Advertisement

ಕುಂದಾಪುರ: ಕೆರೆಯ ಕಲ್ಲನು ಕೆರೆಗೆ ಚೆಲ್ಲಿದ ಕುಂದಾಪುರ ಪುರಸಭೆ!

03:55 PM Jun 14, 2024 | Team Udayavani |

ಕುಂದಾಪುರ: ಪುರಸಭೆ ವ್ಯಾಪ್ತಿಯ ಕೆರೆಗಳ ಪುನಶ್ಚೇತನಕ್ಕೆ ಹೊರಟ ಪುರಸಭೆಗೆ ಪ್ರಥಮ ಚುಂಬನಂ ದಂತಭಗ್ನಂ ಎಂಬಂತೆ ಗುತ್ತಿಗೆದಾರರ ಕಾಮಗಾರಿಯ ಗುಣಮಟ್ಟದಿಂದ ಮೊದಲ ಮಳೆಗೇ ಕಲ್ಲುಗಳು ಕೆರೆಗೆ ಬಿದ್ದು ಮುಖಭಂಗವಾಗಿದೆ. ಆದರೆ ಕೆರೆಗಳಲ್ಲಿ ನೀರು ತುಂಬಬೇಕೆಂಬ ಉದ್ದೇಶ ಈಡೇರಿದೆ.

Advertisement

ಬೇಸಗೆಯಲ್ಲಿ ನೀರಿನ ಅಗತ್ಯ ಬಿದ್ದರೆ ಹಾಗೂ ಮಳೆಗಾಲದ ನೀರು ಇಂಗಲಿ, ಜಲಮರುಪೂರಣ ಆಗಲಿ ಎಂಬ ಉದ್ದೇಶದಿಂದ ಪುರಸಭೆ ವ್ಯಾಪ್ತಿಯ ಪ್ರಮುಖ ಕೆರೆಗಳ ಪುನಶ್ಚೇತನಕ್ಕೆ ಕ್ರಮ ವಹಿಸಲಾಗಿದೆ. ಮುಂಗಾರು ಪೂರ್ವ ಸಿದ್ಧತೆ ಎಂಬಂತೆ ಮೇ ತಿಂಗಳಲ್ಲಿ ವಿಟಲವಾಡಿ ರಸ್ತೆಯಲ್ಲಿರುವ ಚಟ್‌ ಕೆರೆಯ ಸ್ವಚ್ಛತೆ ಹಾಗೂ ಹೂಳೆತ್ತುವ ಕಾರ್ಯ ಪುರಸಭೆ ವತಿಯಿಂದ ನಡೆದಿದೆ. ಅಂತೆಯೇ ಹುಂಚಾರಬೆಟ್ಟು ಕೆರೆಯನ್ನು 10 ಲಕ್ಷ ರೂ.ಗಳಲ್ಲಿ ದುರಸ್ತಿಗೊಳಿಸಲಾಗಿದೆ.ಉಪಾಧ್ಯಕ್ಷ ಸಂದೀಪ್‌ ಖಾರ್ವಿ ಅವರ ವಾರ್ಡ್‌ಗೆ ಸಂಬಂಧಪಟ್ಟ ಕೆರೆ, ಜೈಹಿಂದ್‌ ಹೋಟೆಲ್‌ ಬಳಿಯ ಕೆರೆ 5 ಲಕ್ಷ ರೂ. ಮೂಲಕ ದುರಸ್ತಿಯಾಗಿದೆ. ಇನ್ನೂ 2 ಕೆರೆಗಳ ಪುನಶ್ಚೇತನಕ್ಕೆ ಅನುದಾನ ಇದ್ದು ಯಾವ ಕೆರೆ ಎಂದು ಪೂರ್ಣ ಹಂತದ ತೀರ್ಮಾನವಾಗಿಲ್ಲ.

ಕುಸಿತ ಆರಂಭ
ಕಾಮಗಾರಿ ನಿರ್ವಹಿಸಿದವರ ಎಡವಟ್ಟೋ, ಮುಂದಾಲೋಚನೆ ಇರಲಿಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಚಟ್‌ಕೆರೆಯ ಬದಿ ಕುಸಿತ ಆರಂಭವಾಗಿದೆ. 15 ಲಕ್ಷ ರೂ. ವೆಚ್ಚದಲ್ಲಿ ನಡೆಸಿದ ಕಾಮಗಾರಿ ಕೆಲವೇ ದಿನದಲ್ಲಿ ಕುಸಿತಕ್ಕೊಳಗಾದರೆ ಗುಣಮಟ್ಟ ಹೇಗಿರಬಹುದು ಎಂದು ಜನ ಶಂಕಿಸುತ್ತಿದ್ದಾರೆ. ತಡೆಗೋಡೆ ಬದಿಗೆ ಸರಿಯಾಗಿ ಕಲ್ಲು ಕಟ್ಟದೇ ಇರುವುದು, ಕಲ್ಲು ಕಟ್ಟಿದಲ್ಲಿ ಸರಿಯಾಗಿ ಮಣ್ಣು ತುಂಬದೇ ಇರುವುದು ಕುಸಿತಕ್ಕೆ ಕಾರಣ ಎನ್ನಲಾಗಿದೆ. ಒಟ್ಟಿನಲ್ಲಿ ಕೆರೆಯ ಬದಿ ಕುಸಿಯಬಾರದು ಎಂದು ಕಟ್ಟಿದ ತಡೆಗೋಡೆಯೇ ಕುಸಿಯುತ್ತಿದೆ! ದೊಡ್ಡ ದೊಡ್ಡ ಕೆರೆ ಮಾಡುವಾಗ ಕಲ್ಲು ಸಿಕ್ಕಿದಾಗ ತೆಗೆದು ಮೇಲೆ ಹಾಕಿದಂತೆ ಇಲ್ಲಿ ಕೆರೆಯ ಕಲ್ಲನು ಕೆರೆಗೆ ಚೆಲ್ಲಿದರು ಎಂದಾಗಿದೆ. ಅದಕ್ಕಿಂತ ಮುಖ್ಯವಾಗಿ ಸಾರ್ವಜನಿಕ ಹಣ ಪೋಲಾಗಿದೆ.

ಎಂಜಿನಿಯರ್‌ ಕೊರತೆ
ಪುರಸಭೆಯಲ್ಲಿ ಎಂಜಿನಿಯರ್‌ ಆಗಿದ್ದ ಸತ್ಯ ಅವರು ವರ್ಗವಾಗಿ ವರ್ಷಗಳೇ ಆದವು. ಇನ್ನೂ ಇಲ್ಲಿಗೆ ಎಂಜಿನಿಯರ್‌ ನೇಮಕವಾಗಿಲ್ಲ. ಸದ್ಯ ಪರಿಸರ ಎಂಜಿನಿಯರ್‌ ಅವರೇ ಸಿವಿಲ್‌ ಕಾಮಗಾರಿ, ಪರಿಸರ ಎಂಜಿನಿಯರಿಂಗ್‌ನ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿಯೂ ತುಸು ಒತ್ತಡ, ಗೊಂದಲ ಉಂಟಾಗಿದೆ.

ಸದಸ್ಯರ ಗಮನಕ್ಕೆ ಇಲ್ಲ
ಪುರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳಿದ್ದರೂ ಆಡಳಿತ ಮಂಡಳಿ ಇಲ್ಲದ ಕಾರಣ ಸದಸ್ಯರನ್ನು ಕತ್ತಲಲ್ಲಿ
ಇಟ್ಟಂತಾಗಿದೆ. ಸದಸ್ಯರಿಗೆ ಪುರಸಭೆಯ ಅಭಿವೃದ್ಧಿ ಕಾರ್ಯಗಳ ಮಾಹಿತಿ ಸರಿಯಾಗಿ ದೊರೆಯುವುದಿಲ್ಲ. ಅಧಿಕಾರಿಗಳದ್ದೇ ದರ್ಬಾರ್‌ ಆಗಿದೆ. ಇದರಿಂದ ಅನೇಕ ಕಾಮಗಾರಿಗಳು ಸದಸ್ಯರ ಗಮನಕ್ಕೆ ಬರದೇ ನಡೆಯುತ್ತಿವೆ. ಸ್ಥಳೀಯವಾಗಿ ಸಾಕಷ್ಟು ಗೊಂದಲಕ್ಕೆ ಕಾರಣವಾಗುತ್ತಿದೆ.

Advertisement

ಐದು ಬಾವಿಗಳ ದುರಸ್ತಿ
ಎಲ್‌ಐಸಿ ರಸ್ತೆ, ನಾರಾಯಣಗುರು ಮಂದಿರ ಬಳಿ, ಗಾಂಧಿ ಪಾರ್ಕ್‌ ಒಳಗೆ, ಭಂಡಾರ್‌ಕಾರ್ಸ್‌ ಕಾಲೇಜು ಬಳಿ ಹಾಗೂ ಹಣ ಮಿಕ್ಕಿದರೆ ಇನ್ನೊಂದು ಅಥವಾ ಎರಡು ಬಾವಿಗಳ ದುರಸ್ತಿಗೆ ಯೋಜಿಸಲಾಗಿದೆ. ನೀರು ಶುಚಿಗೊಳಿಸುವುದು,
ಮೆಶ್‌ ಅಳವಡಿಕೆ, ರಿಂಗ್‌ ಅಳವಡಿಕೆ ನಡೆಯಲಿದೆ. 5 ಬಾವಿಗಳನ್ನು 10 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮಾಡಲಾಗಿದೆ.

ಪ್ರಮುಖ ಕೆರೆಗಳ ಪುನಃಶ್ಚೇತನಕ್ಕೆ ಚಾಲನೆ
ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ ಒಟ್ಟು 44 ಕೆರೆಗಳನ್ನು ಗುರುತಿಸಲಾಗಿದೆ. ಹಲವು ಕೆರೆಗಳು ಅತಿಕ್ರಮಣದಿಂದ ನಲುಗಿವೆ. ಪ್ರಮುಖ ಕೆರೆಗಳ ಉಳಿಸಿಕೊಳ್ಳುವ ನೆಲೆಯಲ್ಲಿ ವಿಶೇಷ ಅನುದಾನ ಬಳಕೆ ಮಾಡಿಕೊಂಡು ಪುನಃಶ್ಚೇತನಕ್ಕೆ ಚಾಲನೆ ನೀಡಿದ್ದೇವೆ. ಕೆರೆ ಭೂಮಿ ಕಂದಾಯ ಇಲಾಖೆ ಅಧೀನದಲ್ಲಿದ್ದು, ಅತಿಕ್ರಮಣ ತೆರವಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಮುಂದೆ ಬರಬೇಕು.
*ಮಂಜುನಾಥ್‌, 
ಪುರಸಭೆ ಮುಖ್ಯಾಧಿಕಾರಿ

*ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next