಬೇಕು. ಪರೀಕ್ಷಾ ಕೇಂದ್ರದ ಯಾವುದೇ ಸಿಬ್ಬಂದಿಗೆ ರೋಗ ಲಕ್ಷಣ ಇಲ್ಲದಿರುವ ಬಗ್ಗೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಖಾತ್ರಿಪಡಿಸಬೇಕು. ಇನ್ವಿಜಲೇಟರ್ ಮತ್ತು ಮೇಲ್ವಿಚಾರಕರು ಕೈಗವಸು ಮತ್ತು ವೈದ್ಯಕೀಯ ಮಾಸ್ಕ್ ಧರಿಸಿರಬೇಕು. ಶೌಚಾಲಯಗಳಲ್ಲಿ ಕೈ ತೊಳೆಯಲು ನೀರು, ಸಾಬೂನು ಲಭ್ಯವಿರಬೇಕು ಎಂದು ಹೇಳಿದರು.

ಜಿಲ್ಲೆಯ ಮಾಹಿತಿ: ಜಿಲ್ಲೆಯಲ್ಲಿ ಒಟ್ಟು 15 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಯಲಿದ್ದು, 6888 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಶಿವಮೊಗ್ಗದಲ್ಲಿ 9, ಭದ್ರಾವತಿ 2, ಸಾಗರ 2 ಹಾಗೂ ತೀರ್ಥಹಳ್ಳಿ ಮತ್ತು ಶಿಕಾರಿಪುರದಲ್ಲಿ ತಲಾ ಒಂದು ಕೇಂದ್ರಗಳಿವೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಂದು ಹೆಚ್ಚುವರಿ ಕೊಠಡಿಯನ್ನು ಕಾಯ್ದಿರಿಸಿದ್ದು, ಕಂಟೈನ್‌ ಮೆಂಟ್‌ ವಲಯದಿಂದ ಬರುವ ವಿದ್ಯಾರ್ಥಿಗಳಿಗೆ ಮೀಸಲಿರಿಸಲಾಗಿದೆ ಎಂದು ಪಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾಗರಾಜ ಕಾರ್ಗಲ್‌ ಸಭೆಗೆ ಮಾಹಿತಿ ನೀಡಿದರು.

ಗಾಜನೂರಿನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಪಪೂ ಕಾಲೇಜಿನಲ್ಲಿ ಕೋವಿಡ್‌ ಪಾಸಿಟಿವ್‌ ಬಂದಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಹಿರಿಯ ಅಧಿಕಾರಿಗಳನ್ನು ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದ್ದು, 6 ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವಿಶೇಷ ಜಾಗೃತ ದಳವನ್ನು ನೇಮಕ ಮಾಡಲಾಗಿದೆ ಎಂದು ವಿವರ ನೀಡಿದರು. ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next