ಶಹಾಬಾದ: ನಗರದ ಇಎಸ್‌ಐಸಿ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಶಾಸಕ ಬಸವರಾಜ ಮತ್ತಿಮಡು ನವೀಕರಣ ಕಾರ್ಯ ವೀಕ್ಷಿಸಿ ತ್ವರಿತವಾಗಿ ದುರಸ್ತಿ ಕಾರ್ಯ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹತ್ತು ದಿನಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿದ್ದ ಸಚಿವರು ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಸ್‌ಐಸಿಯನ್ನು ಕೋವಿಡ್ ಕೇರ್ ಸೆಂಟರ್ ಮಾಡುವುದಾಗಿ ತಿಳಿಸಿ ನವೀಕರಣ ಕಾರ್ಯಕ್ಕೆ ನಿರ್ದೇಶನ ನೀಡಿದ್ದರು. ಅದರಂತೆ ಕಾರ್ಯ ನಡೆಯುತ್ತಿರುವುದನ್ನು ಸಚಿವರು ವೀಕ್ಷಿಸಿದರು.
ಸಚಿವರಿಗೆ ಕಾಲು ನೋವು ಇದ್ದರೂ, ಆಸ್ಪತ್ರೆಯ ಮೊದಲನೆ ಮತ್ತು ಎರಡನೇ ಮಹಡಿ ಸಂಪೂರ್ಣ ಸುತ್ತು ಹಾಕಿ ದುರಸ್ತಿ ಕಾರ್ಯ ಪರಿಶೀಲಿಸಿದರು. ಕಟ್ಟಡದ ಮೇಲ್ಭಾಗ ಮೇಲ್ಚಾವಣಿಯ ಮೇಲೆ ಹೋಗಿ ಅಲ್ಲಿನ ದುರಸ್ತಿ ಕಾರ್ಯ ವೀಕ್ಷಿಸಿದರು. ನವೀಕರಣ ಕಾರ್ಯದ ಬಗ್ಗೆ ಅ ಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಪ್ರಸ್ತುತ ನವೀಕರಣ ಕಾರ್ಯಕ್ಕೆ ನಿಯೋಜನೆಗೊಂಡ ಕಾರ್ಮಿಕರ ಸಂಖ್ಯೆಯನ್ನು ದ್ವಿಗುಣ ಮಾಡಿ ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಒಂದು ತಿಂಗಳೊಳಗೆ ಎಲ್ಲ ಕಾರ್ಯ ಮುಗಿಸಬೇಕು ಎಂದು ಲೊಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರತಿ ಮಹಡಿಯ ದುರಸ್ತಿ ಕಾರ್ಯಕ್ಕೆ ನಾಲ್ಕು ತಂಡ ರಚಿಸಿ, ಅವರಿಗೆ ಆಸ್ಪತ್ರೆಯ ಪ್ರತ್ಯೇಕ ವಿಂಗ್ ಕೆಲಸದ ಜವಾಬ್ದಾರಿ ಕೊಡಿ. ಜತೆಯಲ್ಲಿ ವಿದ್ಯುತ್ತೀಕರಣ ಕಾರ್ಯ ಪ್ರತ್ಯೇಕವಾಗಿ ನಡೆಯಲಿ. ಆಸ್ಪತ್ರೆ ಸುತ್ತಮುತ್ತ ರಸ್ತೆ ನಿರ್ಮಿಸಿ. ಕಟ್ಟಡದ ಬಾಗಿಲು, ಕಿಟಕಿ, ಗಾಜು ಬದಲಿಸಿ. ವಸತಿ ಗೃಹ ದುರಸ್ತಿ ಮಾಡಿ. ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಹತ್ತಿಕೊಂಡೇ ಆಸ್ಪತ್ರೆ ಇರುವುದರಿಂದ ಧೂಳು ಬಾರದಂತೆ ಆಸ್ಪತ್ರೆಯ ಕಾಂಪೌಂಡ್ ಗೋಡೆ ಎತ್ತರ ಮಾಡಿ ಸುತ್ತ ಗಿಡಗಳನ್ನು ನೆಡಿ. ರಸ್ತೆಗೆ ಸ್ಪೀಡ್ ಬ್ರೇಕರ್ ಹಾಕಿಸಿ ಎಂದು ಆದೇಶಿಸಿದರು.
ಪ್ರಸ್ತುತ 50 ಹಾಸಿಗೆಯ ಈ ಆಸ್ಪತ್ರೆಗೆ ಮುಂದೆ ಪೂರ್ಣ ಪ್ರಮಾಣದ 120 ಹಾಸಿಗೆಯ ಒಂದು ಮಾದರಿ ಆಸ್ಪತ್ರೆಯನ್ನಾಗಿ ಮಾಡಲು ಬೇಕಾಗುವ ನವೀನ ಮಾದರಿಯ ವೈದ್ಯಕೀಯ ಉಪಕರಣ ಖರೀದಿಸಲಾಗುವುದು. ಇದಕ್ಕಾಗಿ ಅಗತ್ಯ ಉಪಕರಣಗಳ ಪಟ್ಟಿ ನೀಡಬೇಕು ಎಂದು ಡಿ.ಎಚ್.ಒ ಡಾ| ಶರಣಬಸಪ್ಪ ಗಣಜಲಖೇಡ್ ಅವರಿಗೆ ಸಚಿವರು ಸೂಚಿಸಿದರು. ಅಲ್ಲದೇ ಖರೀದಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನೇತೃತ್ವದ ಅ ಧಿಕಾರಿಗಳ ಸಮಿತಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಆಸ್ಪತ್ರೆ ನವೀಕರಣಕ್ಕೆ ಬೇಕಾಗುವ ಉಪಕರಣ, ಆಗಬೇಕಾದ ಕೆಲಸ-ಕಾರ್ಯಗಳ ಪಟ್ಟಿಯನ್ನು ಕೂಡಲೇ ನೀಡುವಂತೆ ಆರೋಗ್ಯ, ಜೆಸ್ಕಾಂ, ಲೋಕೋಪಯೋಗಿ, ಅರಣ್ಯ ಅ ಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು. ಆರೋಗ್ಯ ಸಚಿವರಿಗೆ ದೂರವಾಣಿ ಕರೆ: ಸ್ಥಳದಿಂದಲೇ ಆರೋಗ್ಯ ಸಚಿವ ಡಾ| ಕೆ. ಸುಧಾಕರಗೆ ಮೊಬೈಲ್ ಮೂಲಕ ಕರೆ ಮಾಡಿ ಮಾತನಾಡಿದ ಸಚಿವ ಮುರುಗೇಶ ನಿರಾಣಿ, ಇಎಸ್‌ಐಸಿ ಆಸ್ಪತ್ರೆ ಹಿನ್ನೆಲೆ ವಿವರಿಸಿದರು.
ಅಲ್ಲದೇ ಆಸ್ಪತ್ರೆ ಪುನರ್ ಆರಂಭಕ್ಕೆ ವೈದ್ಯ ಸಿಬ್ಬಂದಿ ನೀಡುವುದಾಗಿ ಕಾರ್ಮಿಕ ಸಚಿವ ಶಿವರಾಮ ಹೆಬ್ಟಾರ್ ಒಪ್ಪಿದ್ದಾರೆ. ಹೀಗಾಗಿ ಇದನ್ನು ಆರೋಗ್ಯ ಇಲಾಖೆ ವಶಕ್ಕೆ ಪಡೆದು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿದರು.
ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ಶಶೀಲ ಜಿ.ನಮೋಶಿ, ಸುನೀಲ ವಲ್ಯಾಪುರೆ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಜೆಸ್ಕಾಂ ಎಂ.ಡಿ. ರಾಹುಲ್ ಪಾಂಡ್ವೆ, ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ, ಸಹಾಯಕ ಆಯುಕ್ತ ರಮೇಶ ಕೋಲಾರ, ಡಿಎಚ್‌ಒ ಡಾ| ಶರಣಬಸಪ್ಪ ಗಣಜಲಖೇಡ್, ಲೊಕೋಪಯೋಗಿ ಇಲಾಖೆಯ ಸೇಡಂ ವಿಭಾಗದ ಇಇ ಕೃಷ್ಣ ಅಗ್ನಿಹೋತ್ರಿ, ತಹಶೀಲ್ದಾರ್ ಸುರೇಶ ವರ್ಮಾ, ತಾಲೂಕು ಆರೋಗ್ಯಾ ಧಿಕಾರಿ ಡಾ| ದೀಪಕ ಪಾಟೀಲ, ಶಹಾಬಾದ ಅಧಿ ಸೂಚಿತ ಕ್ಷೇತ್ರ ಸಮಿತಿ ಮುಖ್ಯಾಧಿ ಕಾರಿ ಪೀರಶೆಟ್ಟಿ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಮಹೇಂದ್ರ ಕೋರಿ, ನಿಂಗಣ್ಣ ಹುಳಗೋಳಕರ್, ನಾಗರಾಜ ಮೇಲಗಿರಿ, ಸಂಜಯ ಸೂಡಿ ಹಾಗೂ ಇನ್ನಿತರರು ಇದ್ದರು.