ಗಂಗಾವತಿ: ಕನ್ನಡದ ಪ್ರತಿಷ್ಠಿತ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಕೋರ್ಸ್ ಮಾಡುತ್ತಿರುವ ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಬಾಕಿ ಇರುವ 40 ತಿಂಗಳ ಫೆಲೋಶಿಪ್ (ಶಿಷ್ಯವೇತನ)ಕೂಡಲೇ ಮಂಜೂರು ಮಾಡುವಂತೆ ವಿವಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ವಿದ್ಯಾರ್ಥಿಗಳು ಮನವಿ ಮಾಡಿದ್ದನ್ನು ಕಾರಣವಾಗಿಟ್ಟುಕೊಂಡು ಹಂಪಿ ವಿವಿಯ ಕುಲಸಚಿವರು ವಿದ್ಯಾರ್ಥಿಗಳನ್ನು ವಿವಿಯಿಂದ ಹೊರ ಹಾಕಲು ಶೋಕಾಸ್ ನೋಟಿಸ್ ನೀಡಿರುವುದನ್ನು ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್ ಎಫ್ ಐ )ಖಂಡಿಸುತ್ತದೆ ವಿವಿಯವರು ಕೂಡಲೇ ನೋಟಿಸ್ ವಾಪಸ್ ಪಡೆಯುವಂತೆ ಸಂಘಟನೆಯ ರಾಜ್ಯಾಧ್ಯಕ್ಷ ಅಮರೇಶ್ ಕಡಗದ್ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಸಂಶೋಧನಾ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಕಳೆದ 40 ತಿಂಗಳಿಂದ ಫೆಲೋಶಿಪ್ ಬಾರದೇ ಇರುವುದರಿಂದ ವಿದ್ಯಾರ್ಥಿಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಸಂಶೋಧನೆ ಮತ್ತು ದಾಖಲೆಗಳ ಜೋಡಣೆಗೆ ಹಣ ಅವಶ್ಯಕವಾಗಿದ್ದು, ಹಣದ ಕೊರತೆಯಿಂದಾಗಿ ವಿದ್ಯಾರ್ಥಿಗಳು ಓದಿನ ಕಡೆ ಲಕ್ಷ್ಯ ವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೂಡಲೇ ಶಿಷ್ಯ ವೇತನವನ್ನು ಬಿಡುಗಡೆ ಮಾಡುವಂತೆ ಹಂಪಿ ವಿವಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕಾರ್ಯಕ್ರಮದಲ್ಲಿ ಮನವಿ ಮಾಡಿದ್ದೇನೆ, ಇದನ್ನು ನೆಪವಾಗಿಟ್ಟುಕೊಂಡು ಎ.ಕೆ. ದೊಡ್ಡಬಸವರಾಜ್ ಎಂಬ ಸಂಶೋಧನಾ ವಿದ್ಯಾರ್ಥಿಗೆ ಕುಲಸಚಿವರು ನಿಮ್ಮನ್ನು ವಿವಿಯಿಂದ ಅಥವಾ ಪಿಎಚ್ ಡಿ ಕೋರ್ಸ್ ನಿಂದ ಯಾಕೆ ಹೊರಗೆ ಹಾಕಬಾರದು ಎನ್ನುವ ಶೋಕಾಸ್ ನೋಟಿಸನ್ನು ಜಾರಿ ಮಾಡಿದ್ದು ಇದು ಪ್ರಜಾಪ್ರಭುತ್ವ, ಸಂವಿಧಾನಕ್ಕೆ ವಿರುದ್ಧವಾಗಿದೆ. ಉನ್ನತ ಶಿಕ್ಷಣದಲ್ಲಿ ಎಸ್ಸಿ ಎಸ್ಟಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಓದಬೇಕು. ಹೆಚ್ಚಿನ ಸಂಶೋಧನೆ ಮಾಡಿ ಉನ್ನತ ಹುದ್ದೆಗೇರಬೇಕೆನ್ನುವ ಸರ್ಕಾರದ ಉದ್ದೇಶಗಳಿಗೆ ವಿವಿಯ ಕುಲಸಚಿವರು ನೀಡಿರುವ ನೋಟಿಸ್ ಮಾರಕವಾಗಿದೆ ಎಂದರು.
ಇದನ್ನೂ ಓದಿ:ಯುವಕನ ಕಣ್ಣಿನಲ್ಲಿತ್ತು 3 ಸೆಂಮೀ ಜೀವಂತ ಹುಳ!: ಶಸ್ತ್ರಚಿಕಿತ್ಸೆ ಯಶಸ್ವಿ
ವಿವಿಗೆ ಮುಖ್ಯಮಂತ್ರಿಗಳು ಭೇಟಿ ನೀಡಿದಾಗ ಬೇಡಿಕೆಗಳನ್ನ ಸಲ್ಲಿಸುವುದು ವಾಡಿಕೆಯಾಗಿದ್ದು, ಇದನ್ನೇ ಕಾರಣವಾಗಿಟ್ಟುಕೊಂಡು ನೋಟಿಸ್ ನೀಡಿರುವುದು ಕಳವಳಕಾರಿಯಾಗಿದೆ. ಶೋಕಾಸ್ ನೋಟಿಸ್ ನಲ್ಲಿ ಈ ಹಿಂದೆ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ವಿವಿಯಲ್ಲಿ ಎ.ಕೆ. ದೊಡ್ಡಬಸವರಾಜ್ ಅವರು ಹೋರಾಟ ಮಾಡಿದ ಸಂದರ್ಭದಲ್ಲಿ ದಾಖಲಾಗಿರುವ ಕೇಸ್ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ ಕೌಂಟರ್ ಕೇಸ್ ಮಾಡಿರುವ ಕುರಿತು ಮಾಹಿತಿ ನೀಡಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಹೋರಾಟದ ಹಕ್ಕನ್ನು ಅಡಗಿಸುವ ಷಡ್ಯಂತ್ರ ನಡೆಯುತ್ತಿದ್ದು, ವಿವಿಧ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ. ಕೂಡಲೇ ವಿವಿ ಯವರು ಶೋಕಾಸ್ ನೋಟಿಸ್ ವಾಪಸ್ ಪಡೆಯಬೇಕು. ಜತೆಗೆ ಹಿಂದುಳಿದ ವಿದ್ಯಾರ್ಥಿಗಳಿಗೆ ಹಣವನ್ನು ನೇರವಾಗಿ ಅವರ ವೈಯಕ್ತಿಕ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೂ ಸಹ ನೇರವಾಗಿ ವಿದ್ಯಾರ್ಥಿಗಳ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರದಿಂದ ವಿವಿಗೆ ಮಂಜೂರಾಗಿರುವ ಎಸ್ಸಿ ಎಸ್ಟಿ 24 ಕೋಟಿ ಹಣದ ಕುರಿತು ವಿವಿ ಕುಲಪತಿ ಅವರು ಲೆಕ್ಕ ಪತ್ರ ಕೊಡಬೇಕು. 40 ತಿಂಗಳ ಫೆಲೋಶಿಪ್ ಹಣ ಮಂಜೂರು ಮಾಡುವಂತೆ ಹಲವು ತಿಂಗಳುಗಳಿಂದ ಹೋರಾಟ ನಡೆಸಲಾಗುತ್ತಿದೆ. ಸಚಿವರಾದ ಬಿ. ಶ್ರೀರಾಮುಲು, ಆನಂದ್ ಸಿಂಗ್ ಸೇರಿದಂತೆ ಉನ್ನತ ಶಿಕ್ಷಣ ಸಚಿವರಿಗೂ ಮನವಿ ಪತ್ರ ಸಲ್ಲಿಸಿದರೂ ಇದುವರೆಗೂ ಸಮಸ್ಯೆಯ ಪರಿಹಾರಕ್ಕೆ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಉನ್ನತ ಶಿಕ್ಷಣದಲ್ಲಿ ಎಸ್ಸಿ ಎಸ್ಟಿ ಹಿಂದುಳಿದ ವಿದ್ಯಾರ್ಥಿಗಳು ಮೇಲೆ ಬರಬಾರದು ಎನ್ನುವ ದುರುದ್ದೇಶ ಸರ್ಕಾರಕ್ಕೆ ಇದ್ದಂತಿದೆ ಎಂದು ಕಡಗದ್ ಅನುಮಾನ ವ್ಯಕ್ತಪಡಿಸಿದ್ದಾರೆ.