ಮುಂಡಗೋಡ: ಜಿಲ್ಲೆಯಲ್ಲಿಯೇ ಅತಿಹೆಚ್ಚು ಹೆಸ್ಕಾಂ ವಿದ್ಯುತ್ ಬಿಲ್‌ಅನ್ನು ಮುಂಡಗೋಡದ ಗ್ರಾಮ ಪಂಚಾಯತಿಯವರು ಬಾಕಿ ಇಟ್ಟುಕೊಂಡಿದ್ದೀರಿ ಈ ಬಿಲ್ ಹತ್ತು ದಿನಗಳೊಳಗಾಗಿ ಬಾಕಿಯಿರುವ ಹಣದ ಶೇ. 50ರಷ್ಟು ಹಣವನ್ನು ತುಂಬುವಂತೆ ಪಿಡಿಒಗಳಿಗೆ ಸಚಿವ ಶಿವರಾಮ ಹೆಬ್ಟಾರ್ ಸೂಚಿಸಿದರು.
ಬುಧವಾರ ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಿಡಿಒಗಳಿಗೆ ಸೂಚಿಸಿದರು.
ಈ ವಿದ್ಯುತ್ ಬಿಲ್‌ಗಳು ಬಹಳ ವರ್ಷಗಳಿಂದ ಬಾಕಿಯಿದೆ. ಹೆಸ್ಕಾಂ ಇಲಾಖೆಗೆ ಹಣ ತುಂಬದಿದ್ದರೆ ವಿದ್ಯುತ್ ಕಟ್ ಮಾಡುತ್ತಾರೆ. ಇದರಿಂದ ಬೀದಿ ದೀಪ ಮತ್ತು ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತದೆ. ಅಲ್ಲದೆ ನನ್ನ ಮತ್ತು ನಿಮ್ಮ ಮರ್ಯಾದೆ ಪ್ರಶ್ನೆಯಾಗುತ್ತದೆ. ಕಾರಣ ಬಾಕಿ ಇರುವ ಪಂಚಾಯಿತಿಗಳು ಅಭಿವೃದ್ಧಿ ಕೆಲಸ ಬದಿಗಿಟ್ಟು ಮೊದಲು ಬಾಕಿರುವ ಹಣದಲ್ಲಿ ಶೇ. 50ರಷ್ಟು ಹಣವನ್ನು ತುಂಬಿ. ಇದರಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಈಗಾಗಲೇ ಜನರಿಗೆ ಮತ್ತು ರೈತರಿಗೆ ಸರಕಾರ ಮತ್ತು ಹೆಸ್ಕಾಂ ಇಲಾಖೆ ಹಲವಾರು ಯೋಜನೆಯನ್ನು ಉಚಿತವಗಿ ನೀಡಿದೆ. ಅಲ್ಲದೇ ಹೆಸ್ಕಾಂ ಇಲಾಖೆ ನಷ್ಟದಲ್ಲಿದೆ. ಆದ್ದರಿಂದ ಸರ್ಕಾರದ ಯಾವುದೇ ಇಲಾಖೆಯವರು ಹೆಸ್ಕಾಂ ಇಲಾಖೆಯ ವಿದ್ಯುತ್ ಬಿಲ್ಲನ್ನು ಬಾಕಿ ಇಟ್ಟುಕೊಳ್ಳದಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಅಧಿಕಾರಿಗಳು ವರ್ಗಾವಣೆ ಪಡೆದಿದ್ದರೆ ಇಲಾಖೆಯ ಮುಖ್ಯಸ್ಥರು ನನ್ನ ಅನುಮತಿ ಇಲ್ಲದೆ ಬಿಡುಗಡೆ ಮಾಡದಿರಿ. ಮುಖ್ಯಸ್ಥರೇ ವರ್ಗಾವಣೆಗೊಂಡಿದ್ದರೆ ನಿಮ್ಮ ಮೇಲಾಧಿಕಾರಿಗಳ ಜತೆ ಮಾತನಾಡಿದ್ದೇನೆ, ನಿಮ್ಮನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ. ನಿಮ್ಮನ್ನು ಕಳಿಸಿ ತಾಲೂಕನ್ನು ಖಾಲಿ ಇಟ್ಟುಕೊಳ್ಳಲು ಆಗುವುದಿಲ್ಲ. ತಾಲೂಕಿನ ಅಭಿವೃದ್ಧಿಗೆ ಹಾಗೂ ಸಾರ್ವಜನಿಕರ ಸೇವೆಗೆ ನಿಮ್ಮ ಸಹಕಾರ ಅಗತ್ಯ. ಈ ಬಗ್ಗೆ ನನ್ನ ಮೆಲೆ ಅಧಿಕಾರಿಗಳು, ಸಿಬ್ಬಂದಿ ಅನ್ಯತಾ ಭಾವಿಸಬಾರದು. ತಮ್ಮ ಅನಾನುಕೂಲತೆ ಬಗ್ಗೆಯೂ ವಿಚಾರ ಮಾಡುತ್ತೇನೆ ಎಂದರು.
ಕೃಷಿ ಇಲಾಖೆ: ಕೃಷಿ ಇಲಾಖೆ ಅಧಿಕಾರಿ ಎಂ.ಎಸ್. ಕುಲಕರ್ಣಿ ಸಭೆಗೆ ಮಾಹಿತಿ ನೀಡುತ್ತಿದ್ದಂತೆ ರೈತರು ಕೃಷಿ ಅಧಿಕಾರಿ ತಪ್ಪು ಮಾಹಿತಿ ಸಭೆಗ ನೀಡುತ್ತಿದ್ದಾರೆ. ಯಾವ ಸೊಸೈಟಿಯಲ್ಲಿಯೂ ಯೂರಿಯಾ ಗೊಬ್ಬರವಿಲ್ಲ. ಇಪ್ಪತ್ತು, ಮೂವತ್ತು ಮೆಟ್ರಿಕ್ ಟನ್ ಗೊಬ್ಬರ ಸಂಗ್ರಹವಿದೆ ಎಂದು ತಪ್ಪು ಮಾಹಿತಿ ನೀಡುತ್ತಾರೆ. ಈಗ ಸೊಸೈಟಿಗಳಿಗ ಅವರನ್ನು ಕರೆದುಕೊಂಡು ಹೋಗೋಣ. ಯಾವ ಸೊಸೈಟಿಯಲ್ಲಿಯೂ ಗೊಬ್ಬರ ಸಂಗ್ರಹವಿಲ್ಲ. ಖಾಸಗಿ ಅಂಗಡಿಗಳಲ್ಲಿ ಗೊಬ್ಬರವಿದೆ. ಆದರೆ ಬೆಲೆ ಜಾಸ್ತಿಯಿದೆ ಎಂದು ರೈತರು ಕೃಷಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಮಧ್ಯ ಪ್ರವೇಶಿಸಿದ ಸಚಿವರು, ಯಾವ ಯಾವ ಸೊಸೈಟಿಯಲ್ಲಿ ಎಷ್ಟು ಗೊಬ್ಬರ ಬಂದಿದ ಎಂಬ ಬಗ್ಗೆ ಹದಿನೈದು ನಿಮಿಷದಲ್ಲಿ ಸಭೆಗೆ ಮಾಹಿತಿ ನೀಡಬೇಕು ಎಂದರು.
ನಂತರ ಜಂಟಿ ನಿರ್ದೇಶಕರು ಕೃಷಿ ಇಲಾಖೆಯೊಂದಿಗೆ ಮಾತನಾಡಿ ದಾಸ್ತುನು ಹಾಗೂ ಪೂರೈಕೆ ಮಾಹಿತಿ ಪಡೆದು ಗೊಬ್ಬರ ಕೊರತೆಯಾದರೆ ಮೊದಲೇ ಹೇಳಿ ನಾನು ತರಿಸಿಕೊಡುತ್ತೇನೆ. ರೈತರಿಗೆ ಗೊಬ್ಬರದ ಕೊರತೆಯಾಗಬಾರದು ಎಂದರು. ಕಂದಾಯ ಇಲಾಖೆಯ ವಿವಿಧ ಭಾಗದಲ್ಲಿ ಮತ್ತು ಪಹಣಿ ಪತ್ರಿಕೆ, ಖಾತಾ ಬದಲಾವಣೆ ಹಾಗೂ ಪಹಣಿ ಪತ್ರಿಕೆಯಲ್ಲಿರುವ ಸಾಲದ ಭೋಜಾ ಕಡಿಮೆ ಮಾಡಲು ಇಪ್ಪತ್ತೈದರಿಂದ ಐವತ್ತು ಸಾವಿರ ರೂ. ವರೆಗೂ ಲಂಚ ಕೇಳುತ್ತಾರೆ ಎಂದು ಜಿ.ಪಂ. ಮಾಜಿ ಸದಸ್ಯ ಎಲ್.ಟಿ. ಪಾಟೀಲ ಆರೋಪಿಸಿದರು.
ಸಚಿವ ಹೆಬ್ಟಾರ ಮಾತನಾಡಿ, ತಹಶೀಲ್ದಾರ್ ವರ್ಗಾವಣೆಗೊಂಡಿದ್ದು, ನಾಲ್ಕೈದು ದಿನದಲ್ಲಿ ಬೇರೆ ತಹಶೀಲ್ದಾರ್ ಬರುತ್ತಾರೆ. ಬಂದ ನಂತರ ಕಂದಾಯ ಇಲಾಖೆ, ಸರ್ವೇ ಇಲಾಖೆ, ಸಬ್ ರಜಿಷ್ಟರ್ ಇಲಾಖೆಯ ಪ್ರತ್ಯೇಕ ಸಭೆ ಮಾಡಿ ಅಲ್ಲಿಯ ವ್ಯವಸ್ಥೆ ಸರಿಪಡಿಸೋಣ ಎಂದರು.
ತೋಟಗಾರಿಕೆ ಇಲಾಖೆ: ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹೊಲದಲ್ಲಿ ಅಡಿಕೆ ಸಸಿಗಳನ್ನು ನೆಡಲು ಗ್ರಾಪಂನಿಂದ ಅನುಮೋದನೆ ತಂದರೂ ಸಹಾಯಕ ತೋಟಗಾರಿಕಾ ಅಧಿಕಾರಿ ಜಿಪಿಎಸ್ ಮಾಡದ ಸಸಿಗಳನ್ನು ನೆಟ್ಟಿದ್ದಿರಿ, ಇದನ್ನು ಮಾಡಲು ಬರುವುದಿಲ್ಲ ಎಂದು ರೈತರನ್ನು ಅಲೆದಾಡುವಂತೆ ಮಾಡುತ್ತಾರೆ. ಸಚಿವರಿಗೆ ಹೇಳುತ್ತೇವೆ ಎಂದರೆ ಬೇಕಾದದವರಿಗ ಹೇಳಿ ಎಂದು ಉಡಾಪೆಯಾಗಿ ಮಾತನಾಡುತ್ತಾರೆ ಎಂದು ರೈತರು ಹೇಳುತ್ತಿದ್ದಂತೆ, ಸಚಿವರು ಆ ಅಧಿಕಾರಿಯನ್ನು ಸಭೆಗೆ ಕರೆಯಿಸುವಂತೆ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ನಂತರ ಸಹಾಯಕ ನಿರ್ದೇಶಕರು ಸಮಜಾಯಿಸಿ ಉತ್ತರಿಸಿ, ಈ ರೀತಿ ಮುಂದೆಯಾಗದಂತೆ ಅವರಿಗೆ ತಿಳಿಸುತ್ತೇವೆ ಎಂದರು. ತಾಪಂ ಅಧಿಕಾರಿ ಪ್ರವೀಣ ಕಟ್ಟಿ, ಮುಖಂಡರಾದ ರವಿಗೌಡ ಪಾಟೀಲ, ಉಮೇಶ ಬಿಜಾಪುರ, ನಾಗಭೂಷಣ ಹಾವಣಗಿ, ಗುಡ್ಡಪ್ಪ ಕಾತೂರ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.