ಮೈಸೂರು: ಕನ್ನಡ ಕಲಿಸದ ಶಾಲೆಗಳನ್ನು ಗುರುತಿಸಿ ಅಂತಹ ಶಾಲೆಗಳಿಗೆ ನೋಟಿಸ್ ನೀಡುವ ಮೂಲಕ ಎಚ್ಚರಿಸಿ ಕನ್ನಡ ಕಲಿಕೆಗೆ ಹಂತ ಹಂತವಾಗಿ ವ್ಯವಸ್ಥೆ ಮಾಡಲಾಗುವುದು ಎಂದು ಕನ್ನಡ ಅಭಿವೃದ್ಧಿª ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಭರಣ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ತಂತ್ರಜ್ಞಾನ ಯೋಜನೆ ಸಂಯುಕ್ತಾಶ್ರಯದಲ್ಲಿ ನಗರದ ಆಡಳಿತ ತರಬೇತಿ ಸಂಸ್ಥೆಯ ಚಾಣಕ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಇ-ಕನ್ನಡ ಕಮ್ಮಟ ಫಲಶೃತಿಯ ಸಂಬಂಧ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯದ ಎಲ್ಲಾ ಅಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕೆಂಬುದರ ಬಗ್ಗೆ ಅಧಿನಿಯಮವಿದ್ದರೂ ಕೆಲ ಶಾಲೆಗಳ ಆಡಳಿತ ಮಂಡಳಿ ಈ ನಿಯಮವನ್ನು ಗಾಳಿಗೆ ತೂರಿ, ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವಲ್ಲಿ ನಿರ್ಲಕ್ಷ್ಯ ವಹಿಸಿವೆ. ಈ ಹಿನ್ನೆಲೆಯಲ್ಲಿ ಮೇಲ್ನೊಟಕ್ಕೆ ಕನ್ನಡ ಕಲಿಸದ 150 ಶಾಲೆಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ಮೂರು ಶಾಲೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ನ್ಯಾಯಾಲಯ ಕೂಡ ಶಾಲೆ ಸಂಬಂಧ ಶಿಕ್ಷಣ ಇಲಾಖೆಯ ಅಧಿಕಾರಿಗಳು ನೀಡುವ ದಾಖಲೆಗಳನ್ನೇ ಗಮನಿಸಲಿದ್ದು, ಮೇಲ್ನೊಟಕ್ಕೆ ಶಾಲೆಯಲ್ಲಿ ಕನ್ನಡ ಕಲಿಸುತ್ತಿಲ್ಲ ಎಂಬುದನ್ನು ಸಾಬೀತು ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆಯ ಗಮನಕ್ಕೆ ತಂದು ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗದೇ ಇದ್ದರೂ, ಸರಿಯಾಗಿ ಪರಾಮರ್ಶಿಸದೇ ಅನುಮತಿ ನೀಡುವ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಲಾಗುವುದು ಎಂದರು.
ಕೇಂದ್ರಿಯ, ಅಂತಾರಾಷ್ಟ್ರೀಯ ಪಠ್ಯಕ್ರಮ ಮತ್ತು ರಾಜ್ಯ ಪಠ್ಯಕ್ರಮದ ಅಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಕಲಿಸುವ ವಿಚಾರ ಕೇವಲ ದಾಖಲೆಗಳಲ್ಲಿ ಮಾತ್ರ ಇದ್ದು, ಶಾಲೆಗಳಲ್ಲಿ ಕನ್ನಡ ಕಲಿಸುವ ಪರಿಪಾಠವೇ ಇರುವುದಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ನೋಟಿಸ್ ನೀಡಿದರೆ ತಕ್ಷಣ ಶಾಲೆಗಳ ಆಡಳಿತ ಮಂಡಳಿ ಕೋರ್ಟ್ ಮೊರೆ ಹೋಗುವ ಮೂಲಕ ಹಿನ್ನಡೆಯಾಗುವಂತೆ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿಯೂ ಕನ್ನಡ ನಾಮಫಲಕ ಅಳವಡಿಸುವ ಸಂಬಂಧ ಕೆಲ ವಾಣಿಜ್ಯ ಮಳಿಗೆಗಳಿಗೆ ನೋಟಿಸ್ ನೀಡಲಾಗಿತ್ತು. ತಕ್ಷಣ ಕೆಲ ಮಳಿಗೆದಾರರು ಕೋರ್ಟ್ ಮೊರೆ ಹೋಗುವ ತಡೆಯಾಜ್ಞೆ ತಂದರು. ಇದರಿಂದ ಹಂತ ಹಂತವಾಗಿ ನೋಟಿಸ್ ನೀಡುವ ಮೂಲಕ ಮಳಿಗೆದಾರರಿಗೆ ಎಚ್ಚರಿಕೆ ನೀಡುವ ಕೆಲಸವನ್ನು ಪ್ರಾಧಿಕಾರದಿಂದ ಮಾಡಲಾಗುತ್ತಿದೆ ಎಂದು ತಿಳಿಸಿದರು.