ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಗುರುವಾರ ಪದ್ಮನಾಭನಗರ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಪಾಲಿಕೆ ಸದಸ್ಯರು, ಮಂಡಲ ಪ್ರಮುಖರ ಸಭೆ ನಡೆಸಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಪ್ರಚಾರ ಕುರಿತಂತೆ ಚರ್ಚೆ ನಡೆಸಿ ಕೆಲ ಸೂಚನೆ ನೀಡಿದರು.
ಪದ್ಮನಾಭನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರನ್ನು ಮೂರು ಸುತ್ತಿನಲ್ಲಿ ಭೇಟಿಯಾಗಬೇಕು. ಮೊದಲ ಸುತ್ತಿನಲ್ಲಿ ವಾರ್ಡ್ ಮಟ್ಟದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಬೇಕು. ಎರಡನೇ ಸುತ್ತಿನಲ್ಲಿ ಮಂಡಲ ವ್ಯಾಪ್ತಿಯಲ್ಲಿ ನಡೆದಿರುವ ಚಟುವಟಿಕೆಗಳ ಬಗ್ಗೆ ತಿಳಿಸಬೇಕು.
ಮೂರನೇ ಸುತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಕೊಡುಗೆಗಳನ್ನು ತಿಳಿಸಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ಮುಖಂಡರೊಬ್ಬರು ತಿಳಿಸಿದರು.
ಜತೆಗೆ ನಿತ್ಯ ಬೆಳಗ್ಗೆ ಉದ್ಯಾನಗಳಲ್ಲಿ ವಾಯುವಿಹಾರಿಗಳು, ಸಾರ್ವಜನಿಕರ ಭೇಟಿಯಾಗಿ ಮತ ಯಾಚಿಸಬೇಕು. ಭಾನುವಾರದಿಂದ ಪಾದಯಾತ್ರೆ ಆರಂಭಿಸಿ ಬಿರುಸಿನ ಪ್ರಚಾರ ನಡೆಸಬೇಕು. ಮತದಾರರ ಚೀಟಿಯನ್ನು ತಪ್ಪದೆ ಪ್ರತಿಯೊಬ್ಬ ಮತದಾರರಿಗೂ ತಲುಪಿಸಬೇಕು. ಈ ಕಾರ್ಯಕ್ಕೆ ಪಾಲಿಕೆ ಅಧಿಕಾರಿಗಳನ್ನು ನೆಚ್ಚಿಕೊಳ್ಳದೆ ಸ್ವಯಂಪ್ರೇರಿತವಾಗಿ ಕೈಗೊಳ್ಳಬೇಕು.
ತಾವು ಹೋದಾಗ ಮತದಾರರನ್ನು ಭೇಟಿಯಾಗಲು ಸಾಧ್ಯವಾಗದಿದ್ದರೆ ಮತ್ತೂಂದು ದಿನ ಅವರನ್ನು ಭೇಟಿಯಾಗಿ ತಲುಪಿಸಬೇಕು. ಮನೆ ಖಾಲಿಯಾಗಿದ್ದರೆ ಅಥವಾ ಬೇರೆಡೆ ನೆಲೆಸಿದ್ದರೆ ಅಂತಹ ಮತದಾರರ ಚೀಟಿಯನ್ನು ಯಾರಿಗೂ ನೀಡದೆ ತಮ್ಮ ಬಳಿಯೇ ಇಟ್ಟುಕೊಂಡಿರಬೇಕು ಎಂದು ಅಶೋಕ್ ಸೂಚಿಸಿದರು ಎಂದು ಹೇಳಿದರು.
ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, ಬೆಂಗಳೂರು ದಕ್ಷಿಣ ಕ್ಷೇತ್ರದ ಉಸ್ತುವಾರಿ ಎಸ್.ಕೆ.ನಟರಾಜ್, ಮಾಜಿ ಪಾಲಿಕೆ ಸದಸ್ಯರಾದ ಎನ್.ಆರ್.ರಮೇಶ್, ಎ.ಎಚ್.ಬಸವರಾಜು, ಸಿ.ಕೆ.ರಾಮಮೂರ್ತಿ ಇತರರು ಪಾಲ್ಗೊಂಡಿದ್ದರು.