Advertisement

ಕಾಮಗಾರಿ ತ್ವರಿತ ಅನುಷ್ಠಾನಕ್ಕೆ ಸೂಚನೆ

03:00 PM May 27, 2017 | Team Udayavani |

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ದ್ವಿತೀಯ ಹಂತದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಗೊಂಡಿದ್ದರೂ ತ್ವರಿತಗತಿಯಲ್ಲಿ ಕಾಮಗಾರಿ ಅನುಷ್ಠಾನಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಅಧ್ಯಕ್ಷ ಪಿ.ಮಣಿವಣ್ಣನ್‌ ಹೇಳಿದರು. 

Advertisement

ಐಟಿ ಪಾರ್ಕ್‌ನ ಕೆಯುಐಡಿಎಫ್ಸಿ ಪ್ರಾದೇಶಿಕ ಕಚೇರಿಯಲ್ಲಿ ನಡೆದ ಸ್ಮಾರ್ಟ್‌ಸಿಟಿ ನಿರ್ದೇಶಕ ಮಂಡಳಿ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸ್ಮಾರ್ಟ್‌ ಸಿಟಿ ಯೋಜನೆಗೆ ಅಗತ್ಯ ಅನುದಾನ ನೀಡುತ್ತಿವೆ. ತ್ವರಿತಗತಿಯಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಬೇಕು. 

ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಸಮರ್ಪಕ ಅನುಷ್ಠಾನ ಮುಖ್ಯ ಎಂದರು. ತ್ವರಿತ ಗತಿಯಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ಟೆಂಡರ್‌ ಪ್ರಕ್ರಿಯೆ ಆರಂಭಗೊಳಿಸಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಿತ ಅಧಿಕಾರಿಗಳು ಸಹಕಾರ ನೀಡಬೇಕು ಎಂದರು. 

ರಾಜ್ಯ ಸರ್ಕಾರ ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡುತ್ತಿದ್ದು, ಸಂಬಂಧಿತ ಇಲಾಖೆ ಅಧಿಕಾರಿಗಳು ಯೋಜನೆ ಅನುಷ್ಠಾನಕ್ಕೆ ಪೂರಕ ಸಹಕಾರ ನೀಡದಿದ್ದರೆ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು. 129 ಕೋಟಿ ರೂ. ಮೇಲ್ಛಾವಣಿ ಸೌರ ವಿದ್ಯುತ್‌ ಉತ್ಪಾದನೆ ಯೋಜನೆಗೆ ನೇರ ಟೆಂಡರ್‌ಗೆ ಅವಕಾಶ ನೀಡಲು ಸಾಧ್ಯವಿದೆಯೋ ಪರಿಶೀಲಿಸಬೇಕು. 

ಸುಮ್ಮನೆ ಸಮಯ ವ್ಯರ್ಥವಾಗುವುದು ಬೇಡ. ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಅನುಷ್ಠಾನಗೊಳಿಸಬೇಕು. ಸೌರ ವಿದ್ಯುತ್‌ ಉತ್ಪಾದನೆ ಯೋಜನೆಗೆ ಸಾಕಷ್ಟು ಕಂಪನಿಗಳು ಆಸಕ್ತಿ ಹೊಂದಿವೆ. ಈ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು. ಉಚಿತ ವೈ-ಫೈ ಕಾರಿಡಾರ್‌ ಮಾಡುವ ಕುರಿತು ಪುನರ್‌ ಆಲೋಚನೆ ಮಾಡುವುದು ಒಳಿತು.

Advertisement

ಕೆಲ ಹೊರ ದೇಶಗಳಲ್ಲಿ ಉಚಿತ ವೈ-ಫೈಯನ್ನು ಕೆಲ ಹ್ಯಾಕರ್‌ಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವೈ-ಫೈ ಉತ್ತಮ ಕೆಲಸಗಳಿಗೆ ಉಪಯೋಗವಾಗುವಂತಾಗಬೇಕು ಎಂದರು. ಕಾರ್ಪೋರೇಟ್‌ ಸಂಸ್ಥೆಯವರು ಸರ್ಕಾರಿ ಅಧಿಕಾರಿಗಳಿಗಿಂತ ವೇಗದ ಗತಿಯವರಾಗಿರುತ್ತಾರೆ ಎಂದೇ ನಾವು ಭಾವಿಸಿದ್ದೇವೆ.

ನೀವು ನಿಧಾನಗತಿಯಲ್ಲಿ ಕೆಲಸ ಮಾಡಿದರೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಅಧಿಕಾರಿಗಳಗೂ ವ್ಯತ್ಯಾಸ ಇರುವುದಿಲ್ಲ ಎಂದರು. ಪ್ರೈಸ್‌ವಾಟರ್‌ ಹೌಸ್‌ಕೂಪರ್ ಇಂಟರ್‌ ನ್ಯಾಷನಲ್‌ ಲಿಮಿಟೆಡ್‌ನ‌ ಪ್ರತಿನಿಧಿ ಅನ್ವೇಷ ಮಾತನಾಡಿ, ಯೋಜನೆಯನ್ನು ಸಾಧ್ಯವಾದಷ್ಟು ತ್ವರಿತ ಗತಿಯಲ್ಲಿ ಅನುಷ್ಠಾನಗೊಳಿಸಲು ಸಂಸ್ಥೆ ಉತ್ಸುಕವಾಗಿದೆ.

ಈಗ ಕೆಲವು ಕಾಮಗಾರಿಗಳ ಸಮೀಕ್ಷೆ ನಡೆಯುತ್ತಿದ್ದು, ನಂತರ ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು. ಮಹಾಪೌರ ಡಿ.ಕೆ.ಚವ್ಹಾಣ, ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಜಿಪಂ ಸಿಇಒ ಸ್ನೇಹಲ್‌, ಎಸ್‌.ಕೆ.ಸಕ್ರಿ, ಇತರರು ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next