ನವದೆಹಲಿ: ಅಪನಗದೀಕರಣದ ಬಳಿಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಪಕ್ಷಗಳು ಸಮರವನ್ನು ಮುಂದುವರಿಸಿದ್ದರೆ ಮತ್ತೊಂದೆಡೆ 500, 1000 ರೂ. ಮುಖಬೆಲೆಯ ನೋಟು ನಿಷೇಧದ ನಂತರ ದೇಶಾದ್ಯಂತ ಶೇ.50ರಷ್ಟು ಹವಾಲಾ ಜಾಲಕ್ಕೆ ಬ್ರೇಕ್ ಬಿದ್ದಿದೆ ಎಂದು ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಬಹಿರಂಗಪಡಿಸಿದೆ.
ನೋಟು ನಿಷೇಧದ ನಂತರ ದೇಶಾದ್ಯಂತ ಹವಾಲಾ ಜಾಲ ಏಜೆಂಟರ ನಡುವಿನ ದೂರವಾಣಿ ಕರೆಯಲ್ಲೂ ಭಾರೀ ಕುಸಿತ ಕಂಡಿರುವುದಾಗಿ ವರದಿ ವಿವರಿಸಿದೆ.
ನವೆಂಬರ್ 9ರಿಂದ ಜಾರಿ ಬಂದಿದ್ದ ನೋಟು ನಿಷೇಧದ ನಿರ್ಧಾರ ದೇಶದ ಹವಾಲಾ ಜಾಲಕ್ಕೆ ದೊಡ್ಡ ಹೊಡೆತ ನೀಡಿರುವುದಾಗಿ ಗುಪ್ತಚರ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ ನೋಟು ನಿಷೇಧದ ನಂತರ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಸಂಬಂಧಿ ಹಿಂಸಾಚಾರಗಳು ಶೇ.60ರಷ್ಟು ಇಳಿಮುಖವಾಗಿದೆ ಎಂದು ತಿಳಿಸಿದೆ.
ಭಾರತದ ನೋಟುಗಳನ್ನು ಪಾಕಿಸ್ತಾನ ಸರ್ಕಾರ ಕ್ವೆಟ್ಟಾದಲ್ಲಿರುವ ಪ್ರೆಸ್ ನಲ್ಲಿ ಉತ್ಕೃಷ್ಟ ಮಟ್ಟದ ನಕಲಿ ನೋಟುಗಳನ್ನು ತಯಾರಿಸಿ ಭಯೋತ್ಪಾದನೆಗೆ ಬಳಸುತ್ತಿತ್ತು ಎಂದು ಭಾರತದ ಗುಪ್ತಚರ ಇಲಾಖೆ ಶಂಕಿಸಿದೆ. ಆ ನಿಟ್ಟಿನಲ್ಲಿ ನೋಟು ನಿಷೇಧದಿಂದಾಗಿ ಭಯೋತ್ಪಾದನೆ ಹಾಗೂ ಹವಾಲಾ ಕಳ್ಳಾಟಕ್ಕೆ ತಡೆ ಬಿದ್ದಿದೆ. ಕಾಶ್ಮೀರದಲ್ಲಿಯೂ ಕಲ್ಲು ಹೊಡೆಯುವ ಸಂಘಟನೆಗಳಿಗೆ ಈಗ ಹಣ ಸಿಗದಂತಾಗಿದೆ ಎಂದು ವರದಿ ವಿವರಿಸಿದೆ.
ಕಣಿವೆ ರಾಜ್ಯದಲ್ಲಿ ಈಗ ಶೇ.60ರಷ್ಟು ಹಿಂಸಾಚಾರಕ್ಕೆ ಕಡಿವಾಣ ಬಿದ್ದಿದೆ.
ನೋಟು ನಿಷೇಧದಿಂದಾಗಿ ನಕ್ಸಲೀಯರ ಚಟುವಟಿಕೆಗೆ ಹೊಡೆತ ಬಿದ್ದಿದೆ. ಹಣವಿಲ್ಲದೆ ಮಾವೋವಾದಿಗಳ ಅಟ್ಟಹಾಸದ ಧ್ವನಿ ಅಡಗತೊಡಗಿದೆ ಎಂದು ಹೇಳಿದೆ.