Advertisement

ಮದ್ಯ ನಿಷೇಧವಿಲ್ಲದ್ದಕ್ಕೆ ನೋಟಾ

02:01 AM Apr 08, 2019 | Sriram |

ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣ ಮದ್ಯ ಮಾರಾಟ ನಿಷೇಧಕ್ಕೆ ರಾಜಕೀಯ ಪಕ್ಷಗಳು ಬೆಂಬಲಿಸದೆ ಇರುವುದನ್ನು ಖಂಡಿಸಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸಾಮೂಹಿಕವಾಗಿ ನೋಟಾ ಚಲಾವಣೆ ಮಾಡಲು ಮದ್ಯಪಾನ ನಿಷೇಧ ತಂಡದ ಮಹಿಳೆಯರು ಮುಂದಾಗಿದ್ದಾರೆ. ರಾಜ್ಯದ 22 ಜಿಲ್ಲೆಗಳಲ್ಲಿ ಈ ತಂಡ ಸಕ್ರಿಯವಾಗಿದೆ.

Advertisement

ಇತ್ತೀಚೆಗೆ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಿಸಬೇಕು ಎಂದು ಒತ್ತಾಯಿಸಿ, “ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಮಿತಿಯ’ ಮೂಲಕ ಮೂರು ಸಾವಿರಕ್ಕೂ ಹೆಚ್ಚು ಮಹಿಳೆಯರು ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಕಿ.ಮೀ ಕಾಲ್ನಡಿಗೆಯ ಮೂಲಕ ರಾಜಧಾನಿ ತಲುಪಿದ್ದರು. ಮದ್ಯ ಸೇವಿಸಿ ನಿತ್ಯವೂ ನರಕ ತೋರಿಸುತ್ತಿರುವ ತಮ್ಮ ಪತಿಯರ ವಿರುದ್ಧ ಬೀದಿಗೆ ಇಳಿದಿದ್ದರು. ಈ ಹೋರಾಟಕ್ಕೆ ಯಾವುದೇ ರಾಜಕೀಯ ಪಕ್ಷಗಳೂ ಸ್ಪಂದಿಸಿರಲಿಲ್ಲ. ಈಗ ಹೋರಾಟ ಹೊಸ ರೂಪವನ್ನು ಪಡೆದುಕೊಂಡಿದ್ದು, ಮಹಿಳೆಯರು ನೋಟಾ ಚಲಾಯಿಸಲು ಮುಂದಾಗಿದ್ದಾರೆ.

“ಚುನಾವಣಾ ಸಮಯದಲ್ಲಷ್ಟೇ ರಾಜಕೀಯ ನಾಯಕರು ನಮ್ಮ ಮಾತು ಕೇಳುತ್ತಾರೆ. ಹೀಗಾಗಿ ಅವರ ಮುಂದೆ ನಮ್ಮ ಬೇಡಿಕೆಗಳನ್ನು ಮತ್ತೂಮ್ಮೆ ಇಡುತ್ತಿದ್ದೇವೆ’ ಎನ್ನುತ್ತಾರೆ ಸಮಿತಿ ಸದಸ್ಯೆಯಾಗಿರುವ ಮಲರ್‌. “ಅಷ್ಟು ದೊಡ್ಡ ಮಟ್ಟದ ಹೋರಾಟ ಮಾಡಿದಾಗಲೂ ಯಾವುದೇ ರಾಜಕೀಯ ಪಕ್ಷಗಳು ಕನಿಷ್ಠ ಸೌಜನ್ಯಕ್ಕಾದರೂ ನಮ್ಮನ್ನು ಬೆಂಬಲಿಸಲಿಲ್ಲ. ಸ್ಲಂಗಳಲ್ಲಿ 40 ವರ್ಷದ ಒಳಗೇ ಪುರುಷರು ಸಾವನ್ನಪ್ಪುತ್ತಿದ್ದು, ಕುಟುಂಬದ ಜವಾಬ್ದಾರಿ ಮಹಿಳೆಯರ ಮೇಲೆ ಬೀಳುತ್ತಿದೆ. ಈ ಬಾರಿ ನಗರದ ಹಸಿರು ದಳ, ಸ್ಲಂ ಮಹಿಳಾ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳಿಂದ 20 ಸಾವಿರಕ್ಕೂ ಹೆಚ್ಚು ಮಹಿಳೆಯರು ಈ ಆಂದೋಲನಕ್ಕೆ ಕೈಜೋಡಿಸಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಲಿದೆ’ ಎಂದು ಮಲರ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಮತದಾನ ಪ್ರಕ್ರಿಯೆ ನಡೆಯುವಾಗ ಮತಕೇಂದ್ರದ ನೂರು ಮೀಟರ್‌ನಲ್ಲಿ ಪ್ರತಿಭಟನೆ ಮಾಡುವುದಾಗಲಿ, ಗುಂಪು ಸೇರುವುದಾಗಲಿ ಮಾಡುವಂತಿಲ್ಲ. ಹೀಗಾಗಿ, ಮತಕೇಂದ್ರಗಳಿಂದ ತುಸು ದೂರದಲ್ಲೇ ಗುಂಪು ಸೇರಿ ಸಾಂಕೇತಿಕವಾಗಿ ಪ್ರತಿರೋಧವನ್ನು ದಾಖಲಿಸುವುದರ ಜೊತೆಗೆ ನೋಟಾ ಚಲಾಯಿಸಲು ಮುಂದಾಗಿದ್ದಾರೆ.

ನೋಟಾ ಜೊತೆಗೆ ಮತ್ತೇನು?
ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಮಿತಿಯ ಸದಸ್ಯರು ನೋಟಾ ಚಲಾಯಿಸುವುದರೊಂದಿಗೆ ವೋಟು ಕೇಳಲು ಬಂದ ಅಭ್ಯರ್ಥಿಗಳ ಮುಂದೆ ಸಂಪೂರ್ಣ ಮದ್ಯ ನಿಷೇಧದ ವಿಷಯವನ್ನು ಪ್ರಸ್ತಾಪ ಮಾಡಲಿದ್ದಾರೆ.

Advertisement

ಸಂಪೂರ್ಣ ಮದ್ಯ ನಿಷೇಧಿಸುವಂತೆ ಎಲ್ಲ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರಿಗೆ ಪತ್ರಗಳನ್ನು ಬರೆಯುವ ಮೂಲಕ ಪತ್ರ ಚಳವಳಿ.

– ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next