Advertisement

ನೋಟು: ಕೇಂದ್ರದ ಮೇಲೆ ಮುಗಿಬಿದ್ದ ಕಾಂಗ್ರೆಸ್ಸಿಗರು

03:45 AM Jan 03, 2017 | Team Udayavani |

ಬೆಂಗಳೂರು: ನೋಟು ಬ್ಯಾನ್‌ ಮಾಡಿ 50 ದಿನ ಕಳೆದರೂ ಪರಿಸ್ಥಿತಿ ಸುಧಾರಿಸದಿರುವುದಕ್ಕೆ ರಾಜ್ಯದಲ್ಲಿ ಕಾಂಗ್ರೆಸ್‌ ಮುಖಂಡರು ಸೋಮವಾರ ರಾಜ್ಯದ ವಿವಿಧಡೆ ಏಕಕಾಲಕ್ಕೆ ಸುದ್ದಿಗೋಷ್ಠಿ ನಡೆಸಿ ಕೇಂದ್ರದ ಮೇಲೆ ಹರಿಹಾಯ್ದಿದ್ದಾರೆ. ಜತೆಗೆ ಹೋರಾಟ ನಡೆಸಲು ಪಕ್ಷ ನಿರ್ಧರಿಸಿದ್ದಾರೆ. 

Advertisement

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ  9ರಂದು ಹೋರಾಟ ನಡೆಯಲಿದೆ.ಸಚಿವರು, ಕೆಪಿಸಿಸಿ ಕಾರ್ಯಾಧ್ಯಕ್ಷರು, ಎಐಸಿಸಿ ವೀಕ್ಷಕರು ವಿವಿಧೆಡೆ ಮಾತನಾಡಿ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.

ಗದಗದಲ್ಲಿ ಎಐಸಿಸಿ ವೀಕ್ಷಕ ರವಿಚಂದ್ರ ರೆಡ್ಡಿ ಮಾತನಾಡಿ,  ನೋಟು ಅಪನಗದೀಕರಣದಿಂದ ದೇಶದಲ್ಲಿ ಮೋದಿ ಪ್ರಾಯೋಜಿತ ಆರ್ಥಿಕ ವಿಪತ್ತು ಎದುರಾಗಿದೆ. 50 ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎಂಬ ಭರವಸೆ ಸುಳ್ಳಾಗಿದೆ. ಭ್ರಷ್ಟಾಚಾರ, ಕಪ್ಪು ಹಣಕ್ಕೆ ಕಡಿವಾಣ ಹಾಕುವ ನೆಪದಲ್ಲಿ ಆನ್‌ಲೈನ್‌ ಖಾಸಗಿ ಹಣಕಾಸು ಸಂಸ್ಥೆಗಳಿಗೆ ಮಣೆ ಹಾಕುವ ಮೂಲಕ ಸಾರ್ವಜನಿಕರನ್ನು ವಂಚಿಸಲಾಗುತ್ತಿದೆ.  ಅಪನಗದೀಕರಣದ ಹಿಂದಿನ ಸತ್ಯಾಂಶವನ್ನು ಬಹಿರಂಗ ಪಡಿಸಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಜ. 9ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ  11ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಬಾಗಲಕೋಟೆಯಲ್ಲಿ ಮಾತನಾಡಿದ ಸಚಿವೆ ಉಮಾಶ್ರೀ, ನೋಟು ಬದಲಾವಣೆ ನೆಪದಲ್ಲಿ ಆರ್‌ಬಿಐ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಇದರಿಂದಾಗಿ ಪ್ರಧಾನಿ ಮೋದಿ ಮೂಗಿನ ನೇರಕ್ಕೆ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಈ ನಡುವೆ ಬಳ್ಳಾರಿಯಲ್ಲಿ ಮಾತನಾಡಿದ ಸಚಿವ ಸಂತೋಷ ಲಾಡ್‌, ನೋಟು ಅಪನಗದೀಕರಣದಿಂದ ಬಡ ಜನರಿಗೆ ತೊಂದರೆಯಾಗುತ್ತಿದೆ. ಕಟ್ಟಡ ಕಾಮಗಾರಿಗಳೆಲ್ಲ ಸ್ಥಗಿತಗೊಂಡಿವೆ. ಕೂಲಿಕಾರ್ಮಿಕರು ಕೆಲಸವಿಲ್ಲದೇ ಪರದಾಡುವಂತಾಗಿದೆ ಎಂದರು.

Advertisement

ಮೈಸೂರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ಹೊಸ ನೋಟುಗಳಲ್ಲಿ ಯಾವುದೇ ರೀತಿ ಭದ್ರತೆ ಇಲ್ಲ. ಈಗಾಗಲೇ ಗುಜರಾತ್‌ನಲ್ಲಿ ನಕಲಿ ನೋಟು ಮುದ್ರಿಸಲಾಗಿದೆ. ಕೇಂದ್ರದಲ್ಲಿ ತುಘಲಕ್‌ ದರ್ಬಾರ್‌ ನಡೆಸಲಾಗುತ್ತಿದೆ. ಭೀಮ್‌ ಹೆಸರಿನ ಆ್ಯಪ್‌ ಬಿಡುಗಡೆ ಮೂಲಕ ಅಂಬೇಡ್ಕರ್‌ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಮಂಗಳೂರಲ್ಲಿ ಮಾತನಾಡಿದ ಸಚಿವ ರಮಾನಾಥ ರೈ, ಪ್ರಧಾನಿ ನರೇಂದ್ರ ಮೋದಿ ಬಡವಿರೋಧಿ ನೀತಿ ಅನುಸರಿಸುತ್ತಿದೆ. ಬಡವರು ಮೋದಿಯನ್ನು ಕಿತ್ತೆಸೆಯಲು ಪಣ ತೊಡಬೇಕಿದೆ ಎಂದರು.

ಕಲಬುರಗಿಯಲ್ಲಿ ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ, ರಾಹುಲ್‌ ಗಾಂಧಿ ಕೇಳಿದ 5 ಪ್ರಶ್ನೆಗಳನ್ನೇ ಮೋದಿಗೆ ಕೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next