Advertisement

ಇನ್ನೂ ಭರ್ತಿಯಾಗಲಿಲ್ಲ ಕಾರಂಜಾ ಜಲಾಶಯ

12:56 PM Aug 21, 2018 | |

ಬೀದರ: ಅರ್ಧ ಮಳೆಗಾಲ ಮುಗಿದರೂ ಕೂಡ ಇಂದಿಗೂ ಕಾರಂಜಾ ಜಲಾಶಯಕ್ಕೆ ಒಳ ಹರಿವು ಬಂದಿಲ್ಲ. ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣಗೊಳ್ಳುವ ಸಾಧ್ಯತೆ ಇದೆ. ಮುನಿದ ಮುಂಗಾರಿಗೆ ಜಿಲ್ಲೆಯ ರೈತ ಮಾತ್ರ ಹೈರಾಣಾಗಿಲ್ಲ. ತುಂತುರು ಮಳೆ ಹೀಗೇ ಮುಂದುವರಿದರೆ ಬೀದರ್‌ ನಗರ, ಹುಮನಾಬಾದ, ಭಾಲ್ಕಿ, ಚಿಟಗುಪ್ಪ ಪಟ್ಟಣಗಳು ಸೇರಿದಂತೆ ಸುತ್ತಲಿನ ಹಲವು ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಕಾರಂಜಾ ಜಲಾಶಯದ ನೀರಿನ ಪ್ರಮಾಣದಲ್ಲಿ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಈ ವರ್ಷ ಕಾರಂಜಾಕ್ಕೆ ಒಳಹರಿವು ಬಂದಿಲ್ಲ. 2016ರಲ್ಲಿ ಸುರಿದ ಉತ್ತಮ ಮಳೆಯಿಂದ ಜಲಾಶಯ ತುಂಬಿ ಹರಿದಿತ್ತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಈಶ್ವರ ಖಂಡ್ರೆ ಅವರು ಜಲಾಶಯಕ್ಕೆ ಬಾಗಿನ ಸಲ್ಲಿಸಿದ್ದರು. ಕಳೆದ ವರ್ಷ 2017ರಲ್ಲಿ ಕೂಡ ಸರಾಸರಿ ಮಳೆ ಸುರಿದಿತ್ತು. ಆದರೆ, ಈ ವರ್ಷ ಮಳೆ ಕೊರತೆ ಎದುರಾಗಿದ್ದು, ಕುಡಿಯುವ ನೀರಿಗೂ ಸಮಸ್ಯೆ ಉಲ್ಬಣಗೊಳ್ಳಬಹುದೇ ಎಂಬ ಚರ್ಚೆಗಳು ನಡೆಯುತ್ತಿವೆ.

Advertisement

ಸದ್ಯ ಕಾರಂಜಾ ಜಲಾಶಯಕ್ಕೆ ಈ ಬಾರಿ ಒಳಹರಿವು ಇಲ್ಲ ಮತ್ತು ಹೊರ ಹರಿವೂ ಇಲ್ಲ. ಅರ್ಧ ಭಾಗ ಮಾತ್ರ ನೀರು ಸಂಗ್ರಹವಿದೆ. ಉತ್ತಮ ಮಳೆ ಬಿದ್ದರೆ ಮಾತ್ರ ಜಲಾಶಯ ಭರ್ತಿಯಾಗುವ ನಿರೀಕ್ಷೆ ಇದೆ. ಜಿಲ್ಲೆಯ ಏಕಮಾತ್ರ ನೀರಾವರಿ ಯೋಜನೆಯಾದ ಕಾರಂಜಾ ಜಲಾಶಯ ರೈತರ ಹೊಲಗಳಿಗೆ ನೀರು ಉಣಿಸುವ ಬದಲು ಸದ್ಯ ಕುಡಿಯುವ ನೀರು ಮಾತ್ರ ಪೂರೈಸುವ ಕಾರ್ಯ ನಿರ್ವಹಿಸುತ್ತಿದೆ. 

ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 7.691 ಟಿಎಂಸಿ ಇದ್ದು, 7.316 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಇದೆ. ಆಗಸ್ಟ್‌ 20ರ ವರಗೆ ಜಲಾಶಯದಲ್ಲಿ ಒಟ್ಟು 3.795 ಟಿಎಂಸಿ ನೀರು ಸಂಗ್ರಹವಿದ್ದು, ಈ ಪೈಕಿ 0.374 ಟಿಎಂಸಿ ಡೆಡ್‌ ಸ್ಟೋರೇಜ್‌ ಇದೆ. ಕಳೆದ ವರ್ಷದ ಆಗಸ್ಟ್‌ ಹೋಲಿಸಿದರೆ ಜಲಾಶಯದಲ್ಲಿ 4.587 ನೀರಿನ ಸಂಗ್ರಹವಿತ್ತು. ಅಂದರೆ, 0.792 ಟಿಎಂಸಿ ನೀರಿನ ಸಂಗ್ರಹ ಕೊರತೆ ಇದೆ ಎಂದು ಕಾರಂಜಾ ಜಲಾಶಯದ ಅಧಿಕಾರಿ ಆನಂದಕುಮಾರ ಮಾಹಿತಿ ನೀಡಿದ್ದಾರೆ.

ಈಗಾಗಲೇ ಅರ್ಧಕ್ಕಿಂತ ಹೆಚ್ಚು ಮಳೆಗಾಲ ಮುಗಿದಿದ್ದು, ಇನ್ನೇನಿದ್ದರೂ ಆಗಸ್ಟ್‌ ಕಡೇ ವಾರ ಹಾಗೂ ಸೆಪ್ಟೆಂಬರ್‌ ತಿಂಗಳು ಮಾತ್ರ ಬಾಕಿ ಇದೆ. ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಹಿನ್ನೆಲೆಯಲ್ಲಿ ಜಿಲ್ಲೆಯ ಬೆಳೆಗಳಿಗೂ ಸಾಕಷ್ಟು ಹಿನ್ನಡೆ ಉಂಟಾಗಿದೆ. ಹಾಗೆ, ಕಾರಂಜಾ ಜಲಾಶಯ ಕೂಡ ಭರ್ತಿಯಾಗದಿರುವುದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯ ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಸದ್ಯ ಹುಮನಾಬಾದ, ಚಿಟಗುಪ್ಪ ಸೇರಿದಂತೆ ಕೆಲವು ಕಡೆಗಳಲ್ಲಿ ಮೂರು ದಿನಕ್ಕೆ ಒಂದು ಬಾರಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಹಾಗೆ ನೋಡಿದರೆ ಜಿಲ್ಲೆಯಲ್ಲಿ ಮುಂಗಾರು ಅಬ್ಬರಕ್ಕಿಂತ ಕಡೆ ತಿಂಗಳುಗಳಾದ ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ತಿಂಗಳಲ್ಲೇ ಹೆಚ್ಚು ಪ್ರಮಾಣದಲ್ಲಿ ಮಳೆ ಸುರಿಯುವುದು ವಾಡಿಕೆ. ಹಾಗಾಗಿ, ಇನ್ನೂ ಸೆಪ್ಟೆಂಬರ್‌ ತಿಂಗಳು ಬಾಕಿ ಇದ್ದು, ಹೆಚ್ಚು ಪ್ರಮಾಣದಲ್ಲಿ ಮಳೆ ಸುರಿಯಬಹುದೆಂಬ ನಿರೀಕ್ಷೆ ಇದೆ.

„ದುರ್ಯೋಧನ ಹೂಗಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next