ಮಹಾರಾಜ್ ಗಂಜ್(ಉತ್ತರಪ್ರದೇಶ):500, 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಕ್ರಮವನ್ನು ಕಟುವಾಗಿ ಟೀಕಿಸಿದ್ದ ಖ್ಯಾತ ಅರ್ಥಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ತಿರುಗೇಟು ನೀಡಿದ್ದಾರೆ.
ಹಾರ್ವರ್ಡ್ ಗಿಂತ ಹಾರ್ಡ್ ವರ್ಕ್ ಹೆಚ್ಚು ಪವರ್ ಫುಲ್:
ಉತ್ತರಪ್ರದೇಶದಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಹಾರ್ವರ್ಡ್ (ವಿಶ್ವವಿದ್ಯಾನಿಲಯ)ಕ್ಕಿಂತ ಕಠಿಣ ಕೆಲಸವೇ ಹೆಚ್ಚು ಪವರ್ ಫುಲ್ ಎಂದು ಹೇಳಿದ್ದಾರೆ.
ಹಾರ್ವರ್ಡ್ ನಂತಹ ಪ್ರತಿಷ್ಠಿತ ವಿವಿಯಲ್ಲಿ ವಿದ್ಯಾಭ್ಯಾಸ ಮಾಡಿದ ಜನ ಒಂದರ್ಥದಲ್ಲಿ (ನೋಟು ನಿಷೇಧದ ಬಗ್ಗೆ ಟೀಕೆ) ಮಾತನಾಡುತ್ತಿರುತ್ತಾರೆ, ಅದೇ ರೀತಿ ಬಡವನ ಮಗನೊಬ್ಬ ಕಠಿಣ ಕೆಲಸದ ಮೂಲಕ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಶ್ರಮ ಪಡುತ್ತಿದ್ದಾರೆ ಎಂದು ಮೋದಿ ಅಮರ್ತ್ಯಸೇನ್ ಅವರನ್ನು ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.
ಆ ನಿಟ್ಟಿನಲ್ಲಿ ಯಾವುದೇ ವಿಶ್ಲೇಷಣೆ ನೀಡದೆ ಹಾರ್ವರ್ಡ್ ಗಿಂತ ಹಾರ್ಡ್ ವರ್ಕ್ ಹೆಚ್ಚು ಪ್ರಭಾವಶಾಲಿ ಎಂದು ಮೋದಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧಿಸಿದ್ದರಿಂದ ಜನರು ಹಾಗೂ ಸಣ್ಣ ವ್ಯಾಪಾರಸ್ಥರು ಬೀದಿಗೆ ಬೀಳುವಂತಾಗಿದೆ ಎಂದು ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಅವರು ಕೇಂದ್ರದ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.