Advertisement

ಪರಿಸರ ದಿನಾಚರಣೆಗೆ ಸಿದ್ಧತೆಗೆ ಸೂಚನೆ

09:05 PM Jun 03, 2019 | Lakshmi GovindaRaj |

ಚಾಮರಾಜನಗರ: ವಿಶ್ವ ಪರಿಸರ ದಿನವನ್ನು ಜಿಲ್ಲೆಯಲ್ಲಿ ಜೂನ್‌ 5 ರಂದು ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌.ಲತಾಕುಮಾರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ವಿಶ್ವ ಪರಿಸರ ದಿನ ಆಚರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ನಮ್ಮೆಲ್ಲರ ಜವಾಬ್ದಾರಿ: ಪ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಹೆಚ್ಚುತ್ತಿರುವ ಜಾಗತಿಕ ತಾಪಮಾನ, ನೀರಿನ ಅಭಾವ, ಅಂತರ್ಜಲ ಮಟ್ಟ ಕುಸಿತ, ಮುಂತಾದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಸಕ್ತ ವರ್ಷವನ್ನು ಜಲವರ್ಷ-2019 ಎಂದು ಘೋಷಿಸಿದ್ದು “ಸರ್ವರಿಗೂ ಜಲ, ಸದಾಕಾಲ ” ಎಂಬ ಧ್ಯೇಯದೊಂದಿಗೆ ಜಲಸಾಕ್ಷರತೆ, ನೀರಿನ ಪ್ರಜ್ಞಾವಂತ ಬಳಕೆ, ಜಲಸಂರಕ್ಷಣೆ, ಹಾಗೂ ಹಸಿರೀಕರಣ ಕುರಿತು ಜಾಗೃತಿ ಮೂಡಿಸುವ ಮತ್ತು ಜಲಮೂಲಗಳನ್ನು ಪುನಶ್ಚೇತನಗೊಳಿಸುವ ವಿಭಿನ್ನ ರೀತಿಯ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ ಎಂದರು.

ಇಲಾಖಾಧಿಕಾರಿಗಳು ಸಹಕಾರ ನೀಡಿ: ಭೂಮಿಯ ಮೇಲಿನ ಹಸಿರಿನ ಹೊದಿಕೆಯನ್ನು ಹೆಚ್ಚಿಸುವ, ಜಾಗತಿಕ ತಾಪಮಾನವನ್ನು ತಗ್ಗಿಸುವ ಪ್ರಮುಖ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಪರಿಸರ ದಿನವನ್ನು ಜಿಲ್ಲೆಯಾದ್ಯಂತ ವಿಶಿಷ್ಟವಾಗಿ ಆಚರಿಸುವ ಕುರಿತಂತೆ ಜಿಲ್ಲೆಯ ಎಲ್ಲಾ ಅನುಷ್ಠಾನ ಇಲಾಖಾಧಿಕಾರಿಗಳು ಸಹಕಾರ ನೀಡಬೇಕೆಂದು ತಿಳಿಸಿದರು.

ಸಸಿ ನಡೆಲು ಅವಕಾಶ: ಲಭ್ಯವಿರುವ ಎಲ್ಲಾ ಸಾರ್ವಜನಿಕ‌ ಸ್ಥಳಗಳಲ್ಲಿ, ಶಾಲಾ, ಕಾಲೇಜು ಆವರಣ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸಸಿ ನೆಡುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ ಅವರು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ರೈತರು ತಮ್ಮ ತಮ್ಮ ಜಮೀನುಗಳಲ್ಲಿಯೂ ಸಸಿ ನೆಡಲು ಅವಕಾಶವಿದೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

Advertisement

ಹೆಚ್ಚಿನ ಅರಿವು ಮೂಡಿಸಿ: ಜಿಲ್ಲೆಯು ಜಲಾಮೃತ ಕಾರ್ಯಕ್ರಮದ ಅನುಷ್ಠಾನದಲ್ಲಿ ಜಲಮೂಲಗಳ ಪುನಶ್ಚೇತನ ಹಾಗೂ ಹಸಿರೀಕರಣವನ್ನು ಪ್ರಾಥಮಿಕ ಆದ್ಯತೆಯಾಗಿ ಪರಿಗಣಿಸಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು.

ಗಿಡ ನೆಡಲು ಪ್ರೋತ್ಸಾಹಿಸಿ: ಜಿಲ್ಲೆಯ ಎಲ್ಲಾ ಅನುಷ್ಠಾನ ಇಲಾಖೆಗಳು ತಾಲೂಕು ಪಂಚಾಯ್ತಿ, ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿಯೂ ವಿಶ್ವ ಪರಿಸರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸುವ ಸಂಬಂಧ ಸಸಿ ನೆಡುವ ಜಾಗೃತಿ ಮೂಡಿಸುವ ವಿಭಿನ್ನ ಕಾರ್ಯಕ್ರಮಗಳ ಆಯೋಜನೆಗೆ ಒತ್ತು ನೀಡಬೇಕು. ಪ್ರತಿಯೊಬ್ಬರೂ ಗಿಡ ನೆಡುವ, ಗಿಡ ನೆಡಲು ಪ್ರೋತ್ಸಾಹಿಸುವ, ನೆಟ್ಟ ಗಿಡಗಳನ್ನು ಸಂರಕ್ಷಿಸುವ, ಕುರಿತು ಆಸಕ್ತಿ ವಹಿಸಬೇಕು ಎಂದರು.

ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿ: ಹಸಿರೇ-ಅಸ್ತಿತ್ವ ಅನಿವಾರ್ಯವಿದೆ ನಿಮ್ಮ ಸಹಭಾಗಿತ್ವ ಎಂಬ ಧ್ಯೇಯವಾಕ್ಯದೊಂದಿಗೆ ಸಾಮಾಜಿಕ ಜಾಗೃತಿ ಮೂಡಿಸುವ ಜಲಮೂಲಗಳನ್ನು ಅಭಿವೃದ್ಧಿಪಡಿಸುವ ಹಸಿರೀಕರಣಕ್ಕೆ ಆದ್ಯತೆ ನೀಡುವ ಕುರಿತು ಜಿಲ್ಲಾ ಪಂಚಾಯ್ತಿಯು ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಿದ್ದು. ಸಾರ್ವಜನಿಕರ ಸಹಭಾಗಿತ್ವದೊಂದಿಗೆ ರೂಪಿಸಲಾಗಿರುವ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೆ.ಎಸ್‌ ಲತಾಕುಮಾರಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಹನುಮನರಸಯ್ಯ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next