Advertisement

ನೋಟು ಅಪಮೌಲ್ಯ: ಪುತ್ತೂರು ಕಾಂಗ್ರೆಸ್‌ನಿಂದ ಕರಾಳ ದಿನಾಚರಣೆ

11:20 AM Nov 09, 2017 | Team Udayavani |

ಪುತ್ತೂರು: ಕೇಂದ್ರ ಸರಕಾರದ ನೋಟು ಅಪಮೌಲ್ಯದ ವಿರುದ್ಧ ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಹಾಗೂ ನಗರ ಕಾಂಗ್ರೆಸ್‌ ಆಶ್ರಯದಲ್ಲಿ ಬುಧವಾರ ಪುತ್ತೂರಿನಲ್ಲಿ ಕರಾಳ ದಿನ ಆಚರಿಸಲಾಯಿತು.

Advertisement

ಎಪಿಎಂಸಿ ರಸ್ತೆಯಲ್ಲಿನ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಿಂದ ಮೆರವಣಿಗೆಯಲ್ಲಿ ಆಗಮಿಸಿದ ಪಕ್ಷದ ಮುಖಂಡರು ಹಾಗೂ
ಕಾರ್ಯಕರ್ತರು ಗಾಂಧಿ ಕಟ್ಟೆಯ ಬಳಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶಾಸಕಿ ಶಕುಂತಳಾ ಟಿ. ಶೆಟ್ಟಿ ಪ್ರತಿಭಟನೆ ಉದ್ಘಾಟಿಸಿದರು. ಆರಂಭದಲ್ಲಿ ರಸ್ತೆಯಲ್ಲಿ ಕ್ಯಾಂಡಲ್‌ ಬೆಳಗಿಸಿ 2 ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರತಿಭಟನೆಯನ್ನು ಪಾಲ್ಗೊಂಡವರು ಕಪ್ಪುಪಟ್ಟಿ ಧರಿಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ನಮಗೆ ಗೌರವವಿದೆ. ಆದರೆ ಜತೆಗಿದ್ದವರು ಸುಳ್ಳುಗಳ ಕಥೆ ಪೋಣಿಸಿ ಮೋದಿಯವರನ್ನೂ ಸುಳ್ಳುಗಾರರನ್ನಾಗಿ ಪರಿವರ್ತಿಸಿದ್ದಾರೆ. ಅಚ್ಛೇ ದಿನ್‌ ಸ್ವಾಗತ ಮಾಡುವವರು ನೋಟು ಅಪಮೌಲ್ಯದ ಕಷ್ಟವನ್ನೇ ಅನುಭವಿಸಿಲ್ಲ ಎಂದು ಆರೋಪಿ ಸಿದರು. ಬಿಜೆಪಿ ಮುಖಂಡರ ಮೇಲೆ ಯಾಕೆ ಯಾವುದೇ ವಿಚಾರದಲ್ಲಿ ರೈಡ್‌ ಆಗುತ್ತಿಲ್ಲ? ರಾಜ್ಯದ ಕಾಂಗ್ರೆಸ್‌ ಸರಕಾರಕ್ಕೆ ಬುದ್ಧಿ ಹೇಳುವ ಯೋಗ್ಯತೆಯೂ ಅವರಿಗಿಲ್ಲ ಎಂದು ವ್ಯಂಗ್ಯವಾಡಿದರು.

ಇಲಿ ಹಿಡಿಯಲೂ ಸಾಧ್ಯವಾಗಿಲ್ಲ !
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು ಮಾತನಾಡಿ, ಅಧಿಕಾರಕ್ಕೆ ಬರುವ ಎರಡು ದಿನಕ್ಕೆ ಮೊದಲು ನೋಟ್‌ ಬ್ಯಾನ್‌ ವಿರೋಧಿಸಿದ್ದ ನರೇಂದ್ರ ಮೋದಿಯವರು ಬಳಿಕ ವ್ಯತಿರಿಕ್ತವಾಗಿ ವರ್ತಿಸಿ ನೂರಾರು ಮಂದಿಯ ಸಾವಿಗೆ ಕಾರಣಕರ್ತರಾಗಿದ್ದಾರೆ. ನಿಜಕ್ಕೂ ಗೋವು ರಕ್ಷಣೆಯ ಕಾಳಜಿ ಇವರಲ್ಲಿದ್ದರೆ ಗೋ ಮಾಂಸ ರಪ್ತಿನಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ಪ್ರಥಮ ಸ್ಥಾನಕ್ಕೆ ಬರುತ್ತಿರಲಿಲ್ಲ. ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ವಿಚಾರದಲ್ಲಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಕೇಂದ್ರ ಸರಕಾರ ಮಾಡಿದೆ. ನೋಟ್‌ ಬ್ಯಾನ್‌ ಮೂಲಕ ಗುಡ್ಡವನ್ನು ಅಗೆದು ಇಲಿ ಹಿಡಿಯಲೂ ಇವರಿಗೆ ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದರು.

ಮನಸ್ಸು ಪರಿವರ್ತನೆಯಾಗಲಿ
ಮುಖಂಡ ಕುಂಬ್ರ ದುರ್ಗಾಪ್ರಸಾದ್‌ ರೈ ಮಾತನಾಡಿ, ಹಿಟ್ಲರ್‌ನಂತೆ ವರ್ತಿಸುವ ಪ್ರತಿನಿಧಿಗಳ ಕೆಳಗೆ ಜೀವನ ನಡೆಸಲೂ ಕಷ್ಟಕರ ದಿನಗಳು ಬರಬಹುದು. ಅವ್ಯವಸ್ಥೆಯ ವಿರುದ್ಧ ಚಕಾರ ಎತ್ತಿದವರಿಗೆ ಐ.ಟಿ. ದಾಳಿಯ ಅಸ್ತ್ರ ಪ್ರಯೋಗಿಸಲಾಗುತ್ತಿದೆ ಎಂದರು. 

Advertisement

ಮುಖಂಡರಾದ ಇಸಾಕ್‌ ಸಾಲ್ಮರ, ಜೋಕಿಂ ಡಿ’ಸೋಜಾ, ಅಮಳ ರಾಮಚಂದ್ರ ಮಾತನಾಡಿದರು. ಪಕ್ಷದ ಪ್ರಮುಖರಾದ ಯು.ಟಿ. ತೌಸಿಫ್‌, ವಿಶಾಲಾಕ್ಷ್ಮಿ ಬನ್ನೂರು, ನೂರುದ್ದೀನ್‌ ಸಾಲ್ಮರ, ವಾಣಿ ಶ್ರೀಧರ್‌, ರೋಶನ್‌ ರೈ, ವಿಲ್ಮಾ, ಸಾಯಿರಾ ಜುಬೇರ್‌, ಮಹೇಶ್‌ ರೈ ಅಂಕೋತ್ತಿಮಾರ್‌, ಶ್ರೀರಾಮ ಪಕ್ಕಳ, ಪ್ರಸಾದ್‌ ಕೌಶಲ್‌ ಶೆಟ್ಟಿ, ವೇದನಾಥ ಸುವರ್ಣ, ಮೊದೀನ್‌ ಅರ್ಷದ್‌ ದರ್ಬೆ ಮೊದಲಾದವರು ಉಪಸ್ಥಿತರಿದ್ದರು. ನಗರ ಕಾಂಗ್ರೆಸ್‌ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಸ್ವಾಗತಿಸಿ, ಕೃಷ್ಣಪ್ರಸಾದ್‌ ಆಳ್ವ ಕಾರ್ಯಕ್ರಮ ನಿರ್ವಹಿಸಿದರು.

ಮನುಷ್ಯತ್ವ ಇಲ್ಲದೆ ಧರ್ಮದ ಪ್ರೀತಿ
ಗೋವುಗಳನ್ನು ಮಾರಾಟ ಮಾಡಿ ರಕ್ಷಕರ ಸೋಗು ಹಾಕುವ ಸಂಘಟನೆಯವರು ಗಂಡು ಕರುಗಳಿಗೆ, ಗೊಡ್ಡು ದನಗಳಿಗೆ
ಮೊದಲು ವ್ಯವಸ್ಥೆ ಮಾಡಲಿ. ತಿನ್ನುವ ಅನ್ನಕ್ಕೆ ಜಿಎಸ್‌ಟಿ ಹಾಕುವವರು ರಾಜ್ಯದಲ್ಲಿ ತಾವೇ ಅನ್ನಭಾಗ್ಯ ನೀಡುತ್ತಿದ್ದೇವೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಮನುಷ್ಯತ್ವ ಇಲ್ಲದ ಬಿಜೆಪಿಯವರ ಧರ್ಮದ ಪ್ರೀತಿ ಯಾರಿಗೆ ಬೇಕು ? ಕಾಂಗ್ರೆಸ್‌ ಸರಕಾರ ನೀಡಿದ ಸಾಲಮನ್ನಾವನ್ನು ಗುಟ್ಟಾಗಿ ಹಲವು ಮಂದಿ ಪಡೆದುಕೊಂಡಿದ್ದಾರೆ. ಕೇಂದ್ರ ಸರಕಾರಕ್ಕೆ ನಿಜವಾಗಿಯೂ ರೈತರ ಮೇಲೆ ಕಾಳಜಿ ಇದ್ದರೆ ರೈತರ ಸಾಲ ಮನ್ನಾ ಮಾಡಲಿ ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next