Advertisement

ಸಂತ್ರಸ್ತರಿಗೆ ಶೀಘ್ರ ಪರಿಹಾರಕ್ಕೆ ಸೂಚನೆ

02:32 PM Apr 01, 2022 | Team Udayavani |

ಬೀದರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಶೀಘ್ರ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಬೀದರ ಉಪ ವಿಭಾಗಾಧಿಕಾರಿ ಮಹಮ್ಮದ್‌ ನಯೀಮ್‌ ಮೊಮಿನ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ನಡೆದ 2022ನೇ ಸಾಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಉಸ್ತುವಾರಿ ಸಮಿತಿ ಹಾಗೂ ಸಫಾಯಿ ಕರ್ಮಚಾರಿ ಉಸ್ತುವಾರಿ ಸಮಿತಿಯ ಮೊದಲ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಂತ್ರಸ್ತರ ದಾಖಲೆಗಳನ್ನು ತಕ್ಷಣ ಪಡೆಯಬೇಕು. ಸಂಬಂಧಪಟ್ಟ ಪ್ರಕ್ರಿಯೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಬೀದರ ಉಪ ವಿಭಾಗ ವ್ಯಾಪ್ತಿಯ ಬೀದರ ಹಾಗೂ ಔರಾದ ತಾಲೂಕುಗಳಲ್ಲಿ ಮೂರು ತಿಂಗಳ ಅವಧಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಎರಡು ಪ್ರಕರಣಗಳು ದಾಖಲಾಗಿವೆ. ಈ ಎರಡೂ ಪ್ರಕರಣಗಳು ಔರಾದ ತಾಲೂಕಿನಲ್ಲೇ ದಾಖಲಾಗಿವೆ ಎಂದು ಸಮಿತಿ ಸದಸ್ಯ ಕಾರ್ಯದರ್ಶಿಯಾದ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಅನಿಲಕುಮಾರ ಮೇಲ್ದೊಡ್ಡಿ ಸಭೆಗೆ ಮಾಹಿತಿ ನೀಡಿದರು.

2021ರಲ್ಲಿ ಬೀದರನಲ್ಲಿ ಮೂರು ಹಾಗೂ ಔರಾದನಲ್ಲಿ ಏಳು ಸೇರಿ ಒಟ್ಟು 10 ಪ್ರಕರಣಗಳು ದಾಖಲಾಗಿದ್ದವು. ಎಲ್ಲ ಪ್ರಕರಣಗಳಲ್ಲೂ ಸಂತ್ರಸ್ತರಿಗೆ ಪರಿಹಾರ ಒದಗಿಸಲಾಗಿದೆ. ಬೀದರ ಮತ್ತು ಔರಾದ ತಾಲೂಕಿನ 24 ಅರ್ಹ ಸಫಾಯಿ ಕರ್ಮಚಾರಿಗಳನ್ನು ಸ್ವ ಉದ್ಯೋಗಕ್ಕೆ ನೆರವಾಗುವ ನೇರ ಸಾಲ ಯೋಜನೆಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಪ್ರೊಬೆಷನರಿ ಐಎಎಸ್‌ ಅಧಿಕಾರಿ ಕೀರ್ತನಾ, ಡಿವೈಎಸ್‌ಪಿ ಕೆ.ಎಂ. ಸತೀಶ್‌, ಬೀದರ ತಹಶೀಲ್ದಾರ್‌ ಅಣ್ಣಾರಾವ್‌ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಔರಾದ ತಾಲೂಕು ಸಹಾಯಕ ನಿರ್ದೇಶಕ ಸುಭಾಷ, ಉಸ್ತುವಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಎಂ.ಎಸ್‌. ಕಟಗಿ, ಸುಧಾಕರ ಏಕಂಬೇಕರ್‌, ನಗರಸಭೆಯ ಪರಿಸರ ಎಂಜಿನಿಯರ್‌ ರವೀಂದ್ರ ಕಾಂಬಳೆ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಕ್ಷೇತ್ರ ಅಭಿವೃದ್ಧಿ ಅಧಿಕಾರಿ, ವ್ಯವಸ್ಥಾಪಕ ರಮೇಶ ಗೋಖಲೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next