ಬೆಂಗಳೂರು: ನಗರದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಂಗಡಿ- ಮುಂಗಟ್ಟುಗಳು, ಬ್ಯಾಂಕ್‌ಗಳು, ಕಚೇರಿಗಳು, ಮಾಲ್‌ಗಳು ಹಾಗೂ ಇತರೆ ವಾಣಿಜ್ಯ ಮಳಿಗೆ ಗಳಲ್ಲಿ ಕಡ್ಡಾಯವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಟ್ವಿಟರ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಅಂಗಡಿ, ಮಾಲ್, ಬ್ಯಾಂಕ್, ಹೋಟೆಲ್, ಕಚೇರಿ, ಸಂಸ್ಥೆಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಈಗಾಗಲೇ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ತಿಳಿಸಿದೆ.
ವಾಣಿಜ್ಯ ಮಳಿಗೆಗಳು ಹಾಗೂ ಇನ್ನಿತರೆಡೆ ಸಿಬ್ಬಂದಿ ಹಾಗೂ ಗ್ರಾಹಕರು ಮಾಸ್ಕ್ ಧರಿಸುತ್ತಿಲ್ಲ. ಅಲ್ಲದೆ, ಗ್ರಾಹಕರಿಗೆ ಸ್ಯಾನಿ ಟೈಜರ್ ವ್ಯವಸ್ಥೆ ಕಲ್ಪಿಸಿಲ್ಲ. ಶುಚಿತ್ವಕ್ಕೆ ಒತ್ತು ನೀಡದಿರುವುದು ಸೇರಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದು ಗಮನಕ್ಕೆ ಬಂದಿದೆ. ಅದನ್ನು ಸರಿಪಡಿಸಿಕೊಳ್ಳದಿದ್ದರೆ.ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭಾಸ್ಕರ್ ರಾವ್ ಎಚ್ಚರಿಸಿದ್ದಾರೆ.
ಪೊಲೀಸರಿಂದ ದಾಳಿ: ಉತ್ತರ ಮತ್ತು ದಕ್ಷಿಣ ವಿಭಾಗ ಪೊಲೀಸರಿಂದ ನಿಯಮ ಪಾಲಿಸದ ವಾಣಿಜ್ಯ ಮಳಿಗೆಗಳ ಮೇಲೆ ಖುದ್ದು ಡಿಸಿಪಿಗಳ ನೇತೃತ್ವದಲ್ಲಿ ಬಿಬಿಎಂಪಿ ಮಾರ್ಷಲ್‌ಗಳು ಜಂಟಿ ಕಾರ್ಯಾಚರಣೆ ನಡೆಸಿದರು. ಡಿಸಿಪಿ ಶಶಿಕುಮಾರ್ ಉತ್ತರ ವಿಭಾಗದ ಆರ್.ಟಿ.ನಗರ, ಸಂಜಯ್ ನಗರದ ಹತ್ತಾರು ಮಳಿಗೆಗಳ ಮೇಲೆ ದಾಳಿ ನಡೆಸಿದರು. ಈ ವೇಳೆ ನಿಯಮ ಪಾಲಿಸದ ನಾಲ್ಕೈದು ಅಂಗಡಿಗಳನ್ನು ಮುಚ್ಚಿಸಲಾಯಿತು. ಇನ್ನು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೆಪಟ್, ಹನುಮಂತನಗರ, ಕುಮಾರಸ್ವಾಮಿ ಲೇಔಟ್, ಸುಬ್ರಹ್ಮಣ್ಯನಗರ ವಿವಿಧೆಡೆ ಕಾರ್ಯಾಚರಣೆ ನಡೆಸಿ, 730 ಪ್ರಕರಣ ದಾಖಲಿಸಿ ದ್ದು, 1.50 ಲಕ್ಷ ರೂ.ಗಳನ್ನು ಸಂಗ್ರಹಿಸಿದ್ದಾರೆ. ಕೆಲ ಅಂಗಡಿಗಳನ್ನು ಮುಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
30 ದಿನ ನೀಷೆಧಾಜ್ಞೆ: ನಗರದಲ್ಲಿ ಕೋವಿಡ್ 19 ಅಧಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮೂವತ್ತು ದಿನಗಳ ಕಾಲ ನಗರಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶಿಸಿದ್ದಾರೆ. ಜೂನ್ 26ರಂದು ಮಧ್ಯರಾತ್ರಿ 12 ಗಂಟೆ ಯಿಂದ ಜುಲೈ 27 ಮಧ್ಯರಾತ್ರಿ 12 ಗಂಟೆವರೆಗೆ (ಮೂವತ್ತು ದಿನಗಳು) ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸ ಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ವ್ಯಕ್ತಿಯು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರತಿಯೊಬ್ಬರು ಒಂದು ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಒಳಾಂಗಣ ಕಾರ್ಯಕ್ರಮದಲ್ಲಿ 20ಕ್ಕೂ ಅಧಿಕ ಮಂದಿ ಪಾಲ್ಗೊಳ್ಳ ಬಾರದು. ಒಂದು ವೇಳೆ ನಿಯಮ ಮೀರಿದರೆ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಆಯುಕ್ತರು ಆದೇಶದಲ್ಲಿ ಎಚ್ಚರಿಸಿದ್ದಾರೆ.
ಸೋಂಕು ಹೆಚ್ಚಳ ಆತಂಕ: ಪೊಲೀಸರಿಗೆ ಸೋಂಕು ಹಬ್ಬುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು, ಸಂಚಾರ ನಿರ್ವಹಣಾ ಕೇಂದ್ರದ ಸಿಬ್ಬಂದಿಯೊಬ್ಬರಿಗೆ ಸೋಂಕು ಧೃಡಪಟ್ಟಿದೆ.ಅಷ್ಟೇ ಅಲ್ಲದೆ ಮಡಿವಾಳ ಠಾಣೆಯ ಸಿಬ್ಬಂದಿಯೊಬ್ಬರಿಗೂ ಸೋಂಕು ಪತ್ತೆಯಾಗಿದೆ. ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಸಿಬ್ಬಂದಿಗೆ ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಜೂ. 30 ರವರೆಗೆ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಈ ಅವಧಿಯಲ್ಲಿ ಕೇಂದ್ರದ ಕಟ್ಟಡದಲ್ಲಿರುವ ಕಂಟ್ರೋಲ್ ರೂಂನಲ್ಲಿ ಸೀಮಿತ ಸಿಬ್ಬಂದಿ ಮುಂಜಾಗ್ರತಾ ಕ್ರಮಗಳೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ.
ಉಳಿದಂತೆ ಬೇರೆ ಯಾವುದೇ ಕಾರ್ಯನಿರ್ವಹಣೆ ಇರುವುದಿಲ್ಲ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್ ರವಿಕಾಂತೇಗೌಡ ತಿಳಿಸಿದ್ದಾರೆ. ಮಡಿವಾಳ ಠಾಣೆಯ ಪೇದೆಯೊಬ್ಬರಿಗೆ ಸೋಂಕು ಧೃಡಪಟ್ಟಿದ್ದು ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಅವರ ಸಂಪರ್ಕದಲ್ಲಿದ್ದ ಸಿಬ್ಬಂದಿಗೂ ಕ್ವಾರಂಟೈನ್ ಒಳಪಡಿಸಲಾಗಿದೆ. ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.