Advertisement

ಕಟ್ಟುನಿಟ್ಟಿನ ಪರೀಕ್ಷೆಗೆ ಸೂಚನೆ

03:59 PM Mar 22, 2018 | |

ಸಿಂದಗಿ: ಪ್ರಸಕ್ತ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಕಲು ಮತ್ತು ಭಯ ಮುಕ್ತ ವಾತಾವರಣದಲ್ಲಿ ನಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್‌ ಬಿರಾದಾರ ಹೇಳಿದರು.

Advertisement

ಪಟ್ಟಣದ ಅಂಜುಮನ್‌ ಪ್ರೌಢಶಾಲೆ ಸಭಾಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಡಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮುಖ್ಯ ಅಧಿಕ್ಷಕರ, ಜಾಗೃತ ದಳದ ಮುಖ್ಯಸ್ಥರಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಸಕ್ತ ವರ್ಷದಲ್ಲಿ ತಾಲೂಕಿನ 5 ಕ್ಲಸ್ಟರ್‌ಗಳ 17 ಪರೀಕ್ಷಾ ಕೇಂದ್ರಗಳಲ್ಲಿ 2766 ಬಾಲಕರು, 2100 ಬಾಲಕಿಯರು ಸೇರಿ 4866 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. 17 ಪರೀಕ್ಷಾ ಕೇಂದ್ರಗಳಿಗೆ 5 ಸಂಚಾರಿ ಜಾಗೃತದಳ, 17 ಜನ ಮುಖ್ಯ ಅಧೀಕ್ಷಕರು, 17 ಕಸ್ಟೋಡಿಯನ್‌, 17 ಜನ ಸ್ಥಾನಿಕ ಜಾಗೃತ ದಳ ಸೇರಿದಂತೆ ಇತರರನ್ನು ನೇಮಕ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್‌ ಸೇರಿದಂತೆ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಸಂಪೂರ್ಣ ನಿಷೆಧಿಸಲಾಗಿದೆ ಎಂದರು.

ನಕಲು ಮುಕ್ತ ಪರೀಕ್ಷೆ ನಡೆಸಲು ಎಲ್ಲ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ನಕಲು ಸರಬರಾಜು ಕಂಡು ಬಂದಲ್ಲಿ ಮತ್ತು ಗುಂಪಾಗಿ ಬಂದು ನಕಲು ಸರಬರಾಜು ಮಾಡಲು ಬಂದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ಭಯಮುಕ್ತವಾಗಿ ಪರೀಕ್ಷೆ ಬರೆಯಲು ಜೂನ್‌ ತಿಂಗಳಿನಿಂದಲೇ ಪೂರ್ವ ತಯಾರಿ ಜೊತೆಗೆ ವಿಷಯವಾರು ತರಬೇತಿ ನೀಡಲಾಗಿದೆ. ಪರೀಕ್ಷೆ ಹೇಗೆ ಬರೆಯಬೇಕು ಎಂದು ಕಾರ್ಯಾಗಾರ ಮಾಡಲಾಗಿದೆ. ಸ್ವತಃ ತಾವು ಪ್ರೌಢಶಾಲೆಗಳಿಗೆ ಬೇಟಿ ನೀಡಿ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್‌ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿರುವ ಆತಂಕಗಳಿಗೆ ಪರಿಹಾರ ನೀಡಿದ್ದೇನೆ ಎಂದರು. 

Advertisement

ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್‌ ಅಧಿಕಾರಿ ಎಂ.ಎಫ್‌. ಅರಳಿಮಟ್ಟಿ ಮಾತನಾಡಿ, ತಾಲೂಕಿನ ಪರೀಕ್ಷಾ ಕೇಂದ್ರಗಳಲ್ಲಿ ಸೌಕರ್ಯಗಳ ಬಗ್ಗೆ ಪರಿಶೀಲನೆ ಮಾಡಲಾಗಿದೆ. ನಕಲು ಮುಕ್ತ ಪರೀಕ್ಷೆ ನಡೆಸಲು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನೆಲದ ಮೇಲೆ ಪರೀಕ್ಷೆ ಬರೆಯುವಂತಿಲ್ಲ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಡೆಸ್ಕ್ ವ್ಯವಸ್ಥೆ ಮಾಡಬೇಕು. ಅಂಗವಿಕಲರಿಗೆ ಕೆಳಮಹಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು. ಪರೀಕ್ಷೆಯಲ್ಲಿ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬಿಳಗಿ, ಎ.ಎಂ. ಬಿರಾದಾರ, ಜಿ.ಎಸ್‌. ಗುಣಾರಿ, ಮುರುಗೇಶ ನಾರಾಯಣಪುರ, ಶಿರಸ್ತೇದಾರ್‌ ಎಂ.ಎಸ್‌. ಸಿಂಗೆ ವೇದಿಕೆಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next