Advertisement

ಅಕ್ರಮ ಗಣಿಗಾರಿಕೆ ದಂಡ ವಸೂಲಿಗೆ ಸೂಚನೆ

03:34 PM Jul 09, 2023 | Team Udayavani |

ಕೋಲಾರ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು, ಮರಳು ಗಣಿಗಾರಿಕೆ ವಿರುದ್ಧ ವಿಧಿ ಸಿರುವ 43 ಕೋಟಿ ದಂಡ ವಸೂಲಿ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ತ್ತೈಮಾಸಿಕ ಪ್ರಗತಿಪರಿಶೀಲನಾ ಸಭೆಯಲ್ಲಿ ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆ ವಿಚಾರ ಪ್ರತಿಧ್ವನಿಸಿದ್ದು, ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, 43 ಕೋಟಿ ದಂಡ ವಸೂಲಾತಿಗೆ ಏನು ಕ್ರಮ ವಹಿಸಿದ್ದೀರಿ? ಆ ಸಂಸ್ಥೆಗಳ ಆಸ್ತಿ ಮುಟ್ಟುಗೋಲು ಮಾಡಿಕೊಂಡಿದ್ದೀರಾ? ಮರಳು ಹಾಗೂ ಗ್ರಾನೈಟ್‌ ದಂಧೆಗೆ ಕಡಿವಾಣ ಏಕೆ ಹಾಕಿಲ್ಲ ಎಂದು ಪ್ರಶ್ನಿಸಿ, ಲಾರಿಗಳಿಂದ ರಸ್ತೆಗಳು ಹಾಕಲಾಗುತ್ತಿದ್ದು, ಸಂಬಂಧಿಸಿದವರಿಂದ ನಷ್ಟ ವಸೂಲಿ ಮಾಡಿ ಎಂದು ಸೂಚನೆ ನೀಡಿದರು. ದಂಡ ವಿಧಿಸಿರುವ ಕುರಿತು ತಮಗೆ ಮಾಹಿತಿ ನೀಡಿಲ್ಲ ವೆಂದು ತಿಳಿಸಿರುವ ಹೊಸದಾಗಿ ಜಿಲ್ಲೆಗೆ ವರ್ಗಾವಣೆ ಆಗಿ ಬಂದಿರುವ ಗಣಿ ಇಲಾಖೆಯ ಹಿರಿಯ ಭೂವಿಜ್ಞಾನಿ ರಾಜೇಶ್‌ ವಿರುದ್ಧ ಸಚಿವರು ಹರಿಹಾಯ್ದಿದರು.

ಗಣಿಗಾರಿಕೆಯಿಂದ ಕೃಷಿ ಬೆಳೆ ನಾಶ: ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿರುವ ಗಣಿ ಇಲಾಖೆಯ ಮತ್ತೂಬ್ಬ ಹಿರಿಯ ಭೂವಿಜ್ಞಾನಿ ಚೊಕ್ಕ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಇಷ್ಟು ವರ್ಷಗಳಿಂದ ಹೇಗೆ ಒಂದೇ ಜಾಗದಲ್ಲಿ ಇದ್ದೀರಿ? ಇಲ್ಲಿ ಸೇವೆ ಮಾಡಿದ್ದು ಸಾಕು. ಬೇರೆ ಜಿಲ್ಲೆಗೂ ತಮ್ಮ ಸೇವೆ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಜೆಡಿಎಸ್‌ ಶಾಸಕ ಸಮೃದ್ಧಿ ಮಂಜುನಾಥ್‌, ಹಿಂದೆ ಗಣಿ ಅಧಿ ಕಾರಿ ಷಣ್ಮುಗಪ್ಪ ಇಡೀ ಜಿಲ್ಲೆಯನ್ನೇ ತಿಂದು ಹಾಕಿದ್ದಾರೆ. ಎಲ್ಲಾ ಸೇರಿ ದೊಡ್ಡ ದಂಧೆ ನಡೆಸಿದ್ದಾರೆ ಎಂದು ಆರೋಪಿಸಿದರು. ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣ ಸ್ವಾಮಿ, ಅಕ್ರಮ ಗಣಿಗಾರಿಕೆ ಹೆಚ್ಚುತ್ತಿದೆ. ಎರಡು ಎಕರೆಗೆ ಅನುಮತಿ ಪಡೆದು 3 ಎಕರೆ ಹೊಡೆಯುತ್ತಾರೆ, ಎರಡು ಮೀಟರ್‌ಗೆ ಅನುಮತಿ ಪಡೆದು 6 ಮೀಟರ್‌ ಕೊರೆಯುತ್ತಾರೆ. ದೊಡ್ಡ ವಾಹನಗಳಲ್ಲಿ ಸಾಗಿಸಿ ರಸ್ತೆ ಹಾಳು ಮಾಡಿದ್ದಾರೆ. ದುರಸ್ತಿಯನ್ನೂ ಮಾಡಿಕೊಡುವುದಿಲ್ಲ. ಧೂಳಿನಿಂದ ಸುತ್ತಲಿನ ಕೃಷಿ ಜಮೀನಿನಲ್ಲಿ ಬೆಳೆ ನಾಶವಾಗುತ್ತಿವೆ ಎಂದು ಕಿಡಿಕಾರಿದರು.

ಈ ಚರ್ಚೆ ನಡೆಯುವ ಸುಮ್ಮನೇ ಕುಳಿತಿದ್ದ ಮಾಲೂರು ಶಾಸಕ ಕೆ.ವೈ.ನಂಜೇಗೌಡರು ತಮ್ಮದೇ ಪಕ್ಷದ ಶಾಸಕರು ಹಾಗೂ ಸಚಿವರ ವಿರುದ್ಧ ತಿರುಗಿ ಬಿದ್ದರು. ನಾನು ಜಿಲ್ಲೆಯಲ್ಲಿ ಗಣಿಗಾರಿಕೆಯಲ್ಲಿ ತೊಡಗಿ ದ್ದೇನೆ. ಕಾನೂನುಬದ್ಧವಾಗಿ ಮಾಡುತ್ತಿದ್ದೇನೆ. ಆದರೆ, ಜಿಲ್ಲೆಯಲ್ಲಿ ಏನೋ ಆಗಿಬಿಟ್ಟಿರುವ ರೀತಿಯಲ್ಲಿ ಮಾತ ನಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಟೊಮೆಟೋಗೆ ವೈರಸ್‌ ಬರಲು ಬರಲು ಕಾರಣವೇನು? : ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌, ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಧ್ವನಿಗೂಡಿಸಿ, ಟೊಮೆಟೋಗೆ ವೈರಸ್‌ ಬರಲು ಬರಲು ಕಾರಣವೇನು? ಬೇರೆ ಜಿಲ್ಲೆಯಲ್ಲಿ ಏಕೆ ಬಂದಿಲ್ಲ? ಗಡಿ ಭಾಗದ ಪಕ್ಕದ ಊರಿನಲ್ಲಿ ಈ ಸಮಸ್ಯೆ ಇಲ್ಲ ಎಂದರು.

ಟೊಮೆಟೋಗೊ ವೈರಸ್‌ ಬಂದು ಇಳುವರಿ ಕುಂಠಿತವಾಗಿರುವ ವಿಚಾರ ಚರ್ಚೆ ಆಗುತ್ತಿರುವಾಗ ಮಾತನಾಡಿದ ಶಾಸಕ ಸಮೃದ್ಧಿ ಮಂಜುನಾಥ್‌, ಕೆ.ಸಿ.ವ್ಯಾಲಿ ಹಾಗೂ ಎಚ್‌.ಎನ್‌.ವ್ಯಾಲಿಯಿಂದ ಸಮಸ್ಯೆ ಆಗಿರಬಹುದು. ಉಳಿದೆಲ್ಲೂ ಈ ಸಮಸ್ಯೆ ಆಗಿಲ್ಲ. ಇಲ್ಲಿ ಮಾತ್ರ ಏಕೆ ಎಂದು ಪ್ರಶ್ನಿಸಿದರು. ಆಗ ಕಾಂಗ್ರೆಸ್‌ ಶಾಸಕರು, ಸಚಿವರು ಮುಗಿಬಿದ್ದರು. ಕೆ.ಸಿ.ವ್ಯಾಲಿ ನೀರಿನಿಂದ ಸಮಸ್ಯೆ ಆಗಿರುವ ಬಗ್ಗೆ ಎಲ್ಲೂ ವೈಜ್ಞಾನಿಕವಾಗಿ ಸಾಬೀತಾಗಿಲ್ಲ ಎಂದರು.

ಯಾವುದೇ ವಿಚಾರವನ್ನು ರಾಜಕೀಯ ಇಟ್ಟುಕೊಂಡು ಮಾತನಾಡಬೇಡಿ. ನಾವು ರೈತರ ಅನುಕೂಲಕ್ಕೆ ಇಲ್ಲಿ ಬಂದಿದ್ದೇವೆ ಎಂದು ಸಚಿವರು, ಸಮೃದ್ಧಿ ಮಂಜುನಾಥ್‌ ಅವರ ಬಾಯಿ ಮುಚ್ಚಿಸಿದರು.

ಆಷಾಡ ಮಾಸಕ್ಕೂ ಆಸ್ಪತ್ರೆ ಆರಂಭಕ್ಕೂ ಏನು ಸಂಬಂಧ?: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್‌ ಅವರನ್ನು ಸಚಿವರು ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌ ತರಾ ಟೆಗೆ ತೆಗೆದುಕೊಂಡರು. ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಹೆರಿಗೆ ಆಸ್ಪತ್ರೆಯನ್ನು ಆಷಾಡ ಮಾಸ ಮುಗಿದ ಮೇಲೆ ಆರಂಭಿಸುವುದಾಗಿ ಡಿಎಚ್‌ಒ ಹೇಳಿದಕ್ಕೆ, “ರೀ ನೀವು ವೈದ್ಯರು. ಆಷಾಡ ಮಾಸಕ್ಕೂ ಆಸ್ಪತ್ರೆ ಆರಂಭಕ್ಕೂ ಯಾವ ರೀತಿ ಸಂಬಂಧ. ಕೂಡಲೇ ಆರಂಭಿಸಿ ಎಂದು ಸೂಚಿಸಿದರು.

ಯಾರ ಧಮ್ಕಿಗೂ ಹೆದರಬೇಡಿ: ಅಧಿಕಾರಿಗಳಿಗೆ ಬುದ್ಧಿ ವಾದ ಹೇಳಿದ ಎಸ್‌.ಎನ್‌.ನಾರಾಯಣಸ್ವಾಮಿ, ನಿರ್ಭೀ ತರಾಗಿ ಕೆಲಸ ಮಾಡಿ. ಕೆಲವರು ದಬ್ಟಾಳಿಕೆ ಮಾಡುತ್ತಾರೆ. ಹಿಂದಿನ ಸರ್ಕಾರದಲ್ಲಿ ಅದ ನಡೆದಿದೆ. ಯಾರ ಧಮ್ಕಿಗೂ ಹೆದರಬೇಡಿ ಎಂದು ಪರೋಕ್ಷವಾಗಿ ಬಿಜೆಪಿ ಮುಖಂಡರು, ಸಂಸದರಿಗೆ ತಿರುಗೇಟು ನೀಡಿದರು. ಕೊನೆಯಲ್ಲಿ ಸಚಿವರು ಮಾತನಾಡಿ, ಅ ಧಿಕಾರಿಗಳು ಕ್ರಿಯಾಶೀಲವಾಗಿ ಹಾಗೂ ಪಕ್ಷಾತೀತವಾಗಿ ಕೆಲಸ ಮಾಡಬೇಕು. ಹಿಂದೆ ತಾರತಮ್ಯ ಇತ್ತು. ಮುಂದೆ ಅದು ನಡೆಯಲ್ಲ. ಅಧಿಕಾರಿಗಳು ಅವ್ಯವಹಾರ ನಡೆಸಿದ್ದು, ಕಂಡು ಬಂದರೆ ಅಮಾನತು ಮಾಡುತ್ತೇವೆ ಎಂದರು.

ಮಾದಕ ವ್ಯಸನ ಪ್ರಕರಣಗಳಿಗೆ ಜಿಲ್ಲಾ ಪೊಲೀಸರು ಕಡಿವಾಣ ಹಾಕಬೇಕು. ಬೆಟ್ಟಿಂಗ್‌ ತಡೆಗಟ್ಟಿ. ಹಾಗೆಯೇ ಕೋಮುವಾದಿ ಶಕ್ತಿಗಳನ್ನು ನಿಯಂತ್ರಿಸಬೇಕು. ಅಗತ್ಯಬಿದ್ದರೆ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಿ. ಯಾವುದೇ ಕಾರಣಕ್ಕೆ ಮತೀಯ ಶಕ್ತಿಗಳಿಗೆ ಅವಕಾಶ ಕೊಡಬೇಡಿ. ಕಾನೂನು ಬಿಟ್ಟು ಏನಾದರೂ ಮಾಡಿದರೆ ಜನಪ್ರತಿನಿಧಿಯಾದರೂ ಸರಿ ಕ್ರಮವಹಿಸಿ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕರಾದ ರೂಪಕಲಾ ಶಶಿಧರ್‌, ಜಿಲ್ಲಾಧಿಕಾರಿ ಅಕ್ರಂಪಾಷಾ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next