ಮರುದಿನ ಆಕೆ ಕಾರಿಡಾರ್‌ನಲ್ಲಿ ಬರುತ್ತಿರುವಾಗ ಹುಡುಗ ಪತ್ರವನ್ನು ಕೊಡಲು ಹೋದ. ನಾವೆಲ್ಲ ಅಲ್ಲೇ ಸ್ವಲ್ಪ ದೂರದಲ್ಲಿ ನಿಂತು ಗಮನಿಸುತ್ತಿದ್ದೆವು. ಆತ ಅವಳಿಗೆ ಪತ್ರ ಕೊಟ್ಟು, ಏನೋ ಹೇಳಿದ. ಅದೇನೆಂದು ನಮಗೆ ಕೇಳಿಸಲಿಲ್ಲ.
ಇದು ಐದು ವರ್ಷಗಳ ಹಿಂದೆ ನಡೆದ ಘಟನೆ. ಆಗ ನಾನು ಪಿಯು ಓದುತ್ತಿದ್ದೆ. ನನ್ನನ್ನೂ ಸೇರಿ ನಾಲ್ವರು ಗೆಳೆಯರ ಗುಂಪೊಂದು ಇತ್ತು. ನಾವೆಲ್ಲರೂ ಓದುವುದರಲ್ಲಿ ಬುದ್ಧಿವಂತರು. ಆದರೆ, ನಾಚಿಕೆ ಸ್ವಭಾವದವರು. ಕ್ಲಾಸ್‌ಗೆ ಬಂಕ್ ಮಾಡುವುದು, ಹುಡುಗಿಯರ ಜೊತೆ ಮಾತಾಡುವುದು, ಕ್ಲಾಸ್‌ನಲ್ಲಿ ಗಲಾಟೆ ಮಾಡುವುದು…ಇಂಥ ಯಾವುದರಲ್ಲೂ ನಾವು ಇರಲಿಲ್ಲ. ನಮ್ಮ ಕಾಲೇಜು ತುಂಬಾ ದೊಡ್ಡದಾಗಿತ್ತು. ಕ್ಲಾಸ್ ಕೂಡಾ… ತರಗತಿಯಲ್ಲಿದ್ದ 9 ಬೆಂಚುಗಳಲ್ಲಿ 3ನೇ ಬೆಂಚು ನಮ್ಮ ಗುಂಪಿಗೆ ಮೀಸಲು. ಬೇರೆ ಯಾರೂ ಅದರಲ್ಲಿ ಕೂರುತ್ತಿರಲಿಲ್ಲ.
ಹೀಗಿರುವಾಗ ನಮ್ಮ ಗುಂಪಿನ ಗೆಳೆಯನೊಬ್ಬ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಎಂಬ ವಿಷಯ ಗೊತ್ತಾಯ್ತು. ಅವನ ಬಾಯಿ ಬಿಡಿಸಿ, ಆ ಹುಡುಗಿ ಯಾರೆಂದು ತಿಳಿದುಕೊಂಡೆವು. ಹೋಗಿ ಪ್ರಪೋಸ್ ಮಾಡುವಂತೆ ಅವನನ್ನು ಪೀಡಿಸತೊಡಗಿದೆವು. ಅವನು ಅದಕ್ಕೆ ಒಪ್ಪಲೇ ಇಲ್ಲ. ಆದರೆ, ನಾವು ಆ ವಿಷಯವನ್ನು ಅಲ್ಲಿಗೇ ಬಿಡಲು ತಯಾರಿರಲಿಲ್ಲ. ಕೊನೆಗೆ ಎಲ್ಲರೂ ಸೇರಿ ಒಂದು ಐಡಿಯಾ ಮಾಡಿದೆವು.
ಅದೇನೆಂದರೆ, ಲವ್ ಲೆಟರ್ ಮೂಲಕ ಪ್ರೀತಿ ನಿವೇದನೆ ಮಾಡಿಕೊಳ್ಳುವುದು! ಲವ್ ಲೆಟರ್ ಬರೆಯೋದು ನಮಗೆಲ್ಲರಿಗೂ ಹೊಸತು. ಆದರೆ, ಸಿನಿಮಾಗಳಲ್ಲಿ ನೋಡಿದ್ದೆವಲ್ಲ! ಬಿಳಿಯ ಹಾಳೆಯಲ್ಲಿ ಕವನವೊಂದನ್ನು ಬರೆದು, ಹೃದಯದ ಚಿತ್ರ ಬಿಡಿಸಿದೆವು. ಸ್ನೇಹಿತ ಆ ಪತ್ರವನ್ನು ತನ್ನ ಪ್ರೇಯಸಿಗೆ ಕೊಡಲು ಒಪ್ಪಿದ. ಹುಡುಗಿಗೆ ಕೊಡಲು ಹೋದವನು, ಹೆದರಿ ಹಿಂದಕ್ಕೆ ಬಂದ. ಎರಡು-ಮೂರು ಸಲ ಪ್ರಯತ್ನ ನಡೆಸಿ, “ನನ್ನ ಕೈಯಲ್ಲಿ ಆಗಲ್ಲ’ ಎಂದುಬಿಟ್ಟ. ಹೇಗಾದ್ರೂ ಮಾಡಿ ಈ ಪತ್ರವನ್ನು ನಾವೇ ಆ ಹುಡುಗಿಗೆ ತಲುಪಿಸಬೇಕು ಅಂತ ಹಠಕ್ಕೆ ಬಿದ್ದೆವು.
ಬೇರೆ ತರಗತಿಯ ಹುಡುಗನೊಬ್ಬನಿಂದ ಆ ಪತ್ರವನ್ನು ತಲುಪಿಸುವ ಏರ್ಪಾಡು ಮಾಡಿದೆವು. ಆತನೂ ಅದಕ್ಕೆ ಒಪ್ಪಿದ. ಆದರೆ, ನಾನು ಈ ಪತ್ರವನ್ನು ಅವಳಿಗೆ ಕೊಡುವಾಗ, ನೀವು ಅಲ್ಲಿ ಇರಬೇಕು ಎಂದು ಹೇಳಿದ. “ಆಯ್ತು’ ಎಂದು ಎಲ್ಲರೂ ಒಪ್ಪಿಕೊಂಡೆವು. ಮರುದಿನ ಆಕೆ ಕಾರಿಡಾರ್‌ನಲ್ಲಿ ಬರುತ್ತಿರುವಾಗ ಹುಡುಗ ಪತ್ರವನ್ನು ಕೊಡಲು ಹೋದ. ನಾವೆಲ್ಲ ಅಲ್ಲೇ ಸ್ವಲ್ಪ ದೂರದಲ್ಲಿ ನಿಂತು ಗಮನಿಸುತ್ತಿದ್ದೆವು. ಆತ ಅವಳಿಗೆ ಪತ್ರ ಕೊಟ್ಟು, ಏನೋ ಹೇಳಿದ. ಅದೇನೆಂದು ನಮಗೆ ಕೇಳಿಸಲಿಲ್ಲ. ಆದರೆ, ನಮ್ಮತ್ತ ಕೈ ತೋರಿಸಿ, ಏನೋ ಹೇಳಿದ್ದು ಗೊತ್ತಾಯ್ತು. ಆಕೆ ಪತ್ರ ಹಿಡಿದು, ನಮ್ಮ ಕಡೆ ಬರಲಾರಂಭಿಸಿದಳು. ಗುಂಪಿನಲ್ಲಿ ಮುಂದೆ ನಿಂತಿದ್ದ ನಾನು, ಹಿಂದೆ ಗೆಳೆಯರಿದ್ದಾರೆ ಎಂದು ಧೈರ್ಯವಾಗಿದ್ದೆ. “ಈಗ ನೀನು ಐ ಲವ್ ಯೂ ಅಂತ ಹೇಳಿ ಬಿಡು’ ಅನ್ನುತ್ತಾ ತಿರುಗಿ ನೋಡಿದರೆ, ಅಲ್ಲಿ ಯಾರೂ ಇರಲೇ ಇಲ್ಲ! ಆ ಲವರ್ ಬಾಯ್ ದೂರದಲ್ಲಿ ಒಂದು ಮರದ ಮರೆಯಲ್ಲಿ ನಿಂತಿದ್ದ.
ಆಕೆ ಹತ್ತಿರ ಬರುತ್ತಿರುವುದನ್ನು ನೋಡಿ ನನಗೆ ಗಾಬರಿಯಾಯಿತು. ಏನು ಮಾಡೋದೆಂದು ತಿಳಿಯದೆ ಓಡಲಾರಂಭಿಸಿದೆ. ಆ ಹುಡುಗಿ ಕೂಡ ಕೂಗುತ್ತಾ ಓಡಿ ಬಂದಳು. ನಾನು “ನಂಗೇನೂ ಗೊತ್ತಿಲ್ಲಾ’ ಎಂದು ಓಡಿದ್ದೇ ಓಡಿದ್ದು..
ಧನಂಜಯ ಎಂ.ಎಸ್., ನಾಗಮಂಗಲ