ಹಾಗಂತ ಚಿತ್ರದ ಸಂಪೂರ್ಣ ಕ್ರೆಡಿಟ್‌ನ್ನು ಚಿತ್ರತಂಡದವರಿಗೇ ನೀಡಿಬಿಟ್ಟರು ನಿರ್ಮಾಪಕ ಕುಮಾರ್. “ಮೂರ್ಕಲ್ ಎಸ್ಟೇಟ್’ ಎಂಬ ಚಿತ್ರ ಮಾಡಿದ್ದಾರೆ ಅವರು. ಚಿತ್ರದ ಕೆಲಸಗಳೆಲ್ಲಾ ಮುಗಿದಿದ್ದು, ಇತ್ತೀಚೆಗೆ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಹಿರಿಯ ನಟ ದೊಡ್ಡಣ್ಣ ಮತ್ತು “ಟಗರು’ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಬಂದಿದ್ದರು. ಜೊತೆಗೆ “ಮೆರವಣಿಗೆ’ ನಿರ್ಮಾಪಕ ಕಾಂತರಾಜ್ ಸೇರಿದಂತೆ ಇನ್ನಷ್ಟು ಜನ ವೇದಿಕೆಯ ಮೇಲಿದ್ದರು. ಅವರೆಲ್ಲರ ಸಮ್ಮುಖದಲ್ಲಿ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಗೊಂಡವು.
Advertisement
ದೊಡ್ಡಣ್ಣ ಅವರನ್ನು ಅಂದು ಸಮಾರಂಭಕ್ಕೆ ಬರುವಂತೆ ಮಾಡಿದ್ದು ಭದ್ರಾವತಿ ಎಂಬ ಊರು. ನಿರ್ಮಾಪಕರು ಅದೇ ಊರಿನವರು. ಇನ್ನು ದೊಡ್ಡಣ್ಣ ಸಹ ಅಲ್ಲೇ ಕೆಲಸ ಮಾಡಿದ್ದವರು. ಅದೇ ಪ್ರೀತಿಯಿಂದ ಬಂದಿದ್ದ ದೊಡ್ಡಣ್ಣ, “ಇವತ್ತು ಹೊಸ ಪೀಳಿಗೆ ಹೊಸ ಹೊಸ ಚಿತ್ರಗಳನ್ನು ಮಾಡುತ್ತಿದೆ. ಅನಕೃ ಅವರು ಹೇಳಿದಂತೆ, ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ, ಕೆಲವರನ್ನು ಮಾತ್ರ ಅಪ್ಪಿಕೊಳ್ಳುತ್ತದೆ. ಇವತ್ತು ಬಹಳಷ್ಟು ಹೊಸಬರು ಚಿತ್ರರಂಗದಲ್ಲಿ ಏನೋ ಸಾಧನೆ ಮಾಡಬೇಕು ಅಂತ ಆಕಾಂಕ್ಷೆ ಇಟ್ಟುಕೊಂಡು ಬರುತ್ತಾರೆ. ಬರೀ ಆಕಾಂಕ್ಷೆ ಇದ್ದರೆ ಗುರಿ ಮುಟ್ಟುವುದಕ್ಕೆ ಸಾಧ್ಯವಿಲ್ಲ. ಸಹನೆ ಮತ್ತು ಸಾಧನೆ ಇದ್ದರೆ ಮಾತ್ರ ಗುರಿ ಮುಟ್ಟೋಕೆ ಸಾಧ್ಯ. ಡಾ ರಾಜಕುಮಾರ್ ಅವರಿಂದ ಪ್ರತಿಯೊಬ್ಬರೂ ಸರಳತೆ ಮತ್ತು ವಿನಯವನ್ನು ಕಲಿಯಬೇಕು. ಹಣ ಮತ್ತು ಕೀರ್ತಿ ಬಂದಾಗ ಬೀಗಬೇಡಿ, ಬಗ್ಗಿ ನಡಿಯಿರಿ’ ಎಂದು ಹಿತವಚನ ನುಡಿದರು. ಮಾತು ಮುಗಿಸುವ ಮುನ್ನ, “ಚಿತ್ರ ಚೆನ್ನಾಗಿ ಓಡಿ, ಇದೇ ಕಲಾವಿದರ ಸಂಘದ ಸಭಾಂಗಣದಲ್ಲೇ ನೂರು ದಿನದ ಸಂಭ್ರಮವಾಚರಿಸಿ’ ಎಂದರು. ಕೆ.ಪಿ. ಶ್ರೀಕಾಂತ್ ಮತ್ತು ಕಾಂತರಾಜ್ ಸಹ ಚಿತ್ರತಂಡದವರಿಗೆ ಶುಭ ಕೋರಿದರು. ನಿರ್ದೇಶಕ ಪ್ರಮೋದ್ ಕುಮಾರ್‌ಗೆ ಇದು ಮೊದಲ ಚಿತ್ರ. ಇಡೀ ತಂಡದ ಸಹಕಾರದಿಂದ ಚಿತ್ರ ಮಾಡಿದ್ದೇವೆ. “ಇದೊಂದು ದೆವ್ವದ ಸಿನಿಮಾ ಅನ್ನೋಕ್ಕಿಂತ, ಎನರ್ಜಿ ಕುರಿತ ಸಿನಿಮಾ. ಕೆಟ್ಟ ಎನರ್ಜಿಯಿಂದ ಏನೆಲ್ಲಾ ಆಗುತ್ತದೆ ಎನ್ನುವ ಸಿನಿಮಾ. ನಿರ್ಮಾಪಕ ಕುಮಾರ್ ಅವರಿಗೆ ಕಥೆ ಹೇಳಿದೆ. ಅವರು ಇಷ್ಟಪಟ್ಟು ಚಿತ್ರ ಮಾಡೋದಕ್ಕೆ ಮುಂದೆ ಬಂದರು. ಚಿತ್ರದಲ್ಲಿ ನಾಲ್ಕು ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಿದ್ದೇನೆ. ಎರಡು ಗಂಟೆ ಅವಧಿಯ ಸಿನಿಮಾ ಇದು’ ಎಂದು ಚಿತ್ರದ ಬಗ್ಗೆ ಹೇಳಿದರು.