Advertisement

ಆರಂಭವಾಗಿಲ್ಲ ಅಂಗನವಾಡಿ

04:28 PM May 17, 2019 | Suhan S |

ಲಕ್ಷ್ಮೇಶ್ವರ: ಅಡರಕಟ್ಟಿ ಗ್ರಾಪಂ ವ್ಯಾಪ್ತಿಯ ಹರದಗಟ್ಟಿ ಗ್ರಾಮದಲ್ಲಿ 2 ವರ್ಷಗಳ ಹಿಂದೆಯೇ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಅಂಗನವಾಡಿ ಕಟ್ಟಡ ಇನ್ನೂ ಕಾರ್ಯಾರಂಭವಾಗಿಲ್ಲ.

Advertisement

ಸರ್ಕಾರ 0-3 ವಯೋಮಾನದ ಮಕ್ಕಳಿಗೆ ಅಕ್ಷರ ಜ್ಞಾನದ ಜತೆಗೆ ಪೌಷ್ಟಿಕ ಆಹಾರ ನೀಡಿ ಸದೃಢ ನಾಗರಿಕರನ್ನಾಗಿ ರೂಪಿಸುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗನವಾಡಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿವೆ. ಗ್ರಾಮದಲ್ಲಿನ ಅಂಗನವಾಡಿ ಕೇಂದ್ರ ಸಂಖ್ಯೆ 218ರಲ್ಲಿ 20ಕ್ಕೂ ಮಕ್ಕಳು ಓದುತ್ತಿದ್ದು, ಸ್ವಂತ ಅಂಗನವಾಡಿ ಕಟ್ಟಡವಿಲ್ಲದ್ದರಿಂದ ಗ್ರಾಮದ ಸೇವಾಲಾಲ ಸಮುದಾಯ ಭವನ ಕೊಠಡಿಯಲ್ಲಿ ಕಳೆದ 4 ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ. ಅತ್ಯಂತ ಚಿಕ್ಕದಾದ ಕೊಠಡಿಯಲ್ಲಿಯೇ ಸಿಲಿಂಡರ್‌ ಬಳಸಿ ಅಡುಗೆ ಸಿದ್ಧಪಡಿಸುವುದು, ಪಾಠ ಹೇಳುವುದು, ಪಡಿತರ ಸಂಗ್ರಹಿಸಲಾಗುತ್ತಿದೆ. ಈ ಕೊಠಡಿ ಪಕ್ಕ ಇರುವ ಇನ್ನೊಂದು ಕೊಠಡಿಯಲ್ಲಿ ಗ್ರಾಮದ ಜನರಿಗೆ ಪಡಿತರ ವಿತರಿಸುವುದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಇಷ್ಟಾದರೂ ಹೊಸ ಅಂಗನವಾಡಿ ಕಟ್ಟಡಕ್ಕೆ ಸ್ಥಳಾಂತರಗೊಳ್ಳದಿರುವುದು ಯಕ್ಷ ಪ್ರಶ್ನೆಯಾಗಿದೆ. ಹೊಸ ಅಂಗನವಾಡಿ ಸುತ್ತಲೂ ಗಿಡ-ಗಂಟಿಗಳು ಬೆಳೆದು ಕಟ್ಟಡ ದುರ್ಬಳಕೆಯಾಗುತ್ತಿದೆ. ಅಂಗನವಾಡಿ ಕೇಂದ್ರ ಗ್ರಾಪಂ ಅಧ್ಯಕ್ಷರ ಹಾಗೂ ತಾಪಂ ಅಧ್ಯಕ್ಷರ ಸ್ವಗ್ರಾಮದಲ್ಲಿಯೇ ಇದೆ. ಅಲ್ಲದೇ ಜಿಪಂ ಅಧ್ಯಕ್ಷರ ಕ್ಷೇತ್ರವ್ಯಾಪ್ತಿಯೂ ಇದೇ ಆಗಿದ್ದರೂ ಯಾರೊಬ್ಬರೂ ಇತ್ತ ಗಮನ ಹರಿಸದಿರುವುದು ದುರ್ದೈವ.ಹೊಸ ಅಂಗನವಾಡಿ ಕಟ್ಟಡ ನಿರ್ಮಾಣವಾಗಿದ್ದರೂ ಮಕ್ಕಳು ಮಾತ್ರ ಸಮುದಾಯ ಭವನದ ಚಿಕ್ಕ ಕೊಠಡಿಯಲ್ಲಿಯೇ ಪಾಠ ಕೇಳುವುದು ಯಾವ ನ್ಯಾಯ. ಲಕ್ಷಾಂತರ ರೂ ಖರ್ಚು ಮಾಡಿ ಯಾವ ಪುರುಷಾರ್ಥಕ್ಕೆ ಈ ಕಟ್ಟಡ ನಿರ್ಮಿಸಿದ್ದಾರೆ ಎಂಬುದನ್ನು ಅಧಿಕಾರಿಗಳು ಸಷ್ಟಪಡಿಸಬೇಕು. ಇನ್ನೊಂದು ವಾರದಲ್ಲಿ ಹೊಸ ಅಂಗನವಾಡಿ ಕಟ್ಟಡ ಕಾರ್ಯಾರಂಭಗೊಳ್ಳದಿದ್ದರೆ ಅಧಿಕಾರಿಗಳು ಮತ್ತು ಜನಪ್ರತಿನಿಗಳ ವಿರುದ್ಧ ಮಕ್ಕಳೊಡಗೂಡಿ ಪ್ರತಿಭಟನೆ ಮಾಡುವುದಾಗಿ ತಾರಮ್ಮ ಲಮಾಣಿ, ಗಂಗಮ್ಮ ಲಮಾಣಿ, ಮಹಾದೇವ ಮಾಳಗಿಮನಿ, ಲಕ್ಷ್ಮಣ ಪೂಜಾರ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next