ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಡೆಸಿದ ಎಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು ಒಟ್ಟಾರೆ ಶೇ. 73.70ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಫಲಿತಾಂಶದಲ್ಲಿ ಶೇ. 1.77ರಷ್ಟು ಹೆಚ್ಚಳವಾಗಿದೆ.
ಜಿಲ್ಲಾವಾರು ಫಲಿತಾಂಶದಲ್ಲಿ ಹಾಸನ ಜಿಲ್ಲೆ ಮೊದಲ ಸ್ಥಾನಕ್ಕೆ ನೆಗೆದೇರಿದೆ. ಹಾಸನ ಜಿಲ್ಲೆಯ ಈ ಸಾಧನೆ ನಿಜಕ್ಕೂ ಅಭಿನಂದನೀಯ. ಇದೇ ವೇಳೆ ರಾಮನಗರ ಜಿಲ್ಲೆ ದ್ವಿತೀಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ತೃತೀಯ ಸ್ಥಾನ ಲಭಿಸಿದೆ. ಇನ್ನು ವೈಯಕ್ತಿಕವಾಗಿ ಆನೇಕಲ್ನ ಸೈಂಟ್ ಫಿಲೋಮಿನಾ ಹೈಸ್ಕೂಲ್ನ ಡಿ. ಸೃಜನಾ ಮತ್ತು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಲಬಾಗದ ಸಿವಿಎಸ್‌ಕೆ ಹೈಸ್ಕೂಲ್ನ ನಾಗಾಂಜಲಿ ಪರಮೇಶ್ವರ ನಾಯ್ಕ ಅವರು 625 ಅಂಕಗಳನ್ನು ಗಳಿಸಿ ರಾಜ್ಯಕ್ಕೇ ಮೊದಲ ಸ್ಥಾನಿಗಳಾಗಿದ್ದಾರೆ. 11 ವಿದ್ಯಾರ್ಥಿಗಳು ತಲಾ 624, 19 ವಿದ್ಯಾರ್ಥಿಗಳು 623, 39 ವಿದ್ಯಾರ್ಥಿಗಳು 622, 43 ವಿದ್ಯಾರ್ಥಿಗಳು 621 ಮತ್ತು 56 ವಿದ್ಯಾರ್ಥಿಗಳು 620 ಅಂಕಗಳನ್ನು ಗಳಿಸುವ ಮೂಲಕ ಉತ್ತಮ ನಿರ್ವಹಣೆ ತೋರಿದ್ದಾರೆ.
ಈ ಬಾರಿಯ ಎಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಸರಕಾರಿ ಶಾಲೆಗಳು ಗಮನಾರ್ಹ ಸಾಧನೆಗೈದಿವೆ. ಒಟ್ಟಾರೆಯಾಗಿ 1,626 ಶಾಲೆಗಳು ಶೇ. 100 ಫಲಿತಾಂಶವನ್ನು ದಾಖಲಿಸಿವೆ. ಈ ಪೈಕಿ 593 ಸರಕಾರಿ ಶಾಲೆಗಳು ಶೇ. 100 ಫಲಿತಾಂಶವನ್ನು ಪಡೆಯುವ ಮೂಲಕ ಖಾಸಗಿ ಶಾಲೆಗಳ ಸವಾಲನ್ನು ಸಮರ್ಥವಾಗಿ ಎದುರಿಸುವಲ್ಲಿ ಸಫಲವಾಗಿವೆ. ಕಳೆದ ವರ್ಷ 102 ಸರಕಾರಿ ಶಾಲೆಗಳಿಗಷ್ಟೇ ಈ ಸಾಧನೆ ಸಾಧ್ಯವಾಗಿತ್ತು. ಇನ್ನೂ ಒಂದು ಅಚ್ಚರಿಯ ವಿಷಯ ಎಂದರೆ ಈ ಬಾರಿಯ ಫಲಿತಾಂಶದಲ್ಲಿ ಯಾವೊಂದೂ ಸರಕಾರಿ ಶಾಲೆಯೂ ಶೂನ್ಯ ಫಲಿತಾಂಶದ ಅಪಕೀರ್ತಿಗೆ ಒಳಗಾಗದಿರುವುದು. ಇದೇ ವೇಳೆ 37 ಅನುದಾನ ರಹಿತ ಮತ್ತು 9 ಅನುದಾನಿತ ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ. ಒಟ್ಟು 5,202 ಸರಕಾರಿ ಶಾಲೆಗಳ ಪೈಕಿ ಶೇ. 77.84ರಷ್ಟು ಫಲಿತಾಂಶ ದಾಖಲಾಗಿದೆ.
ಸರಕಾರಿ ಶಾಲೆಗಳ ಈ ಸಾಧನೆಗೆ ರಾಜ್ಯದೆಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ. ಸರಕಾರಿ ಶಾಲೆಗಳು ಎಂದಾಕ್ಷಣ ಮೂಲಸೌಕರ್ಯಗಳ ಕೊರತೆಯ ಆರೋಪ, ಶಿಕ್ಷಣದ ಗುಣಮಟ್ಟದ ಬಗೆಗೆ ಅಪಸ್ವರಗಳು ಕೇಳಿಬರುತ್ತಿರುವ ಹೊರತಾಗಿಯೂ ಈ ಶಾಲೆಗಳು ಅತ್ಯುತ್ತಮ ಫಲಿತಾಂಶ ದಾಖಲಿಸಿವೆ. ಬಹುತೇಕ ಸರಕಾರಿ ಶಾಲೆಗಳು ಗ್ರಾಮೀಣ ಪ್ರದೇಶಗಳಲ್ಲಿಯೇ ಇರುವುದು ಉಲ್ಲೇಖಾರ್ಹ ಅಂಶ. ಈ ಬಾರಿಯೂ ಗ್ರಾಮೀಣ ಭಾಗದ ಶಾಲೆಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆದರೆ ಆಂಗ್ಲ ಮಾಧ್ಯಮ ಶಾಲೆಗಳು ಈ ಬಾರಿಯೂ ಫಲಿತಾಂಶದಲ್ಲಿ ತಮ್ಮ ಪ್ರಭುತ್ವವನ್ನು ಉಳಿಸಿಕೊಂಡಿವೆ. ಆಂಗ್ಲ ಮಾಧ್ಯಮ ಶಾಲೆಗಳು ಶೇ. 81. 23 ಮತ್ತು ಕನ್ನಡ ಮಾಧ್ಯಮ ಶಾಲೆಗಳು ಶೇ. 67.33 ರಷ್ಟು ಫಲಿತಾಂಶ ಪಡೆದಿವೆ. ಇದನ್ನು ಗಮನಿಸಿದಾಗ ಕನ್ನಡ ಮಾಧ್ಯಮ ಶಾಲೆಗಳು ಇನ್ನೂ ಒಂದಿಷ್ಟು ಹೆಚ್ಚು ಶ್ರಮ ವಹಿಸಿ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಇದೆ.
ಎಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಸದಾ ಮುಂಚೂಣಿ ಯಲ್ಲಿರುತ್ತಿದ್ದ ಕರಾವಳಿ ಜಿಲ್ಲೆಗಳು ಕಳೆದ ಕೆಲ ವರ್ಷಗಳಿಂದೀಚೆಗೆ ಒಂದಿಷ್ಟು ಹಿನ್ನಡೆ ಅನುಭವಿಸುತ್ತಿವೆ. ಕಳೆದ ಬಾರಿ ಉಡುಪಿ ಜಿಲ್ಲೆ ಎಸೆಸ್ಸೆಲ್ಸಿ ಫಲಿತಾಂಶದಲ್ಲಿ ಅಗ್ರಸ್ಥಾನಕ್ಕೆ ಮರಳಿತ್ತಾದರೂ ಈ ಬಾರಿ 5ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇನ್ನು ಕಳೆದ ಬಾರಿ 4ನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಈ ಬಾರಿ ಏಳನೇ ಸ್ಥಾನಕ್ಕೆ ಕುಸಿದಿದೆ. ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಈ ಎರಡು ಜಿಲ್ಲೆಗಳ ಫಲಿತಾಂಶ ತುಸು ಆತಂಕಕ್ಕೆ ಕಾರಣವಾಗಿದೆ. ಇನ್ನು ಈ ಬಾರಿ ಶೇ. 53.95ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿಯೇ ಕೊನೆಯ ಸ್ಥಾನದಲ್ಲಿರುವ ಯಾದಗಿರಿ ಜಿಲ್ಲೆಯತ್ತ ಶಿಕ್ಷಣ ಇಲಾಖೆ ಹೆಚ್ಚಿನ ಗಮನ ಹರಿಸುವ ಅನಿವಾರ್ಯತೆ ಇದೆ.
ಈ ಎಲ್ಲ ಅಂಕಿಅಂಶಗಳು ಕೇವಲ ಫಲಿತಾಂಶದ ದೃಷ್ಟಿಯಿಂದ ಪ್ರಾಮುಖ್ಯತೆಯನ್ನು ಪಡೆದಿವೆಯೇ ವಿನಾ ಇದುವೇ ಅಂತಿಮವಲ್ಲ. ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳಿಗೆ ಜೂ. 21ರಿಂದ 27ರವರೆಗೆ ಪೂರಕ ಪರೀಕ್ಷೆ ನಡೆಯಲಿದ್ದು ಒಂದಿಷ್ಟು ಶ್ರದ್ಧೆ, ಏಕಾಗ್ರತೆಯಿಂದ ಓದಿದ್ದೇ ಆದಲ್ಲಿ ತೇರ್ಗಡೆಯಾಗಿ ತಮ್ಮ ಶಿಕ್ಷಣವನ್ನು ಮುಂದುವರಿಸಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಇದೀಗ ಪ್ರಕಟಗೊಂಡಿರುವ ಫಲಿತಾಂಶಕ್ಕೆ ಧೃತಿಗೆಡದೆ ಒಂದಿಷ್ಟು ವಿವೇಚನೆಯಿಂದ ವಿದ್ಯಾರ್ಥಿಗಳು ಮುಂದಡಿ ಇಟ್ಟಲ್ಲಿ ಅವರ ಭವಿಷ್ಯ ಉಜ್ವಲವಾಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಪೋಷಕರ ಪಾತ್ರ ಅತೀ ಮಹತ್ವದ್ದಾಗಿದೆ. ಇದೇ ವೇಳೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಈ ಬಾರಿ ಎಸೆಸೆಲ್ಸಿ ಪರೀಕ್ಷೆ, ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಕಟನೆ ಪ್ರಕ್ರಿಯೆಗಳನ್ನು ಯಾವುದೇ ಗೊಂದಲಗಳಿಗೆ ಎಡೆ ಇಲ್ಲದೆ ಪೂರ್ಣಗೊಳಿಸುವ ಮೂಲಕ ವಿದ್ಯಾರ್ಥಿಗಳು ಪೋಷಕರ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.