Advertisement

ಚುನಾವಣೆಯಲ್ಲಿ 4ನೇ ಸ್ಥಾನ ಪಡೆದ ನೋಟಾ

12:03 PM May 18, 2018 | |

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರದಲ್ಲಿ ಸ್ಥಾನ ಪಡೆದುಕೊಂಡ “ನೋಟಾ’ (ಮೇಲಿನವರಲ್ಲಿ ಯಾರೂ ಇಲ್ಲ)ಗೆ ನಗರದ ಮಟ್ಟಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಒಟ್ಟಾರೆ 26 ಕ್ಷೇತ್ರಗಳ ಪೈಕಿ 24 ಕಡೆ ನಾಲ್ಕನೇ ಸ್ಥಾನ ಗಳಿಸಿದೆ.

Advertisement

ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ನ ನಂತರ ಮತದಾರರ ಆದ್ಯತೆ “ನೋಟಾ’ ಆಗಿದೆ. ಅಂದರೆ, ನಗರದ ಎಲ್ಲ 26 ಕ್ಷೇತ್ರಗಳಲ್ಲಿ ಕನಿಷ್ಠ 12ರಿಂದ ಗರಿಷ್ಠ 28 ಅಭ್ಯರ್ಥಿಗಳು ವಿವಿಧ ಪಕ್ಷಗಳು ಮತ್ತು ಸ್ವತಂತ್ರವಾಗಿ ಕಣಕ್ಕಿಳಿದಿದ್ದರು. ಆದರೆ ಆ ಕ್ಷೇತ್ರಗಳಲ್ಲಿ ಮೊದಲ ಮೂರು ಸ್ಥಾನಗಳು ಪ್ರಮುಖ ರಾಜಕೀಯ ಪಕ್ಷಗಳು ಪಾಲಾಗಿದ್ದರೆ, ನಾಲ್ಕನೇ ಸ್ಥಾನ ನೋಟಾ ಪಡೆದುಕೊಂಡಿದೆ.

ಆಮ್‌ ಆದ್ಮಿ ಪಕ್ಷ, ಜೆಡಿಯು, ರಿಪಬ್ಲಿಕ್‌ ಪಾರ್ಟಿ ಆಫ್ ಇಂಡಿಯಾ, ಎಐಎಂಇಪಿ (ಅಖೀಲ ಭಾರತ ಮಹಿಳಾ ಎಂಪವರ್‌ವೆುಂಟ್‌ ಪಾರ್ಟಿ) ಸೇರಿದಂತೆ ಹಲವು ಪಕ್ಷಗಳ ಅಭ್ಯರ್ಥಿಗಳಿಗಿಂತ ಮತದಾರರ ನೆಚ್ಚಿನ ಆಯ್ಕೆ “ನೋಟಾ’ ಆಗಿರುವುದು ಗಮನಾರ್ಹ ಸಂಗತಿ.

ಇನ್ನು ರಾಜ್ಯದಲ್ಲಿ ಚಲಾವಣೆಯಾದ ಒಟ್ಟಾರೆ 3.22 ಲಕ್ಷ ನೋಟಾ ಮತಗಳ ಪೈಕಿ ಕೇವಲ ಬೆಂಗಳೂರು ನಗರ ಜಿಲ್ಲೆಯಲ್ಲೇ ಶೇ. 20.09 ಅಂದರೆ 64,709 ಮತಗಳು ಬಿದ್ದಿವೆ. ಇದರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿ ಹೆಚ್ಚು 15,829 ಮತದಾರರ ಆಯ್ಕೆ “ನೋಟಾ’ ಆಗಿದೆ. ಇನ್ನು 26 ವಿಧಾನಸಭಾ ಕ್ಷೇತ್ರಗಳ ಪೈಕಿ 25ರಲ್ಲಿ ನಾಲ್ಕಂಕಿ ದಾಟಿದ್ದು, 14 ಕ್ಷೇತ್ರಗಳಲ್ಲಿ ನೋಟಾ ಮತಗಳ ಸಂಖ್ಯೆ 2 ಸಾವಿರಕ್ಕೂ ಅಧಿಕವಾಗಿದೆ. 

ಮತದಾರರ ಮನಃಸ್ಥಿತಿಯ ಮುನ್ಸೂಚನೆ?: ಇದು ರಾಜಕೀಯ ನಾಯಕರು ಮತ್ತು ಅವರ ಪರಸ್ಪರ ಕೆಸರೆರಚಾಟ, ಹಣಬಲ, ತೋಳ್ಬಲ, ಹುಸಿ ಭರವಸೆಗಳಿಂದ ಬೇಸತ್ತ ಮತದಾರರ ಒಲವು ಯಾವ ಕಡೆಗೆ ಸಾಗುತ್ತಿದೆ ಎನ್ನುವುದರ ಸೂಚನೆಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೋಟಾ ಇದ್ದರೂ, ಮತ ಯಂತ್ರದಲ್ಲಿ ಸ್ಥಾನ ಪಡೆದುಕೊಂಡಿರಲಿಲ್ಲ.

Advertisement

ಬ್ಯಾಲೆಟ್‌ನಲ್ಲಿ ಹಾಕಲು ಅವಕಾಶ ಇತ್ತು. ಹಾಗಾಗಿ, ಜನರಲ್ಲಿ ಈ ಬಗ್ಗೆ ಅಷ್ಟಾಗಿ ಜಾಗೃತಿ ಇರಲಿಲ್ಲ. ಆದರೆ, ಈ ಸಲ ಇವಿಎಂ (ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌)ನ ಕೊನೆಯಲ್ಲಿ ಆಯ್ಕೆ ಇತ್ತು. ಮತದಾರರು ಹುಡುಕಿ ನೋಟಾ ಗುಂಡಿ ಒತ್ತಿದ್ದಾರೆ ಎಂದು ಚುನಾವಣಾ ಪ್ರಕ್ರಿಯೆಗಳ ವಿಶ್ಲೇಷಕ ಟಿ.ಜಿ. ಭಟ್‌ ವಿಶ್ಲೇಷಿಸುತ್ತಾರೆ.

ಇನ್ನು ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿದ್ದ ಬಾದಾಮಿ ಸೇರಿದಂತೆ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳು “ನೋಟಾ’ಗೆ ಬಂದಿವೆ. ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಕೃಷ್ಣಪ್ಪ ಅವರ ಗೆಲುವಿನ ಅಂತರ 30,417 ಆಗಿದ್ದು, ಇದರರ್ಧದಷ್ಟು ಜನ “ಮೇಲಿನವರು ಯಾರೂ ಇಲ್ಲ’ ಎಂದು ಹೇಳಿದ್ದಾರೆ. ಇದೇ ಟ್ರೆಂಡ್‌ ಮುಂದುವರಿದರೆ, ನೋಟಾ ಪರಿಣಾಮಕಾರಿ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. 

ಫ‌ಲಿತಾಂಶ ಏರುಪೇರು ಸಾಧ್ಯತೆ: ಅದೇ ರೀತಿ ಈ ಬಾರಿಯ ಮತದಾನ ಪ್ರಮಾಣದಲ್ಲಿ ಕೇವಲ ಶೇ. 1ರಿಂದ 2ರಷ್ಟು ಏರಿಕೆ ಕಂಡುಬಂದಿದ್ದರೆ, ಮೂರ್‍ನಾಲ್ಕು ಕ್ಷೇತ್ರಗಳಲ್ಲಿ ಫ‌ಲಿತಾಂಶದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆಯೂ ಇತ್ತು. ನಗರದಲ್ಲಿ ಈ ಸಲ ವಿಜಯನಗರದಲ್ಲಿ ಗೆಲುವಿನ ಅಂತರ ಅತಿ ಕಡಿಮೆ ಇದೆ. ಅಲ್ಲಿ ಕಾಂಗ್ರೆಸ್‌ನ ಎಂ. ಕೃಷ್ಣಪ್ಪ ಪ್ರತಿಸ್ಪರ್ಧಿ ಬಿಜೆಪಿಯ ಎಚ್‌. ರವೀಂದ್ರ ಅವರಿಂದ ಕೇವಲ 2,775 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ (ನೋಟಾ ಮತಗಳು 1,957).

ಆ ಕ್ಷೇತ್ರದ ಒಟ್ಟಾರೆ ಮತಗಳು 3.12 ಲಕ್ಷ ಇದ್ದು, 1.50 ಲಕ್ಷ ಮತಗಳು ಚಲಾವಣೆಗೊಂಡಿವೆ. ಕೇವಲ ಶೇ. 1ರಷ್ಟು ಹೆಚ್ಚು ಮತದಾನ ಆಗಿದ್ದರೂ ಫ‌ಲಿತಾಂಶದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇತ್ತು. ಇದಲ್ಲದೆ, ಬ್ಯಾಟರಾಯನಪುರದಲ್ಲಿ 5,671 ಮತಗಳ ಅಂತರದಲ್ಲಿ ಮಾಜಿ ಸಚಿವ ಕೃಷ್ಣ ಭೈರೇಗೌಡ, ಚಿಕ್ಕಪೇಟೆಯಲ್ಲಿ ಸುಮಾರು ಏಳು ಸಾವಿರ ಮತಗಳ ಅಂತರದಲ್ಲಿ ಬಿಜೆಪಿಯ ಗುರುಚಾರ್‌ ಗೆಲುವು ಸಾಧಿಸಿದ್ದಾರೆ. ಇಲ್ಲಿ ಶೇ. 1ರಿಂದ 1.5ರಷ್ಟು ಮತದಾನ ಪ್ರಮಾಣ ಹೆಚ್ಚಿದ್ದರೆ, ಚಿತ್ರಣ ಬದಲಾಗುತ್ತಿತ್ತು. 

2 ಸಾವಿರಕ್ಕಿಂತ ಹೆಚ್ಚು “ನೋಟಾ’ ಮತಗಳು ಬಿದ್ದ ಕ್ಷೇತ್ರಗಳು
ಕ್ಷೇತ್ರ    ನೋಟಾ  

-ಬೆಂಗಳೂರು ದಕ್ಷಿಣ    15,829
-ಮಹದೇವಪುರ    3,482
-ಬೊಮ್ಮನಹಳ್ಳಿ    2,491
-ಕೆ.ಆರ್‌. ಪುರ    2,464
-ಸರ್ವಜ್ಞನಗರ    2,405
-ಪದ್ಮನಾಭನಗರ    2,400
-ಬಿಟಿಎಂ ಲೇಔಟ್‌        2,365
-ಸಿ.ವಿ. ರಾಮನ್‌ ನಗರ    2,259
-ಮಲ್ಲೇಶ್ವರ    2,157
-ಬ್ಯಾಟರಾಯನಪುರ    2,154
-ಆನೇಕಲ್‌    2,115
-ದಾಸರಹಳ್ಳಿ    2,011
-ಗಾಂಧಿನಗರ    2,074
-ಯಲಹಂಕ    2,057

* 3.22 ಲಕ್ಷ ರಾಜ್ಯದಲ್ಲಿ ಚಲಾವಣೆಗೊಂಡ “ನೋಟಾ’ ಸಂಖ್ಯೆ
* 64,709 ನಗರ ಜಿಲ್ಲೆಯಲ್ಲಿ ಚಲಾವಣೆಗೊಂಡ “ನೋಟಾ’ 
* 15,829 ಬೆಂಗಳೂರು ದಕ್ಷಿಣವೊಂದರಲ್ಲೇ “ನೋಟಾ’
* 14 ಕ್ಷೇತ್ರಗಳಲ್ಲಿ 2ಸಾವಿರಕ್ಕಿಂತ ಹೆಚ್ಚು ನೋಟಾ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next