Advertisement

ಕೆಲ ರೈಲ್ವೆ ಯೋಜನೆ ಆರಂಭಕ್ಕೆ ಸೂಚನೆ

11:51 PM Sep 09, 2019 | Lakshmi GovindaRaju |

ಬೆಂಗಳೂರು: ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ಹೊಸ ರೈಲು ಮಾರ್ಗದ ಕಾಮಗಾರಿ ಆರಂಭಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ, ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

Advertisement

ವಿಧಾನಸೌಧದಲ್ಲಿ ಸೋಮವಾರ ಯಡಿಯೂರಪ್ಪ ಅವರನ್ನು ಭೇಟಿಯಾದ ಸುರೇಶ್‌ ಅಂಗಡಿಯವರು ಚರ್ಚೆ ನಡೆಸಿದರು. ಈ ವೇಳೆ ಶಿವಮೊಗ್ಗ ಹೊರ ವರ್ತುಲ ರಸ್ತೆ ಸಮೀಪ ರಸ್ತೆಯೊಂದರ ನಿರ್ಮಾಣಕ್ಕಾಗಿ ರೈಲ್ವೆ ಇಲಾಖೆ ಜಾಗ ನೀಡಲು ಒಪ್ಪಿಗೆ ನೀಡಲಾಯಿತು. ಬೀರೂರು- ಶಿವಮೊಗ್ಗ ನಡುವೆ ಜೋಡಿ ರೈಲು ಮಾರ್ಗ ನಿರ್ಮಾಣ ಕಾಮಗಾರಿಯನ್ನು ಸದ್ಯದಲ್ಲೇ ಆರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಶಿವಮೊಗ್ಗ- ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲ್ವೆ ಮಾರ್ಗದ ಕಾಮಗಾರಿ ಆರಂಭಕ್ಕೆ ಒಪ್ಪಿಗೆ ನೀಡುವ ಜತೆಗೆ ಶಿವಮೊಗ್ಗ- ಯಶವಂತಪುರ ಇಂಟರ್‌ಸಿಟಿ ರೈಲು ಸಂಚಾರವನ್ನು ಚೆನ್ನೈವರೆಗೆ ವಿಸ್ತರಿಸಲು ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಯಿತು. ಶಿವಮೊಗ್ಗ- ತಿರುಪತಿ ರೈಲು ಬೀರೂರು, ಚಿತ್ರದುರ್ಗ, ಬಳ್ಳಾರಿ ಮಾರ್ಗದಲ್ಲಿ ಸಂಚರಿಸಲು ತಾತ್ವಿಕ ಒಪ್ಪಿಗೆ ನೀಡಲಾಯಿತು.

ಜತೆಗೆ ಶಿವಮೊಗ್ಗ-ಯಶವಂತಪುರ ನಡುವೆ ಸಂಚರಿಸುವ ಶತಾಬ್ದಿ ರೈಲಿನ ಸಮಯ ಬದಲಾವಣೆ ಬಗ್ಗೆಯೂ ಚರ್ಚೆಯಾಯಿತು. ಬೆಂಗಳೂರಿನ ಸಬ್‌ಅರ್ಬನ್‌ ರೈಲು ಯೋಜನೆ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು. ಮೆಟ್ರೋ ಕಾಮಗಾರಿಗೆ ರೈಲ್ವೆ ಇಲಾಖೆಯಿಂದ ಅಗತ್ಯವಿರುವ ಎಲ್ಲ ಸಹಕಾರ ನೀಡುವಂತೆಯೂ ಮುಖ್ಯಮಂತ್ರಿಗಳು ಮನವಿ ಮಾಡಿದರು.

ಯೋಜನೆ ಕುರಿತು ಚರ್ಚೆ: ಸಭೆ ಬಳಿಕ ಪ್ರತಿಕ್ರಿಯಿಸಿದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ, ರಾಜ್ಯದ ಪ್ರಮುಖ ರೈಲ್ವೆ ಯೋಜನೆಗಳ ಕುರಿತು ಚರ್ಚಿಸಲಾಗಿದೆ. ಶಿವಮೊಗ್ಗದಿಂದ ಚೆನ್ನೈವರೆಗೆ ರೈಲು ಸಂಚಾರ ವಿಸ್ತರಣೆ ಸೇರಿದಂತೆ ಇತರೆ ಯೋಜನೆಗಳ ಬಗ್ಗೆ ಮಾತುಕತೆ ನಡೆಸಲಾಯಿತು. ಬಾಗಲಕೋಟೆ- ಕುಡಚಿ ಸೇರಿ ಇತರೆ ಜೋಡಿ ಮಾರ್ಗ ಯೋಜನೆಗಳು ಬಾಕಿಯಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮನ್ವಯದಿಂದ ಒಟ್ಟಿಗೆ ಕಾರ್ಯ ನಿರ್ವಹಿಸಿ ತ್ವರಿತವಾಗಿ ಪೂರ್ಣಗೊಳಿಸಲು ನಿರ್ಧರಿಸಲಾಯಿತು ಎಂದು ಹೇಳಿದರು.

Advertisement

ಬೆಂಗಳೂರಿನ 17 ರೈಲ್ವೆ ಮೇಲು ಸೇತುವೆ (ಆರ್‌ಒಬಿ), ರೈಲ್ವೆ ಕೆಳಸೇತುವೆ (ಆರ್‌ಯುಬಿ) ಕಾಮಗಾರಿಗಳು ಅಗತ್ಯ ಭೂಮಿ ಸ್ವಾಧೀನವಾಗದೆ ಬಾಕಿ ಉಳಿದಿವೆ. ಹಾಗಾಗಿ ಲಭ್ಯವಿರುವ ಜಾಗದಲ್ಲೇ ಪೂರ್ಣಗೊಳಿಸಲು ಸೂಚಿಸಲಾಗಿದೆ. ಬಿಬಿಎಂಪಿ, ರಾಜ್ಯ ಸರ್ಕಾರ ಹಾಗೂ ರೈಲ್ವೆ ಇಲಾಖೆ ಸಮನ್ವಯದೊಂದಿಗೆ ಕಾಮಗಾರಿ ಪೂರ್ಣಗೊಳಿಸಬೇಕು. ಜತೆಗೆ ಸಬ್‌ಅರ್ಬನ್‌ ರೈಲ್ವೆ ಯೋಜನೆ ಬಗ್ಗೆಯೂ ಚರ್ಚಿಸಲಾಗಿದೆ. ಮತ್ತೂಂದು ಸುತ್ತು ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮೀಸಲಾತಿ ಹೆಚ್ಚಳ ಸಮಿತಿ ರಚನೆಗೆ ತೀರ್ಮಾನ
ಬೆಂಗಳೂರು: ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣವನ್ನು ಶೇ. 7.5ಕ್ಕೆ ಹೆಚ್ಚಳ ಮಾಡುವ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಮಿತಿ ರಚನೆಗೆ ಸರ್ಕಾರ ನಿರ್ಧರಿಸಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳ ನೇತೃತ್ವದ ನಿಯೋಗವು ಸೋಮವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿ ಯೂರಪ್ಪಅವರನ್ನು ಭೇಟಿ ಮಾಡಿ ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಮನವಿ ಮಾಡಿತು.

ನಿಯೋಗದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಈ ಬಗ್ಗೆ ಸಮಿತಿ ರಚಿಸಿ ಅದರ ವರದಿಯನ್ನಾಧರಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸಚಿವ ಸಂಪುಟದ ಸಭೆಯ ಮುಂದೆಯೂ ವಿಷಯವನ್ನು ತಂದು ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ವಾಲ್ಮೀಕಿ ಜನಸಂಖ್ಯೆ ರಾಜ್ಯ ಜನಸಂಖ್ಯೆಯಲ್ಲಿ ಶೇ.7ರಷ್ಟಿದೆ, ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆಯ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಿಯೋಗವು ಮುಖ್ಯಮಂತ್ರಿ ಗಳಿಗೆ ಮನವಿ ಮಾಡಿತು.

ಮುಖ್ಯಮಂತ್ರಿ ಭೇಟಿಯ ನಂತರ ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿ, ವಾಲ್ಮೀಕಿ ಸಮುದಾಯಕ್ಕೆ ಶೇ.7.5 ಮೀಸಲಾತಿ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದೇವೆ. ಮೀಸಲಾತಿ ಹೆಚ್ಚಳ ಮಾಡಲು ಸಮಿತಿ ಕೂಡ ರಚನೆ ಮಾಡಲಾಗಿತ್ತು. ಆ ಸಮಿತಿ ಸರ್ಕಾರಕ್ಕೆ ಇನ್ನೂ ವರದಿ ಸಲ್ಲಿಸಿಲ್ಲ. ಆದಷ್ಟು ಬೇಗ ಮೀಸಲಾತಿ ಹೆಚ್ಚಳಕ್ಕೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು. ನಿಯೋಗದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಶಿವನಗೌಡ ನಾಯ್ಕ, ರಾಜೂ ಗೌಡ ಹಾಜರಿದ್ದರು.

ವಾಲ್ಮೀಕಿ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ, ಸಮುದಾಯದ ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ನಮ್ಮ ಮನವಿ ಪರಿಗಣಿಸುವ ಭರವಸೆ ಇದೆ.
-ಪ್ರಸನ್ನಾನಂದ ಸ್ವಾಮೀಜಿ, ವಾಲ್ಮೀಕಿ ಗುರುಪೀಠಾಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next