ಹಾಸನ: ಜಿಲ್ಲಾಧಿಕಾರಿ ಕಚೇರಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಕಲಾಭವನ ಸೇರಿದಂತೆ ಹಾಸನ ನಗರದ ಪ್ರಮುಖ ಸರ್ಕಾರಿ ಕಟ್ಟಡಗಳಲ್ಲಿ ಮೊದಲ ಆದ್ಯತೆಯಲ್ಲಿ ಮಳೆನೀರು ಕೊಯ್ಲು, ಕೊಳವೆಬಾವಿಗಳ ಪುನಶ್ಚೇತನ ಮಾಡಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೋಡೆಲ್ ಅಧಿಕಾರಿ ನೇಮಕ: ಸರ್ಕಾರಿ ಕಟ್ಟಡಗಳಲ್ಲಿ ಮಳೆ ಕೊಯ್ಲು ಜಾರಿಗೊಳಿಸುವ ನಿಟ್ಟಿನಲ್ಲಿ ಗಣಿ ಮತ್ತು ಭೂ ಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಸುಧಾ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಮಳೆನೀರು ಕೊಯ್ಲು, ಕೊಳವೆಬಾವಿ ಪುನಶ್ಚೇತನ ಕ್ರಮಗಳು ತುರ್ತಾಗಿ ನಡೆಯಬೇಕು. ಎಲ್ಲಾ ಕಲ್ಯಾಣ ಮಂಟಪಗಳು, ಪೆಟ್ರೋಲ್ಬಂಕ್ ಹಾಗೂ ದೊಡ್ಡ ವಾಣಿಜ್ಯ ಮಳಿಗೆಗಳಲ್ಲೂ ಮಳೆನೀರು ಕೊಯ್ಲು ಕಡ್ಡಾಯಗೊಳಿಸಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಚರಂಡಿ ಸ್ವಚ್ಛಗೊಳಿಸಿ: ಹಾಸನ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಚರಂಡಿಗಳನ್ನು ಮುಂಗಾರು ಪ್ರಾರಂಭಕ್ಕೆ ಮುನ್ನವೇ ಸ್ವಚ್ಛಗೊಳಿಸಿ ಕೆರೆಕಟ್ಟೆಗಳಿಗೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಅಗತ್ಯ ಕ್ರಮವಸಬೇಕು. ನೀರಿನ ಸಂರಕ್ಷಣೆ ಎಲ್ಲರ ಹೊಣೆ, ಸರ್ಕಾರ, ಸಂಘ ಸಂಸ್ಥೆಗಳು, ಸಾರ್ವಜನಿಕರು ಎಲ್ಲರೂ ಇದರಲ್ಲಿ ಕೈ ಜೋಡಿಸಬೇಕು ಎಂದರು.
Advertisement
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಲಸಂವರ್ಧನೆಗೆ ಸಹಭಾಗಿತ್ವ ಪಡೆಯುವ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಕೈಗಾರಿಕೋದ್ಯಮಿಗಳ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಸಿದರು.
Related Articles
Advertisement
ಜಿಲ್ಲೆಯಲ್ಲಿ ಹಸಿರು ಭೂಮಿ ಪ್ರತಿಷ್ಠಾನವು ಜಲಾಂದೋಲನದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿರುವುದು ಅಭಿನಂದನಾರ್ಹ. ಇದೇ ರೀತಿ ದೊಡ್ಡ ದೊಡ್ಡ ಕೈಗಾರಿಕೆಗಳು ಜಿಲ್ಲೆಯಲ್ಲಿನ ವಿವಿವಿಧ ಕೆರೆಗಳ ಪುನಶ್ಚೇತನ, ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಂಡು ತಮ್ಮ ಸಾಮಾಜಿಕ ಕಳಕಳಿ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.
ಸಾರ್ವಜನಿಕರ ಸಹಕಾರ ಅಗತ್ಯ: ಹಸಿರು ಭೂಮಿ ಪ್ರತಿಷ್ಠಾನದ ಪ್ರಮುಖರಾದ ಆರ್.ಪಿ.ವೆಂಕಟೇಶ್ ಮೂರ್ತಿಯವರು ಜಲ ಸಂರಕ್ಷಣೆ, ನೀರಿನ ಸಂರಕ್ಷಣೆಯ ಮಹತ್ವ, ಅನಿವಾರ್ಯತೆಗಳ ಬಗ್ಗೆ ವಿವರಿಸಿ ಜಿಲ್ಲೆಯಲ್ಲಿ ನಡೆದಿರುವ ಕೆರೆಗಳ ಅಭಿವೃದ್ಧಿ ಕಾರ್ಯಗಳು ಅದಕ್ಕೆ ಸಾರ್ವಜನಿಕರು, ಸಂಘ-ಸಂಸ್ಥೆಗಳ ಸಹಕಾರ ಬಳಸಿಕೊಂಡು ಇನ್ನಷ್ಟು ಕಾರ್ಯಗಳನ್ನು ಹೇಗೆ ರೂಪಿಸಬಹುದು ಎಂಬುದರ ಕುರಿತು ವಿವರಿಸಿದರು.
ಕೆರೆಗಳ ಪುನಶ್ಚೇತನ: ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳು, ಮುಜರಾಯಿ ದೇವಾಲಯಗಳಲ್ಲಿ ಮಳೆನೀರು ಕೊಯ್ಲು ಮಾಡಬಹುದು. ಅನೇಕ ಕೆರೆಗಳನ್ನು ಪುನಶ್ಚೇತನಗೊಳಿಸಲು ಅವಕಾಶವಿದ್ದು ಪ್ರೇರಣೆ, ಸಹಕಾರ ಅಗತ್ಯವಿದೆ. ಆ ಮೂಲಕ ಇತರೆ ಜಿಲ್ಲೆಗಳಿಗೆ ಹಾಸನ ಮಾದರಿಯಾಗಬಹುದಾಗಿದೆ ಎಂದರು.
ಹಿರಿಯ ಭೂ ವಿಜ್ಞಾನಿ ಸುಧಾ, ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ವೈ.ಎಸ್.ಸುಬ್ಬಸ್ವಾಮಿ ಪ್ರಮುಖರಾದ ಮಂಜುನಾಥ್ ಮೋರೆ, ಚೌಡಳ್ಳಿ ಪುಟ್ಟರಾಜು, ಎಸ್.ಪಿ. ರಾಜೀವೇಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್.ಮುದ್ದೇಗೌಡ, ಹಿಮ್ಸ್‌ನ ಮುಖ್ಯ ಆಡಳಿತಾಧಿಕಾರಿ ಕಲ್ಪಶ್ರೀ, ಎಂ.ಸಿ.ಇ. ಕಾಲೇಜಿನ ಪ್ರಾಂಶುಪಾಲ ಜಯಂತ್ ಮತ್ತು ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ತಿಮ್ಮೇಶ್ ಮತ್ತಿತರರು ಮಳೆ ನೀರು ಕೊಯ್ಲುಹಾಗೂ ಕೆರೆಗಳ ಅಭಿವೃದ್ಧಿ ಯಶೋಗಾಥೆಗಳ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡು ಅಂತರ್ಜಲ ಸಂರಕ್ಷಣೆಗೆ ಪೂರಕವಾದ ಸಲಹೆ ನೀಡಿದರು.
ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಎಸ್.ಎನ್.ಹೆಗ್ಡೆ, ವಿವಿಧ ಕಾಲೇಜಿನ ಪ್ರಾಂಶುಪಾಲರು, ಕೈಗಾರಿಕೆಗಳ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಲವು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.