ಮೈಸೂರು: ನೋಟು ಅಮಾನ್ಯಿಕರಣ ಮಾಡಿ ಎರಡು ವರ್ಷ ಕಳೆದರೂ ದೇಶದ ಜನರಿಗೆ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್‌ಸ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.
ನಗರದ ರೈಲ್ವೆ ನಿಲ್ದಾಣದ ಎದುರಿನ ಡಾ.ಬಾಬು ಜಗಜೀವನ್ ರಾಮ್ ಪುತ್ಥಳಿ ಬಳಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ನೋಟ್‌ಬ್ಯಾನ್ ತೀರ್ಮಾನ ಕೈಗೊಂಡ ಸಂದರ್ಭದಲ್ಲಿ 50 ದಿನ ಕಾಲಾವಕಾಶ ನೀಡಿದರೆ ದೇಶದ ಆರ್ಥಿಕ ಪರಿಸ್ಥಿತಿ ಸರಿಪಡಿಸುವ ಭರವಸೆ ನೀಡಿದ್ದರು.
ಆದರೆ, ನೋಟ್‌ಬ್ಯಾನ್ ಆದೇಶ ಜಾರಿಯಾಗಿ ಎರಡು ವರ್ಷ ಕಳೆದರೂ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ ಹಾಗೂ ನೋಟ್‌ಬ್ಯಾನ್‌ನಿಂದ ಉಂಟಾಗಿದ್ದ ಸಮಸ್ಯೆಗಳು ಇಂದಿಗೂ ಬಗೆಹರಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿಗೆ ತಕ್ಕಪಾಠ: ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ, ಭಯೋತ್ಪಾದನೆಗೆ ಕಡಿವಾಣ ಹಾಕುವ ಜತೆಗೆ ಕಪ್ಪುಹಣ ವಾಪಸ್ ತರುವ ಭರವಸೆಯೊಂದಿಗೆ ನೋಟ್‌ಬ್ಯಾನ್ ಮಾಡಿರುವುದಾಗಿ ನರೇಂದ್ರ ಮೋದಿ ಘೋಷಿಸಿದ್ದರು. ಆದರೆ, ಅಪನಗದೀಕರಣ ನಂತರವೂ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ.
ನೋಟ್‌ಬ್ಯಾನ್‌ನಿಂದಾಗಿ ಅಸಂಖ್ಯಾತ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದು, ಬಡವರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರ ಜನರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಕಠಿಣವಾಗಿದೆ. ಬಹುತೇಕ ಸಣ್ಣ ಕೈಗಾರಿಕೆಗಳು ಮುಚ್ಚುವ ಸ್ಥಿತಿಗೆ ತಲುಪಿದ್ದು, ಮುಂದಿನ ಚುನಾವಣೆಯಲ್ಲಿ ದೇಶದ ಮತದಾರರು ಮೋದಿ ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮೋಸಿನ್ ಖಾನ್, ನಗರಾಧ್ಯಕ್ಷ ಡಿ. ರಾಜರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಕುರುಬಾರಹಳ್ಳಿ ಹೇಮಂತ್, ಪ್ರಮುಖರಾದ ಸೈಯದ್ ಖಾದರ್, ಲೋಕೇಶ್, ಸಂಪತ್, ಹಿನಕಲ್ ಮಂಜು, ಪ್ರವೀಣ್, ಬಸವಣ್ಣ, ಕೃಷ್ಣೇಗೌಡ ಇನ್ನಿತರರು ಭಾಗವಹಿಸಿದ್ದರು.