ಮುದ್ದೇಬಿಹಾಳ: ಪಟ್ಟಣದ ಬಸವೇಶ್ವರ ವೃತ್ತದಿಂದ ಇಂದಿರಾ ವೃತ್ತದವರೆಗೆ ಪ್ರಗತಿಯಲ್ಲಿರುವ ಅಂದಾಜು 5 ಕೋಟಿ ರೂ. ಅನುದಾನದ ಮುಖ್ಯ ರಸ್ತೆಯನ್ನು ಸಿಮೆಂಟ್ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತಿಸುವ ಕಾಮಗಾರಿಗೆ ಅಡ್ಡಿಯಾಗಿರುವ ಅತಿಕ್ರಮಣದ ಭಾಗವನ್ನು ಮತ್ತು ಡಬ್ಟಾ ಅಂಗಡಿಗಳನ್ನು ಆಯಾ ಅಂಗಡಿಕಾರರು ಸ್ವಯಂಪ್ರೇರಿತರಾಗಿ ತೆರವುಗೊಳಿಸಿಕೊಳ್ಳಬೇಕು. ಇಲ್ಲದಿದ್ದರೆ ಪುರಸಭೆಯಿಂದ ತೆರವುಗೊಳಿಸುವ ವೇಳೆ ಸಂಭವಿಸುವ ಹಾನಿಗೆ ಪುರಸಭೆ ಜವಾಬ್ದಾರಿ ಆಗುವುದಿಲ್ಲ ಎಂದು ಪುರಸಭೆ ಆಡಳಿತ ಮಂಡಳಿ ಅಂಗಡಿಕಾರರಿಗೆ, ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದೆ.
ಮಂಗಳವಾರ ಪಟ್ಟಣದ ಇಂದಿರಾ ವೃತ್ತದಿಂದ ಪ್ರಾರಂಭಗೊಂಡಿರುವ ಸಿಸಿ ರಸ್ತೆ ಕಾಮಗಾರಿಯ ಪರಿಶೀಲನೆ ವೇಳೆ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವು ಶಿವಪುರ, ಸದಸ್ಯರಾದ ಸದಸ್ಯರಾದ ಮಹೆಬೂಬ ಗೊಳಸಂಗಿ, ರಿಯಾಜ್ ಢವಳಗಿ, ಯಲ್ಲಪ್ಪ ನಾಯಕಮಕ್ಕಳ, ರಾಜಶೇಖರ ಹೊನ್ನುಟಗಿ, ಪ್ರಭಾರ ಮುಖ್ಯಾ ಧಿಕಾರಿ ಸುರೇಖಾ ಬಾಗಲಕೋಟ ಅವರ ತಂಡ ಕಾಮಗಾರಿ ಪರಿಶೀಲನೆಗೆ ಆಗಮಿಸಿದ ವೇಳೆ ಈ ಎಚ್ಚರಿಕೆ ನೀಡಿದರು.
ಮುಖ್ಯ ಬಜಾರ್‌ನಲ್ಲಿರುವ ಸರ್ಕಾರಿ ಹೆಣ್ಣು ಮಕ್ಕಳ ಶಾಲೆ ನಂಬರ್-2 ಮುಂದೆ, ಹಳೇಯ ಕೋರ್ಟ್ ಹತ್ತಿರ ಮತ್ತು ಇತರೆ ಕಡೆಗಳಲ್ಲಿ ಕೆಲವರು ಡಬ್ಟಾ ಅಂಗಡಿಗಳನ್ನು ಅನಧಿಕೃತವಾಗಿ ಇಟ್ಟುಕೊಂಡಿದ್ದಾರೆ. ಪುರಸಭೆಯ ಜಾಗೆಯಲ್ಲಿ ಇಟ್ಟುಕೊಂಡಿರುವ ಈ ಅಂಗಡಿಗಳಿಗೆ ಪುರಸಭೆಯಿಂದ ಯಾವುದೇ ಅನುಮತಿ ನೀಡಿಲ್ಲ. ಈಗ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಈ ಡಬ್ಟಾ ಅಂಗಡಿಗಳು ಅಡ್ಡಿ ಒಡ್ಡುತ್ತಿವೆ. ಇವುಗಳನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿಕೊಂಡು ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದರು.
ಈ ವೇಳೆ ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕರು ಪುರಸಭೆ ಆಡಳಿತ ಮಂಡಳಿಯವರನ್ನು ಭೇಟಿ ಮಾಡಿ ಶಾಲೆಯ ಮುಂದೆ ಇಟ್ಟಿರುವ ಡಬ್ಟಾ ಅಂಗಡಿಗಳನ್ನು ಪುರಸಭೆಯವರೇ ಮುಂದೆ ನಿಂತು ತೆರವುಗೊಳಿಸಿಕೊಳ್ಳಬೇಕು. ಈ ಹಿಂದೆ ಡಬ್ಟಾ ಅಂಗಡಿಗಳಿಂದ ಶಾಲೆಯ ಕಲಿಕಾ ಚಟುವಟಿಕೆಗಳಿಗೆ ತೊಂದರೆ ಆಗುತ್ತದೆ, ಅಂಗಡಿ ಇಡಬೇಡಿ ಎಂದು ಹಲವು ಬಾರಿ ಮನವಿ ಮಾಡಿಕೊಂಡರೂ ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಶಾಲೆಯ ಕಲಿಕಾ ಚಟುವಟಿಕೆಗಳಿಗೆ, ಮಕ್ಕಳಿಗೆ ತೊಂದರೆ ಒಡ್ಡುತ್ತಿರುವ ಡಬ್ಟಾ ಅಂಗಡಿಗಳನ್ನು ತೆರವುಗೊಳಿಸುವಂತೆ ಈಗಾಗಲೇ ಪುರಸಭೆಗೆ ಲಿಖೀತ ಮನವಿ ಕೊಡಲಾಗಿದೆ. ಆದರೂ ಪುರಸಭೆಯವರು ಗಂಭೀರವಾಗಿ ಪರಿಗಣಿಸಿಲ್ಲ. ಈಗ ರಸ್ತೆ ಕಾಮಗಾರಿ ನಡೆದಿದ್ದು ಈಗಲಾದರೂ ಡಬ್ಟಾ ಅಂಡಗಿ ತೆರವುಗೊಳಿಸಿ ಮಕ್ಕಳ ಕಲಿಕಾ ಚಟುವಟಿಕೆಗೆ ಅನುಕೂಲ ಮಾಡಿಕೊಡಬೇಕು ಎಂದು ಕೋರಿದರು. ಇದಕ್ಕೆ ಸ್ಪಂದಿಸಿದ ಆಡಳಿತ ಮಂಡಳಿಯವರು ಇನ್ನೊಮ್ಮೆ ಲಿಖೀತ ಅರ್ಜಿ ಕೊಡುವಂತೆ ಮುಖ್ಯಾಧ್ಯಾಪಕರಿಗೆ ತಿಳಿಸಿದರು.
ಕಾಂಗ್ರೆಸ್ ಮುಖಂಡ ರುದ್ರಗೌಡ ಅಂಗಡಗೇರಿ, ಪುರಸಭೆ ಕಂದಾಯ ಅಧಿಕಾರಿ ಭಾರತಿ ಮಾಡಗಿ, ಆರೋಗ್ಯ ನಿರೀಕ್ಷಕ ಮಹಾಂತೇಶ ಕಟ್ಟಿಮನಿ, ಗುತ್ತಿಗೆದಾರ ರಾಜುಗೌಡ ಪಾಟೀಲ ಐನಾಪುರ ಸೇರಿ ಹಲವರು ಇದ್ದರು.
ಪುರಸಭೆ ಆಡಳಿತ ಕಾಮಗಾರಿ ಪರಿಶೀಲನೆಗೆ ಬಂದ ಸಂದರ್ಭ ಹಲವು ಅಂಗಡಿಕಾರರು ಅವರನ್ನು ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡರು. ಆದರೆ ಅಭಿವೃದ್ಧಿ ಕೆಲಸ ನಡೆದಾಗ ಎಲ್ಲರೂ ಸಹಕರಿಸಬೇಕು ಎನ್ನುವ ನಿಲುವನ್ನು ಆಡಳಿತ ಮಂಡಳಿ ತಳೆದಿದ್ದರಿಂದ ಯಾವುದೇ ಭರವಸೆ ಸಿಗದೆ ನಿರಾಶರಾದರು.