ಸ್ಮಾರ್ಟ್ ಫೋನ್ ಲೋಕಕ್ಕೆ ಇಂದಿನಿಂದ ಇನ್ನೊಂದು ನೂತನ ಬ್ರಾಂಡ್ ಸೇರ್ಪಡೆಯಾಗಿದೆ. ಮೊಬೈಲ್ ಫೋನ್ ಪ್ರಿಯರು ಎದುರು ನೋಡುತ್ತಿದ್ದ ಹೊಸ ಫೋನ್ ಜುಲೈ 12 ರಂದು ಲಂಡನ್‍ನಲ್ಲಿ ಬಿಡುಗಡೆಯಾಗಿದೆ. ಅದುವೇ ನಥಿಂಗ್ ಬ್ರಾಂಡ್. ಆ ಕಂಪೆನಿಯ ಮೊದಲ ಫೋನ್ ನಥಿಂಗ್ ಫೋನ್ (1) ಅನ್ನು ಅದರ ಸಂಸ್ಥಾಪಕ ಕಾರ್ಲ್ ಪೇ ಭಾರತೀಯ ಕಾಲಮಾನ ರಾತ್ರಿ 8.30ರಲ್ಲಿ ಅನಾವರಣಗೊಳಿಸಿದರು.
ಯಾವುದೇ ಆಡಂಬರ, ದೊಡ್ಡ ಸಮಾರಂಭವಿಲ್ಲದೇ, ನಥಿಂಗ್ ಕಚೇರಿಯಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಹೊಸ ಫೋನನ್ನು ಅತ್ಯಂತ ಸರಳವಾಗಿ ಅನಾವರಣಗೊಳಿಸಿದರು. ನಥಿಂಗ್ ಕಂಪೆನಿಯ ಸಂಸ್ಥಾಪಕ ಕಾರ್ಲ್ ಪೇ ಇದಕ್ಕೂ ಮುಂಚೆ ಒನ್‍ಪ್ಲಸ್ ಕಂಪೆನಿಯ ಸಂಸ್ಥಾಪಕರಲ್ಲೊಬ್ಬರಾಗಿದ್ದರು. ಒನ್‍ಪ್ಲಸ್ ನಿಂದ ಹೊರಬಂದು ನಥಿಂಗ್ ಕಂಪೆನಿಯನ್ನು ಲಂಡನ್‍ನಲ್ಲಿ ಸ್ಥಾಪಿಸಿದ್ದಾರೆ. ಈಗಾಗಲೇ ಈ ಬ್ರಾಂಡ್‍ನಿಂದ ನಥಿಂಗ್ ಇಯರ್ ಒನ್ ಎಂಬ ಇಯರ್ ಬಡ್ ಬಿಡುಗಡೆಯಾಗಿ 5.30 ಲಕ್ಷ ಯೂನಿಟ್ ಮಾರಾಟವಾಗಿದೆ. ನಥಿಂಗ್ ಕಂಪೆನಿಯಲ್ಲಿ ಗೂಗಲ್ ವೆಂಚರ್ ಸೇರಿದಂತೆ ಪ್ರಸಿದ್ಧ ಕಂಪೆನಿಗಳ ಸ್ಥಾಪಕರು ಹೂಡಿಕೆ ಮಾಡಿದ್ದಾರೆ. ನಥಿಂಗ್ ಫೋನ್ (1) ಈ ವರ್ಷದ ಅತ್ಯಂತ ನಿರೀಕ್ಷಿತ ಫೋನ್ ಆಗಿದೆ. ಈಗಾಗಲೇ 2 ಲಕ್ಷ ಫೋನ್‍ಗಳು ಪ್ರಿ ಬುಕಿಂಗ್ ಆಗಿವೆ.
ಈ ಫೋನಿನ ಸಂಕ್ಷಿಪ್ತ ತಾಂತ್ರಿಕ ವಿವರ ಇಂತಿದೆ: ಈ ಫೋನಿನ ವಿಶೇಷವೆಂದರೆ ಹಿಂಬದಿ ಪಾರದರ್ಶಕ ಕೇಸ್. 120 ಹರ್ಟ್ಜ್ , 6.55 ಇಂಚಿನ ಓಎಲ್‍ಇಡಿ ಡಿಸ್‍ಪ್ಲೇ.
ಕ್ವಾಲ್‍ಕಾಂ ಸ್ನಾಪ್ ಡ್ರಾಗನ್ 778ಜಿ ಪ್ರೊಸೆಸರ್ ಹೊಂದಿದೆ. ಆಂಡ್ರಾಯ್ಡ್ ಆಧಾರಿತ ನಥಿಂಗ್ ಓಎಸ್ ಒಳಗೊಂಡಿದೆ. 50 ಮೆಗಾಪಿಕ್ಸಲ್ ಎರಡು ಲೆನ್ಸಿನ ಕ್ಯಾಮರಾ ಇದ್ದು, ಸೋನಿ ಐಎಂಎಕ್ಸ್ 766 ಲೆನ್ಸ್ ಹೊಂದಿದೆ. ಅಲ್ಯುಮಿನಿಯಂ ಫ್ರೇಂ ಹೊಂದಿದ್ದು, ಮುಂಬದಿ ಪರದೆ ಹಾಗೂ ಹಿಂಬದಿ ಕವಚಕ್ಕೆ ಗೊರಿಲ್ಲಾ ಗ್ಲಾಸ್ 5 ಅಳವಡಿಸಲಾಗಿದೆ. ಈ ಫೋನು ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ದೊರಕಲಿದ್ದು, ಮುಂಗಡವಾಗಿ ಕಾಯ್ದಿರಿಸಿದವರಿಗೆ ವಿಶೇಷ ದರದಲ್ಲಿ ಲಭ್ಯವಾಗಲಿದೆ. ಭಾರತದಲ್ಲಿ ಜುಲೈ 21 ರಿಂದ ಫ್ಲಿಪ್‍ಕಾರ್ಟ್ ನಲ್ಲಿ ಮಾರಾಟ ಆರಂಭ.
ಬೆಲೆ: 8 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ 31,999 ರೂ.
8 ಜಿಬಿ ರ್ಯಾಮ್ 256 ಸಂಗ್ರಹ ರೂ. 34,999. 12 ಜಿಬಿ ರ್ಯಾಮ್, 256 ಜಿಬಿ ಸಂಗ್ರಹ ಮಾದರಿಗೆ 37, 999 ರೂ. ಎಚ್‍ಡಿಎಫ್‍ಸಿ ಕಾರ್ಡ್ ಮೂಲಕ ಖರೀದಿಸಿದರೆ ಹೆಚ್ಚುವರಿಯಾಗಿ 2000 ರೂ. ರಿಯಾಯಿತಿ ದೊರಕಲಿದೆ. 3 ಮತ್ತು 6 ತಿಂಗಳ ಇಎಂಐ ಕೂಡ ಲಭ್ಯ.
ಈ ಮೊಬೈಲ್‍ಗೆ ಚಾರ್ಜರ್ ಬಾಕ್ಸ್ ಜೊತೆ ಬರುವುದಿಲ್ಲ. 45 ವಾಟ್ಸ್ ಚಾರ್ಜರ್ ಅನ್ನು ಪ್ರತ್ಯೇಕವಾಗಿ 1,499 ರೂ. ಕೊಟ್ಟು ಖರೀದಿಸಬೇಕು.
– ಕೆ. ಎಸ್. ಬನಶಂಕರ ಆರಾಧ್ಯ