ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿರುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು ಸ್ಥಳೀಯ ಸಮುದಾಯ, ಸಂಘ ಸಂಸ್ಥೆಗಳ ಸಹಕಾರ ಮತ್ತು ಪಾಲ್ಗೊಳ್ಳುವಿಕೆಯ ಮೂಲಕ ಶಾಲಾ ಮೂಲಸೌಕರ್ಯ ಹೆಚ್ಚಿಸಿಕೊಳ್ಳಲು ಪ್ರಯತ್ನ ನಡೆಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.
ಶಾಲೆಗಳಲ್ಲಿ ಕಡ್ಡಾಯವಾಗಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ ಮಾಡಬೇಕು ಮತ್ತು ಇಲಾಖೆ ಸೂಚಿಸಿರುವ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಪಾಲಿಸಬೇಕು. ಎಸ್‌ಡಿಎಂಸಿಗಳು ಸ್ಥಳೀಯ ಜನ ಪ್ರತಿನಿಧಿಗಳ, ಸಂಘ-ಸಂಸ್ಥೆ, ಹಳೇ ವಿದ್ಯಾರ್ಥಿಗಳು, ಉದ್ದಿಮೆದಾರರು, ಗಣ್ಯರ ಅನುಭವ ಮತ್ತು ಸೇವೆಗಳನ್ನು ಪರಿಣಾಮಕಾರಿ ಯಾಗಿ ಬಳಸಿಕೊಂಡು ಶಾಲೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸೂಚಿಸಿದೆ.
ವರ್ಷಕ್ಕೆ ಎರಡು ಬಾರಿ ಎಸ್‌ಡಿಎಂಸಿಯಿಂದ ಸಮುದಾಯದ ಸಭೆ ಕರೆಯಬೇಕು. ಎಲ್ಲ ಸಮುದಾಯಗಳನ್ನು ಇದರಲ್ಲಿ ಭಾಗವಹಿಸುವಂತೆ ಮಾಡಬೇಕು. ಶಾಲೆ ಬೆಳೆದು ಬಂದ ಹಿನ್ನೆಲೆ, ವಿದ್ಯಾರ್ಥಿ-ಶಿಕ್ಷಕರ ಸಾಧನೆ, ಕಾರ್ಯಕ್ರಮಗಳ ಅನುಷ್ಠಾನದ ವಿವರನ್ನು ಸಭೆಗೆ ನೀಡಬೇಕು. ಶಾಲೆ ಹೊರಗುಳಿದ ಮಕ್ಕಳು, ಆಗಿಂದಾಗ್ಗೆ ಗೈರಾಗುವ ವಿದ್ಯಾರ್ಥಿಗಳ ಹಾಜರಾತಿ ವಿಶೇಷ ಕ್ರಮ, ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ, ಶಾಲಾ ಆಸ್ತಿ ರಕ್ಷಣೆ, ಬೋಧನೋಪಕರಣಗಳು, ತಂತ್ರಜ್ಞಾನದ ಬಳಕೆ, ಪೀಠೊಪಕರಣ, ಕೊಠಡಿಗಳ ಸುಸ್ಥಿತಿ ಇತ್ಯಾದಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಬೇಕು ಎಂದು ನಿರ್ದೇಶಿಸಿದೆ.
ಸಭೆಯಲ್ಲಿ ಚರ್ಚಿಸಿದ ಸಮಸ್ಯೆಗಳಿಗೆ ಸರ್ಕಾರದ ಅನುದಾನದ ಜತೆಗೆ ಊರಿನ ದಾನಿಗಳು, ಗಣ್ಯರು, ಸಂಘ-ಸಂಸ್ಥೆಗಳು, ಕಂಪನಿ ಇತ್ಯಾದಿಗಳ ಮೂಲಕ ಸಂಪನ್ಮೂಲ ಕ್ರೋಢೀಕರಿಸಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಈ ಸಭೆಯಲ್ಲಿ ಡಿಡಿಪಿಐ, ಬಿಇಒ, ಬ್ಲಾಕ್ ಸಂಪನ್ಮೂಲ ಅಧಿಕಾರಿ, ಕ್ಲಸ್ಟರ್ ಸಂಪನ್ಮೂಲ ಅಧಿಕಾರಿಗಳಲ್ಲಿ ಒಬ್ಬರು ಕಡ್ಡಾಯವಾಗಿ ಹಾಜರಿರಬೇಕು. ಒಟ್ಟಿನಲ್ಲಿ ಎಸ್‌ಡಿಎಂಸಿಗಳು ಶಾಲೆಗಳ ಅಭಿವೃದ್ಧಿಗಾಗಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.