Advertisement

ತಪ್ಪದ ಕುಡಿಯುವ ನೀರಿನ ಗೋಳು

03:32 PM Apr 25, 2019 | Team Udayavani |

ಬನಹಟ್ಟಿ: ನೇಕಾರರ ನಗರವಾಗಿರುವ ರಬಕವಿ-ಬನಹಟ್ಟಿ ಅವಳಿ ನಗರಕ್ಕೆ ನೀರು ಸವಾಲಾಗಿ ಕಾಡುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಸಮರ್ಪಕವಾಗಿ ನೀರು ಪೂರೈಕೆಯಲ್ಲಿ ಸಾಕಷ್ಟು ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗದೆ ‘ಬಕಾಸುರನ ಹೊಟ್ಟೆಗೆ ಅರೆಕಾಸು ಮಜ್ಜಿಗೆ’ಯಂತಾಗಿದೆ.

Advertisement

ಒಂದು ಕಡೆಗೆ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದರೆ, ಮತ್ತೂಂದು ಕಡೆಗೆ ನೀರಿಗಾಗಿ ಸಾರ್ವಜನಿಕರು ಸಾಕಷ್ಟು ಪರದಾಡುತ್ತಿದ್ದಾರೆ. ರಬಕವಿ-ಬನಹಟ್ಟಿಯ ಬಹುತೇಕ ಕಡೆಗಳಲ್ಲಿ ಸಾರ್ವಜನಿಕರು ನೀರಿಗಾಗಿ ಹಗಲು ರಾತ್ರಿ ಉದ್ಯೋಗ ಬಿಟ್ಟು ಓಡಾಡುವಂತಾಗಿದೆ.

ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ರಬಕವಿ-ಬನಹಟ್ಟಿ ನಗರವು 31 ವಾರ್ಡ್‌ಗಳನ್ನು ಹೊಂದಿದೆ. ನಗರದ ಗುಡ್ಡದ ಪ್ರದೇಶದ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ತೀವ್ರಗತಿಯಲ್ಲಿದ್ದು, ನೀರಿಗಾಗಿ ಹರಸಾಹಸಪಡಬೇಕಾದ ಸ್ಥಿತಿ ಎದುರಾಗಿದೆ. ನಗರಸಭೆಯವರು ಅಲ್ಲಲ್ಲಿ ಬೋರವೆಲ್ ಹಾಕಿಸಿದ್ದರೂ ನಿರಂತರವಾಗಿ ಒಂದು ಗಂಟೆ ಪೂರೈಸಿದರೆ ಮೂರು ಗಂಟೆ ಬಂದ್‌ ಆಗುತ್ತವೆ. ಇದರಿಂದ ಸಾವಿರಾರು ಕುಟುಂಬಗಳಿಗೆ ನೀರಿನ ಕೊರತೆ ಉಂಟಾಗುತ್ತಿದೆ. ನಗರದ 12ನೇ ವಾರ್ಡ್‌ನ ಚೌಡೇಶ್ವರ ಓಣಿ, ಪ್ರಭುದೇವರ ಗುಡಿ ಹತ್ತಿರ ಸರಿಯಾದ ಬೋರವೆಲ್ ಇಲ್ಲದೇ ಅಲ್ಲಿನ ನಿವಾಸಿಗಳು ಖಾಸಗಿ ಬೋರವೆಲ್ ಮಾಲೀಕರ ಮೋರೆ ಹೋಗಬೇಕಾಗಿದೆ. ಪ್ರತಿ ನಿತ್ಯ ನೀರು ಕೊಡುವುದರಿಂದ ನಮಗೆ ಸ್ವಲ್ಪ ಮಟ್ಟಿನ ನೀರಿನ ಸಮಸ್ಯೆ ನೀಗಬಹುದು. ಆದರೆ ಈ ನೀರು ಸಾಲುವುದಿಲ್ಲ. ಇದಕ್ಕೆ ಪರಿಹಾರವಾಗಿ ಇಲ್ಲಿ ಒಂದು ಬೋರವೆಲ್ ಹಾಕಿಸಬೇಕು ಎನ್ನುವುದು ಅವರ ವಾದವಾಗಿದೆ. ಈ ಕುರಿತು ಸ್ಥಳಿಯ ವಾರ್ಡ್‌ ಸದಸ್ಯರನ್ನು ಕೇಳಿದಾಗ ನನಗೆ ಅಧಿಕಾರವೇ ಇನ್ನೂ ಬಂದಿಲ್ಲ, ನಾನೇನು ಮಾಡಲಿ ಎಂಬ ಹಾರಿಕೆ ಉತ್ತರ ನೀಡುತ್ತಾರೆ ಎಂದು ಅಲ್ಲಿನ ನಿವಾಸಿಗಳ ಆರೋಪವಾಗಿದೆ.

ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿರುವ ಕಾರಣ ಒಂದು ಹನಿಯೂ ನೀರಿಲ್ಲದೆ ನದಿ ಬಣಗುಡುತ್ತಿದೆ. ನೀರು ಪೂರೈಕೆ ಘಟಕವು ನೀರಿಲ್ಲದೆ ತನ್ನ ಕಾರ್ಯ ಸ್ಥಗಿತಗೊಳಿಸಿದೆ. ಜನತೆಯು ತೆರೆದ ಬಾವಿ ಹಾಗೂ ಕೊಳವೆ ಬಾವಿಗಳ ಮೊರೆ ಹೋಗಿದ್ದು, ಅಂತರ್ಜಲಮಟ್ಟ ಕುಸಿಯುತ್ತಿರುವ ಕಾರಣ. ಎಲ್ಲ ಕೊಳವೆಬಾವಿಗಳೂ ಸಹಿತ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಅರ್ಧ ಗಂಟೆ ಕೆಲವಡೆ ಒಂದು ಗಂಟೆ ಮಾತ್ರ ನೀರು ಪೂರೈಕೆಯಾಗುತ್ತಿವೆ. ಹೀಗಿರುವಾಗ ಗುಡ್ಡಗಾಡು ಪ್ರದೇಶದ ಜನತೆ ನೀರಿಗಾಗಿ ಉದ್ಯೋಗವನ್ನೇ ಬಿಡುವಂತಾಗಿದೆ.

ರಸ್ತೆಯ ಮೇಲೆ ಖಾಲಿ ಕೊಡಗಳು: ಅವಳಿ ನಗರಾದ್ಯಂತ ಖಾಲಿ ಕೊಡಗಳು ಅಲ್ಲಲ್ಲಿ ಕೊಳವೆ ಬಾವಿಗಳ ಮುಂದೆ ಸರದಿಯಂತೆ ಕಿ.ಮೀ.ವರೆಗೆ ಇರುತ್ತವೆ. ರಸ್ತೆಯ ಮೇಲೆ ವಾಹನ ಬಿಡಿ ಪಾದಚಾರಿಗಳಿಗೂ ಸಹಿತ ಕೊಡಗಳು ತೊಂದರೆಯಾಗುತ್ತಿವೆ. ಕೆಲ ಪ್ರದೇಶಗಳಲ್ಲಿನ ರಸ್ತೆಗಳಿಗಂತೂ ಸಂಚಾರಕ್ಕೆ ನಿರ್ಬಂದ ಹೇರಲಾಗಿದೆ.

Advertisement

ಸ್ಥಳೀಯ ಗುಡ್ಡದ ಪ್ರದೇಶದಲ್ಲಿ ನೀರಿನ ಸಮಸ್ಯೆ ಬಹಳಷ್ಟಿದೆ. ಈಗ ಚುನಾವಣೆ ಮುಕ್ತಾಯಗೊಂಡಿದೆ. ಇನ್ನಾದರೂ ಕೊಯ್ನಾ ಜಲಾಶಯದಿಂದ ನೀರು ಬಿಡಿಸುವಲ್ಲಿ ಜನಪ್ರತಿನಿಧಿಗಳು ಪ್ರಯತ್ನ ಮಾಡಬೇಕು.

ಸ್ಥಳೀಯ ತಟಗಾರ ಲೇನ್‌ ಹತ್ತಿರದ ಕೊಳವೆ ಬಾವಿ ಒಂದು ಗಂಟೆ ನೀರು ನೀಡುತ್ತದೆ. ನಂತರ ಮೂರು ಗಂಟೆಗಳ ಕಾಲ ಕೊಳವೆ ಬಾವಿಯನ್ನು ಬಂದ್‌ ಮಾಡಬೇಕು. ಅಂತರಜಲ ಮಟ್ಟ ಕಡಿಮೆಯಾಗಿರುವುದರಿಂದ ನೀರು ದೊರೆಯುತ್ತಿಲ್ಲ. ನಗರಸಭೆಯವರು ಬಹುತೇಕ ಕಡೆಗಳಲ್ಲಿ ನೀರಿನ ಸಮಸ್ಯೆಯನ್ನು ನೀಗಿಸುವ ಸಲುವಾಗಿ ಟ್ಯಾಂಕ್‌ ವ್ಯವಸ್ಥೆ ಮಾಡಿದ್ದಾರೆ. ಆದರೆ ಈ ಟ್ಯಾಂಕ್‌ಗಳಲ್ಲಿರುವ ನೀರು ಸಾಲುತ್ತಿಲ್ಲ. ಈಗ ಚುನಾವಣೆ ಮುಕ್ತಾಯಗೊಂಡಿದೆ. ಇನ್ನಾದರೂ ಕೊಯ್ನಾ ಜಲಾಶಯದಿಂದ ನೀರು ಬಿಡಿಸುವಲ್ಲಿ ಜನಪ್ರತಿನಿಧಿಗಳು ಪ್ರಯತ್ನ ಮಾಡಬೇಕು.

ನಗರಸಭೆಯು ಕೊಳವೆ ಬಾವಿಗಳನ್ನು ತೋಡಿ ಅಲ್ಲಲ್ಲಿ ನೀರು ಪೂರೈಕೆಗೆ ಅನುಕೂಲ ಮಾಡಿದ್ದರೂ ಹಾಹಾಕಾರ ತಪ್ಪಿಲ್ಲ. ಹಲವಾರು ಕೊಳವೆ ಬಾವಿ ಕೊರೆಸುವ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next