ದೇವನಹಳ್ಳಿ: ದೋಷರಹಿತ ಮತದಾರರ ಪಟ್ಟಿ ತಯಾರಿಕೆಗೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದ ವೀಕ್ಷಕ ಅಂಜುಮ್ ಪರ್ವೇಜ್ ಸೂಚಿಸಿದರು.
ತಾಲೂಕಿನ ಚಪ್ಪರದ ಕಲ್ಲು ವೃತ್ತದ ಬಳಿ ಇರುವ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತದಾರರ ಪಟ್ಟಿ ತಯಾರಿಕೆ ಹಾಗೂ ಸಂಬಂಧಿತ ಕಾರ್ಯಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮೂನೆ-6 ರಂತೆ 18 ವರ್ಷ ತುಂಬಿದ ಪ್ರತಿಯೊಬ್ಬರು ಮತದಾರರ ಪಟ್ಟಿಗೆ ಹೆಸರು ನೊಂದಣಿ, ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಹೆಸರುಗಳ ಸೇರ್ಪಡೆ, ಮರಣ ಹೊಂದಿರುವವರ ವಿವರಗಳನ್ನು ತೆಗೆದು ಹಾಕುವಿಕೆ ಸೇರಿದಂತೆ ಮತದಾರರ ಪಟ್ಟಿಯಲ್ಲಿ ದೋಷಗಳಿದ್ದಲ್ಲಿ ಅದನ್ನು ಸರಿಪಡಿಸಿಕೊಳ್ಳಬೇಕು ಹಾಗೂ ನಕಲಿ ಗುರುತಿನ ಚೀಟಿಗಳು ತಯಾರಾಗದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕೆಂದು ಹೇಳಿದರು.
ಮತದಾರರ ಪಟ್ಟಿಯ ವಿವರಗಳನ್ನು ಪರಿಶೀಲನೆ ಮಾಡಲು ಆಯಾ ಗ್ರಾಮ ಪಂಚಾಯತಿಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ. ಯಾವುದೇ ಮತದಾರರು ಚುನಾವಣೆ ನಡೆಯುವ ಸಮಯದಲ್ಲಿ ಮತದಾನದಿಂದ ಹೊರಗುಳಿಯದೆ ಶೇ.100 ರಷ್ಟು ಮತದಾನವಾಗಲು ಹಾಗೂ ಪ್ರಾಮಾಣಿಕ ಮತ ಚಲಾವಣೆ ನಡೆಸಲು ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು ಮತದಾರರ ಪಟ್ಟಿ ಪರಿಷ್ಕರಣೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಮಗ್ರ ಮತದಾರರ ಪಟ್ಟಿ ತಯಾರಿಕೆ ಹಾಗೂ ಪರಿಷ್ಕರಣೆ ಕುರಿತು ಚಿತ್ರಮಂದಿರ, ಅಂಗನವಾಡಿ ಮತ್ತು ಕಾಲೇಜ್ ಕ್ಯಾಂಪಸ್ ಸೇರಿದಂತೆ ಇನ್ನಿತರ ಸಮೂಹ ಸಂವಹನ ಮಾಧ್ಯಮದ ಮೂಲಕ ವ್ಯಾಪಕ ಪ್ರಚಾರ ಮಾಡಿ ಹಾಗೂ ಜಿಲ್ಲೆಯಲ್ಲಿ ಸ್ವೀಪ್ ಕಾರ್ಯಕ್ರಮ ಆಯೋಜಿಸುವ ಮೂಲಕ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದು ನಿರ್ದೇಶಿಸಿದರು.
ಚುನಾವಣಾ ಆಯೋಗದ ಸೂಚನೆಯಂತೆ ಬೂತ್ ಮಟ್ಟದ ಅಧಿಕಾರಿಗಳಿಗೆ ಅಗತ್ಯ ತರಬೇತಿ ನೀಡಿ. ಮತದಾನದ ಜಾಗೃತಿ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಕಡ್ಡಾಯವಾಗಿ ಬಳಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಆಯಾ ತಾಲ್ಲೂಕಿನಲ್ಲಿ ಮತದಾರರ ಪಟ್ಟಿಯ ವಿವರಗಳನ್ನು ಆಫ್‌ಲೈನ್ ಮತ್ತು ಆನ್‌ಲೈನ್ ಪರಿವೀಕ್ಷಣೆಯ ಸೌಲಭ್ಯ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಸಿಇಒ ಎನ್.ಎಂ. ನಾಗರಾಜು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರ್‌ರು, ಪುರಸಭೆ, ನಗರಸಭೆಯ ಪೌರಯುಕ್ತರು ಮತ್ತು ಮುಖ್ಯಾಧಿಕಾರಿಗಳು ಭಾಗವಹಿಸಿದ್ದರು.