ಕೊಟ್ಟೂರು: ನಾಟಕ ಕಂಪನಿಗಳಿಗೆ ರಾತ್ರಿ ವೇಳೆ ಪ್ರದರ್ಶನ ನಡೆಸದಂತೆ ಚುನಾವಣೆ ಆಯೋಗ ಸಮಿತಿ ನೋಟಿಸ್ ಜಾರಿ ಮಾಡಿದೆ. ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ನಿಮಿತ್ತ ವಿವಿಧ ಊರುಗಳಿಂದ ಬಂದಿರುವ ನಾಟಕ ಕಂಪನಿಗಳು ಕೊಟ್ಟೂರಿನಲ್ಲಿ ಬೀಡು ಬೀಟು ಬಿಟ್ಟಿವೆ. ಈ ಕಂಪನಿಗಳು ತಮ್ಮ ಹೊಟ್ಟೆ ಹೊರೆಯಲು ನಾಟಕದಿಂದ ಜೀವನ ವೃತ್ತಿ ನಡೆಸಿಕೊಂಡು ಹೋಗುತ್ತಿರುವ ಬಡ ಕಲಾವಿದರು ಲೋಕಸಭಾ ಚುನಾವಣೆ ಜಾರಿಯಾದ ನಿಮಿತ್ತ ನಾಟಕ ಕಂಪನಿಗಳಿಗೆ ರಾತ್ರಿ ವೇಳೆ ಪ್ರದರ್ಶನ ನಡೆಸದಂತೆ ಚುನಾವಣೆ ಆಯೋಗ ಸಮಿತಿಯ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಇಂದರಿಂದಾಗಿ ನಾಟಕ ಕಂಪನಿಗಳ ಕಲಾವಿದರು ಪಾಡು ಹೇಳತೀರದಾಗಿದೆ. ರಾತ್ರಿ ಷೋ ನಡೆದರೆ ಮಾತ್ರ ಬಡ ಕಲಾವಿದರಿಗೆ ದುಡಿಮೆಯಾಗಿ ಹೊಟ್ಟೆಗೆ ಅನ್ನವಾಗುತ್ತದೆ. ಹೀಗಾಗಿ ದಿನ ನಿತ್ಯ ನಡೆಯುವ ಷೋಗಳ ಸಮಯವನ್ನು ಮಧ್ಯಾಹ್ನ 3:30 ಮತ್ತು ಸಂಜೆ 6:15 ಕ್ಕೆ ನಡೆಸುವಂತಾಗಿದೆ.
ಇದರಿಂದ ಅವರಿಗೆ ಬರುವ ಆದಾಯ ಕಡಿಮೆಯಾಗಿದೆ. 2 ಷೋ ನಡೆದರು ಕೇವಲ 10 ಸಾವಿರ ರೂ. ಸಂಗ್ರಹವಾಗುತ್ತದೆ. ಅವರಿಗೆ ಒಂದು ದಿನಕ್ಕೆ 25 ಸಾವಿರ ರೂ. ಖರ್ಚಿದೆ. ಈ ನೀತಿ ಸಂಹಿತೆ ಜಾರಿಯಿಂದಾಗಿ ಖರ್ಚು ಜಾಸ್ತಿಯಾಗಿ ಆದಾಯವಿಲ್ಲದಂತಾಗಿದೆ.
ಇಲ್ಲಿನ ಹೊಟೇಲ್‌ಗಳನ್ನು ರಾತ್ರಿ 10 ಗಂಟೆಯೊಳಗಡೆ ಮುಚ್ಚಬೇಕೆಂದಿರುವುದು ಬಡ ಹೊಟೇಲ್ ಮಾಲೀಕರ ಪರಿಸ್ಥಿತಿ ನಾಟಕ ಕಂಪನಿಗಳಿಗಿಂತೇನು ಭಿನ್ನವಾಗಿಲ್ಲ. ರಾತ್ರಿ ವೇಳೆ ಪ್ರಯಾಣಿಸುವ ಪ್ರಯಾಣಿಕರಿಗೆ ಉಪವಾಸವೇ ಗತಿಯಾಗಿದೆ. ಈಗಿರುವ ಬರಗಾಲದ ಜತೆಗೆ ಅದೇ ವೃತ್ತಿಯಿಂದ ಜೀವನ ನಡೆಸುವ ಬಡ ಬಗ್ಗರಿಗೆ ನೀತಿ ಸಂಹಿತೆ ಜಾರಿಯಾಗಿರುವುದು ಬಿಸಿತುಪ್ಪವಾಗಿದೆ.
ಬೇರೆ ಜಿಲ್ಲೆಗಳಲ್ಲಿ ಇಲ್ಲದ ನೀತಿ ಸಂಹಿತೆ ಕಾನೂನು ಬಳ್ಳಾರಿ ಜಿಲ್ಲೆ ಹಾಗೂ ಕೊಟ್ಟೂರಿನಲ್ಲಿ ಜಾರಿಯಾಗಿರುವುದು ವಿಷಾದಕರ. ಅನತಿ ದೂರದಲ್ಲಿರುವ ದಾವಣಗೆರೆಯಲ್ಲಿ ಸಿನಿಮಾಗಳು ಈಗಲು ರಾತ್ರಿ 12 ರವರೆಗೆ ನಡೆಯುತ್ತವೆ. ನಮ್ಮಂತ ಬಡವರ ಹೊಟ್ಟೆಯ ಮೇಲೆ ಹೊಡೆಯುವುದು ಎಷ್ಟು ಸರಿ? ನಾವು ದುಡಿಯುವುದು ನೀತಿ ಸಂಹಿತೆಯಿಂದ ಕೇವಲ 10 ಸಾವಿರ. ಆದರೆ, ದಿನಕ್ಕೆ ಖರ್ಚಾಗುವುದು 20 ಸಾವಿರ ರೂ.. ಹೀಗಾದರೆ ನಮ್ಮ ಜೀವನ ನಡೆಸುವುದು ಹೇಗೆ? ಗುಬ್ಬಿ ಕಂಪನಿ ಮಾಲೀಕ ಜ್ಯೋತಿ ಮಂಗಳೂರು.
ನೀತಿ ಸಂಹಿತೆ ಜಾರಿಯಾಗಿರುವುದರಿಂದ ಬಡವರಿಗೆ ತುಂಬಾನೇ ಕಷ್ಟಕರವಾಗಿದೆ. ನೀತಿ ಸಂಹಿತೆ ರಾಜಕಾರಣಿಗಷ್ಟೇ ಸೀಮಿತವಾಗಿರಬೇಕು. ಬಡವರ ಜೀವನ ಜೊತೆ ಆಟವಾಡುವಂತಾಗಬಾರದು. ಮುಂದಿನ ದಿನಗಳಲ್ಲಿ ಬಡವರ ಮೇಲೆ ಈ ನೀತಿ ಸಂಹಿತೆ ಜಾರಿಯಾದರೆ ನಾನು ಹೋರಾಟಕ್ಕಿಳಿವೆ.
ಅಂಚೆ ಕೊಟ್ರೇಶ್, ಕೊಟ್ಟೂರು.