ಚಾಮರಾಜನಗರ: ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜ.8 ಹಾಗೂ 9ರಂದು ನಗರದಲ್ಲಿ ಆಯೋಜಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಏರ್ಪಾಡು ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಆಯೋಜನೆಗಾಗಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಅಗತ್ಯ ಸಿದ್ಧತೆ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕು. ಕುಡಿಯುವ ನೀರು, ಕ್ರೀಡಾಂಗಣದ ಸ್ವತ್ಛತೆ, ಇನ್ನಿತರ ಪ್ರಮುಖ ಕೆಲಸಗಳನ್ನು ನಗರಸಭೆ ಅಧಿಕಾರಿಗಳು ಕೈಗೆತ್ತಿಕೊಳ್ಳಬೇಕು ಎಂದು ತಿಳಿಸಿದರು.
ತೀರ್ಪುಗಾರರ ನಿಯೋಜನೆ: ಕ್ರೀಡಾಕೂಟದ ತೀರ್ಪುಗಾರರಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಶಿಕ್ಷಕರನ್ನು ನಿಯೋಜಿಸಬೇಕು. ಅದೇ ರೀತಿ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳ ತೀರ್ಪುಗಾರರ ನೇಮಕಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದರು.
ವ್ಯವಸ್ಥೆಯಲ್ಲಿ ಲೋಪ ಬೇಡ: ಕ್ರೀಡಾಕೂಟ ನಡೆಯುವ ದಿನಗಳಂದು ವೈದ್ಯರು ಅಗತ್ಯ ಸಿಬ್ಬಂದಿಯೊಂದಿಗೆ ಕ್ರೀಡಾಂಗಣದಲ್ಲಿ ಲಭ್ಯರಿರಬೇಕು. ಔಷಧೋಪಚಾರಗಳು ಸಹ ಇರುವಂತೆ ನೋಡಿಕೊಳ್ಳಬೇಕು. ಆರಕ್ಷಕ ಸಿಬ್ಬಂದಿ ನಿಯೋಜನೆ ಸೇರಿದಂತೆ ಕ್ರೀಡಾಕೂಟಕ್ಕೆ ಬೇಕಿರುವ ಅಗತ್ಯ ವ್ಯವಸ್ಥೆಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯಾವುದೇ ಲೋಪವಿಲ್ಲದೆ ಮಾಡಬೇಕು ಎಂದು ತಿಳಿಸಿದರು.
ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿ: ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ನಗರದಲ್ಲಿ ಆಯೋಜಿತವಾಗುವ ಕ್ರೀಡಾಕೂಟಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ನೌಕರರು ಬರಲಿದ್ದಾರೆ. ಅವರ ವಾಸ್ತವ್ಯಕ್ಕೆ ಅಗತ್ಯ ವ್ಯವಸ್ಥೆ ಸಹ ಕಲ್ಪಿಸಬೇಕಿದೆ. ಕ್ರೀಡಾಕೂಟಕ್ಕೆ ನೌಕರರ ಸಂಘವು ಅಗತ್ಯ ಸಹಕಾರ ನೀಡಲಿದೆ ಎಂದು ಹೇಳಿದರು.
ಸಭೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಚಲುವಯ್ಯ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ವಾರೇಶ್ ಗಿರಿಯಪ್ಪ ಸಂಗೊಂದಿ, ಪ್ರಧಾನ ಕಾರ್ಯದರ್ಶಿ ಮಹದೇವ ಸ್ವಾಮಿ, ತಾಲೂಕು ನೌಕರರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.