Advertisement

ಸ್ವಚ್ಛತೆ ಇಲ್ಲದ ಹೋಟೆಲ್ ವಿರುದ್ಧ ಕ್ರಮಕ್ಕೆ ಸೂಚನೆ

03:39 PM Sep 07, 2019 | Suhan S |

ಕುಣಿಗಲ್: ಪಟ್ಟಣದಲ್ಲಿನ ಹೋಟೆಲ್ಗಳಲ್ಲಿ ಸ್ವಚ್ಛತೆ ಇಲ್ಲದೆ ಗಬ್ಬೆದ್ದು ನಾರುತ್ತಿವೆ. ಊಟ ಮಾಡಲು ಹೋಗುವ ಜನರು ರೋಗ ರುಜಿನಗಳಿಗೆ ತುತ್ತಾಗು ತ್ತಿದ್ದಾರೆ ಏನು ಮಾಡುತ್ತಿದ್ದೀರಾ ಎಂದು ತಾಪಂ ಅಧ್ಯಕ್ಷ ಹರೀಶ್‌ನಾಯ್ಕ ತಾಲೂಕು ವೈದ್ಯಾಧಿಕಾರಿ ಡಾ.ಜಗದೀಶ್‌ ಅವರನ್ನು ತರಾಟೆ ತೆಗೆದುಕೊಂಡ ಪ್ರಸಂಗ ಶುಕ್ರವಾರ ಕೆಡಿಪಿ ಸಭೆಯಲ್ಲಿ ನಡೆಯಿತು.

Advertisement

ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪಟ್ಟಣದ ಸರ್ಕಾರಿ ಆಸ್ಪತ್ರೆ ಎದುರಿನಲ್ಲೇ ಇರುವ ಹೋಟೆಲ್ ಒಂದರಲ್ಲಿ ಸ್ವಚ್ಛತೆ ಇಲ್ಲ, ಹೋಟೆಲ್ ಒಳಗೆ ಹೋದರೆ ವಾಂತಿ ಬರುತ್ತದೆ. ಈ ಸಂಬಂಧ ಏನು ಕ್ರಮಕೈ ಗೊಂಡಿದ್ದೀರಾ ಎಂದು ಟಿಎಚ್ಒ ಅವರನ್ನು ಪ್ರಶ್ನಿಸಿದ ಅಧ್ಯಕ್ಷರು ಜನರಿಗೆ ಅನ್ಯಾಯ ಮಾಡಿದರೆ ದೇವರು ನಿಮಗೆ ಒಳ್ಳೆಯದು ಮಾಡುವುದಿಲ್ಲ ಎಂದರು.

ಹೋಟೆಲ್ಗಳ ರದ್ದತಿಗೆ ಸೂಚನೆ: ಪಟ್ಟಣದ ಹೋಟೆಲ್ಗಳಲ್ಲೇ ಈ ಸ್ಥಿತಿ ಇದ್ದರೆ ಇನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಹೋಟೆಲ್ಗಳ ಸ್ಥಿತಿ ಹೇಗಿರ ಬಹುದು ಎಂದು ಪ್ರಶ್ನಿಸಿದರು. ತಾಲೂಕಿನ ಅಂಚೆ ಪಾಳ್ಯ ತಾಜ್‌ ಹೋಟೆಲ್ನ ಮಾಂಸದ ಮೂಳೆ ಚೂರುಗಳು ಹಾಗೂ ಕಲುಷಿತ ನೀರನ್ನು ರಸ್ತೆಗೆ ಬಿಡಲಾಗಿದೆ. ಕಲುಷಿತ ನೀರಿನ ವಾಸನೆ ತಾಳಲಾರದೆ ಜನರು ಉಸಿರು ಕಟ್ಟಿ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಚ್ಛತೆ ಇಲ್ಲದ ಹೋಟೆಲ್ಗಳ ರದ್ದತಿಗೆ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಇಲಾಖೆ ಗಮನಕ್ಕೆ ತಾರದೆ ಪರವಾನಗಿ: ಇದಕ್ಕೆ ಪ್ರತಿಕ್ರಿಯಿಸಿದ ಟಿಎಚ್ಒ ಡಾ.ಜಗದೀಶ್‌ ಪಟ್ಟಣ ದಲ್ಲಿನ ಬಹುತೇಕ ಹೋಟೆಲ್, ರಸ್ತೆ ಬದಿಯ ಹೋಟೆಲ್, ಟೀ ಅಂಗಡಿ ಹಾಗೂ ಬೇಕರಿಗಳು ಆರೋಗ್ಯ ಇಲಾಖೆಯಿಂದ ಅನುಮತಿ ಪಡೆಯದೇ ನಡೆಸುತ್ತಿದ್ದಾರೆ. ಇವರಿಗೆ ಪುರಸಭೆಯವರು ಪರ ವಾನಗಿ ನೀಡುವಾಗ ನಮ್ಮ ಇಲಾಖೆ ಗಮನಕ್ಕೆ ತರುತ್ತಿಲ್ಲ, ಅಲ್ಲದೆ ಕಾನೂನು ಬಿಗಿ ಇಲ್ಲದ ಕಾರಣ ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಂಡರೇ ಅವರು ನಮ್ಮ ವಿರುದ್ಧ ನ್ಯಾಯಾಲಯಕ್ಕೆ ಹೋಗು ತ್ತಾರೆ, ಏನು ಮಾಡುವುದು ಎಂದು ಮರು ಪ್ರಶ್ನೆ ಹಾಕಿದ ಟಿಎಚ್ಒ ನಾವುಗಳು ನ್ಯಾಯಾಲಯಕ್ಕೆ ಅಲೆಯುವಂತಾಗಿದೆ ಎಂದು ತಮ್ಮ ಅಳಲು ಹೇಳಿಕೊಂಡರು.

ಡೆಂಘೀ ಚಿಕಿತ್ಸೆ ವ್ಯಾಪಾರೀಕರಣ: ಡೆಂಘೀ ರೋಗಿಗಳನ್ನು ಖಾಸಗಿ ಆಸ್ಪತ್ರೆಯವರು ಹೆದರಿಸಿ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ಕೊಡುವ ನೆಪದಲ್ಲಿ ಅವರಿಂದ ಹಣ ವಸೂಲಿ ಮಾಡುವ ಮೂಲಕ ಡೆಂಘೀ ಚಿಕಿತ್ಸೆಯನ್ನು ವ್ಯಾಪಾರೀಕರಣ ಮಾಡಿ ಕೊಂಡಿದ್ದಾರೆ ಎಂದು ನೇರವಾಗಿ ಆರೋಪಿಸಿದ ಟಿಎಚ್ಒ ಜಗದೀಶ್‌, ಒಬ್ಬ ವ್ಯಕ್ತಿಗೆ ಕನಿಷ್ಠ 1.20 ಲಕ್ಷ ದಿಂದ ನಾಲ್ಕು ಲಕ್ಷದ ವರೆಗೆ ಬಿಳಿ ರಕ್ತ ಕಣ ಇರಬೇಕು, ಆದರೆ 30 ಸಾವಿರ ಬಿಳಿ ರಕ್ತ ಕಣ ಇರುವ ರೋಗಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ವಾರದಲ್ಲಿ ಚಿಕಿತ್ಸೆ ನೀಡಿ ಕಾಯಿಲೆ ವಾಸಿ ಮಾಡುವುದಾಗಿ ಹೇಳಿದರು.

Advertisement

ಈ ಸಂಬಂಧ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಟಿಎಚ್ಒಗೆ ಅಧ್ಯಕ್ಷರು ಸೂಚಿಸಿದರು. ಅಲ್ಲದೆ 2018-19ನೇ ಸಾಲಿನಲ್ಲಿ ಆಸ್ಪತ್ರೆಗೆ ಸರಬರಾಜಾಗಿರುವ ಔಷಧಿ ಮಾತ್ರೆಗಳ ವಿವರದ ಪಟ್ಟಿಯನ್ನು ವಾರದ ಒಳಗೆ ನೀಡುವಂತೆ ತಿಳಿಸಿದರು.

ಕುಷ್ಠರೋಗ ಪತ್ತೆ: ತಾಲೂಕಿನ ಹುತ್ರಿದುರ್ಗ ಹೋಬಳಿ ಸಿದ್ದೇಮಣ್ಣಿನಪಾಳ್ಯ ಗ್ರಾಮದಲ್ಲಿ ಕುಷ್ಠರೋಗ ಇರುವ ವ್ಯಕ್ತಿಯನ್ನು ಗುರುತಿಸಿದ್ದು ರೋಗಿಗೆ ಅಗತ್ಯ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಡಾ.ಜಗದೀಶ್‌ ಹೇಳಿದರು.

ಕಡಿವಾಣ ಹಾಕಿ: ರಸಗೊಬ್ಬರ ಚೀಲ ಒಂದಕ್ಕೆ ಹೆಚ್ಚುವರಿ ಯಾಗಿ 50 ರೂ.ಗಳನ್ನು ರೈತರಿಂದ ವಸೂಲಿ ಮಾಡಲಾಗುತ್ತಿದೆ. ರೈತರು ರಸೀದಿ ಕೇಳಿದರೆ ರಸೀದಿ ಕೊಡುತ್ತಿಲ್ಲ ಇದಕ್ಕೆ ಕಡಿವಾಣ ಹಾಕುವಂತೆ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಹೊನ್ನದಾಸೇಗೌಡ ಅವರಿಗೆ ಸೂಚಿಸಿ ಅಂಗಡಿ ಮುಂದೆ ದರಪಟ್ಟಿ ಫಲಕ ಹಾಕಿಸುವಂತೆ ತಾಕೀತು ಪಡಿಸಿದರು.

ಈ ಸಂಬಂಧ ಈಗಾಗಲೇ ನೋಟಿಸ್‌ ನೀಡಲಾಗಿದೆ ಎಂದು ಹೇಳಿದ ಹೊನ್ನದಾಸೇಗೌಡ ಆಗಸ್ಟ್‌ ತಿಂಗಳ ಅಂತ್ಯಕ್ಕೆ ತಾಲೂಕಿನಲ್ಲಿ ಶೇ.5 ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ. ಇಲಾಖೆಯಿಂದ 413 ಕ್ವಿಂಟಲ್ ಬಿತ್ತನೆ ರಾಗಿ ವಿತರಣೆ ಮಾಡಲಾಗಿದೆ. ತಾಲೂಕಿನಲ್ಲಿ 44661 ಎಕ್ಟೇರ್‌ ಕೃಷಿ ಪ್ರದೇಶವಿದ್ದು, 32.485 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆ ಇಡಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ತೋಟಗಾರಿಕೆ ಸಹಾಯಕ ನಿರ್ದೇಶಕ ನಾಗರಾಜು ಮಾತನಾಡಿ, ಜಂಬುನೇರಳೆ ಹಣ್ಣಿನಲ್ಲಿ ಮಧುಮೇಹ ಕಾಯಿಲೆ ವಾಸಿಗೆ ಸೂಕ್ತವಾಗಿದೆ. ಅಲ್ಲದೆ ಸೀಬೆ ಹಣ್ಣು ಮನುಷ್ಯನ ಆರೋಗ್ಯಕ್ಕೆ ಒಳ್ಳೆಯ ಹಣ್ಣಾಗಿದೆ ಹೀಗಾಗಿ ಜಂಬುನೇರಳೆ ಮತ್ತು ಸೀಬೆ ಹಣ್ಣು ಸಸಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ 80 ಸಾವಿರ ಸಸಿಗಳನ್ನು ಬೆಳೆಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ಆರ್‌ಎಫ್‌ಒ ಕೆ.ಟಿ.ಮಂಜುನಾಥ್‌ ಮಾತನಾಡಿ, ತಾಲೂಕಿನಲ್ಲಿ 40ಕ್ಕೂ ಹೆಚ್ಚು ಚಿರತೆಗಳು ಇವೆ. ಚಿರತೆಗಳ ದಾಳಿಗೆ ಸುಮಾರು 27 ಹಸು, ಎಮ್ಮೆ ಬಲಿಯಾಗಿವೆ, ಇದಕ್ಕೆ ಸರ್ಕಾರ ಪರಿಹಾರ ಕೊಡುತ್ತಿದೆ, ಈಗಾಗಲೇ ಕೆಲವೆಡೆ ಬೋನ್‌ಗಳ ಮೂಲಕ ಸೆರೆ ಹಿಡಿಯಲಾದ ಚಿರತೆಗಳನ್ನು ಬಂಡೀಪುರ ಅರಣ್ಯಕ್ಕೆ ಬಿಡಲಾಗಿದೆ ಎಂದು ಮಾಹಿತಿ ನೀಡಿದರು.

ತಾಪಂ ಕಾರ್ಯನಿರ್ವಾಣಾಧಿಕಾರಿ ಶಿವರಾಜಯ್ಯ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಶಶಿಕಾತ್‌ಬೂದಾಳ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next